ಹಾವೇರಿ: ರಾಜ್ಯದಾದ್ಯಂತ ಜಿಲ್ಲಾ ಪಂಚಾಯಿತಿ (ಜಿ.ಪಂ.) ಹಾಗೂ ತಾಲ್ಲೂಕು ಪಂಚಾಯಿತಿ (ತಾ.ಪಂ.) ಚುನಾವಣೆ ನಡೆಸಲು ಹೈಕೋರ್ಟ್ ಸಮ್ಮತಿ ಸೂಚಿಸಿರುವ ಬೆನ್ನಲ್ಲೇ, ಚುನಾವಣೆ ಘೋಷಣೆಗೆ ದಿನಗಣನೆ ಶುರುವಾಗಿದೆ.

ಕಾಂಗ್ರೆಸ್– ಬಿಜೆಪಿ ಉಭಯ ಪಕ್ಷದಲ್ಲಿರುವ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.

ಜಿ.ಪಂ. ಹಾಗೂ ತಾ.ಪಂ. ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಿ ಮೂರುವರೆ ವರ್ಷವಾಗಿದ್ದು, ಇದುವರೆಗೂ ಚುನಾವಣೆ ನಡೆದಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಜನಪ್ರತಿನಿಧಿಗಳ ಕೊರತೆ ಕಾಡುತ್ತಿದೆ. ಕ್ಷೇತ್ರಗಳ ಮೀಸಲಾತಿ ಹಾಗೂ ಚುನಾವಣೆ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಚುನಾವಣೆ ಪ್ರಕ್ರಿಯೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಹೈಕೋರ್ಟ್ ಸೂಚನೆಯಂತೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಪ್ರಕಟಗೊಂಡಿದ್ದ ಮೀಸಲಾತಿಯಲ್ಲಿ ಬದಲಾವಣೆ ಆಗುವ ಸಂಭವ ಹೆಚ್ಚಿದೆ.

ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕೆಲ ಆಕಾಂಕ್ಷಿಗಳು, ಟಿಕೆಟ್ಗಾಗಿ ಮುಖಂಡರ ದುಂಬಾಲು ಬಿದ್ದಿದ್ದಾರೆ. ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ತಾವೇ ಅಭ್ಯರ್ಥಿ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿರುವ ಆಕಾಂಕ್ಷಿಗಳು, ಅದಕ್ಕೆ ತಕ್ಕಂತೆ ಬೆಂಬಲಿಗರ ಪಡೆಯನ್ನೂ ಕಟ್ಟುತ್ತಿದ್ದಾರೆ.

ಹೋರಿ ಬೆದರಿಸುವ ಸ್ಪರ್ಧೆ, ಕ್ರಿಕೆಟ್, ಗಾಡಾ ಓಡಿಸುವ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಯುವಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ದೇವಸ್ಥಾನಗಳ ಕಾರ್ಯಕ್ರಮ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಿಗೂ ದೇಣಿಗೆ ನೀಡುತ್ತಿರುವ ಆಕಾಂಕ್ಷಿಗಳು, ಆಯೋಜಕರಿಂದ ಸನ್ಮಾನ ಮಾಡಿಸಿಕೊಂಡು ಮತಯಾಚನೆ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಪ್ರತಿ ಕ್ಷೇತ್ರದಲ್ಲೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಶಾಸಕರು ಹಾಗೂ ಮುಖಂಡರನ್ನು ಸಂಪರ್ಕಿಸುತ್ತಿರುವ ಆಕಾಂಕ್ಷಿಗಳು, ತಮ್ಮ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಈ ಬಾರಿ ಟಿಕೆಟ್ ನೀಡುವಂತೆಯೂ ಕೋರುತ್ತಿದ್ದಾರೆ. ‘ನೋಡೋಣ’ ಎನ್ನುತ್ತ ಆಕಾಂಕ್ಷಿಗಳನ್ನು ಸಮಾಧಾನಪಡಿಸುತ್ತಿರುವ ಮುಖಂಡರು, ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ 34 ಜಿ.ಪಂ. ಹಾಗೂ 122 ತಾ.ಪಂ. ಕ್ಷೇತ್ರಗಳಿವೆ. ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲ ಕಡೆಯೂ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಹೀಗಾಗಿ, ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿವೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ‘ಕಮಲ’ದ ಶಕ್ತಿ ಪ್ರದರ್ಶನ ಮಾಡಲು ಬಿಜೆಪಿ ಸಹ ತಯಾರಿ ನಡೆಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮೂಲಕ ಜನರ ಗಮನ ಸೆಳೆಯಲು ಮುಖಂಡರು ಮುಂದಾಗಿದ್ದಾರೆ. ಬಿಜೆಪಿ ಕೈಗೊಂಡಿರುವ ಜನಾಕ್ರೋಶದ ಯಾತ್ರೆ ಜಿಲ್ಲೆಗೆ ಬರಲಿದೆ. ಇದು, ಜಿ.ಪಂ.–ತಾ.ಪಂ. ಚುನಾವಣೆ ತಯಾರಿಯ ಮುನ್ಸೂಚನೆಯೆಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ಶಾಸಕರ ನೇತೃತ್ವದಲ್ಲಿ ಸಭೆ: ‘ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂಬುದಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು, ಜಿಲ್ಲಾವಾರು ಸಚಿವರಿಗೆ ಚುನಾವಣೆ ಹೊಣೆ ವಹಿಸಿದ್ದಾರೆ.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಶಾಸಕರ ನೇತೃತ್ವದಲ್ಲಿ ಇದೇ ತಿಂಗಳ ಅಂತ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

‘ಬಿಜೆಪಿ ಶಾಸಕ ಮುಕ್ತ ಜಿಲ್ಲೆ ಹಾವೇರಿ. ಜಿ.ಪಂ.–ತಾ.ಪಂ. ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಂಗ್ರೆಸ್ ಗೆಲ್ಲುವ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ರಾಜ್ಯ ಸರ್ಕಾರ ಮಾಡಿರುವ ಯೋಜನೆಗಳನ್ನು ಜನರ ಮುಂದಿಟ್ಟು, ಮತ ಕೇಳುತ್ತೇವೆ. ಮುಂಬರುವ ದಿನಗಳಲ್ಲಿ ಎಪಿಎಂಸಿ. ಪಿಎಲ್ಡಿ ಬ್ಯಾಂಕ್, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಚುನಾವಣೆಗಳೂ ಬರಲಿದೆ. ಹೀಗಾಗಿ, ಜಿ.ಪಂ. – ತಾ.ಪಂ. ಚುನಾವಣೆಗಳು ಮಹತ್ವದ್ದಾಗಿವೆ’ ಎಂದರು.

ಬಿಜೆಪಿ ಸಿದ್ಧ: ‘ಯಾವುದೇ ಚುನಾವಣೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಜ್ಜಾಗಿದೆ. ಜಿ.ಪಂ.–ತಾ.ಪಂ. ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ‘ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು.

ಜಿ.ಪಂ.–ತಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತಿದೆ
ಪರಮೇಶ್ವರಪ್ಪ ಮೇಗಳಮನಿ ಬಿಜೆಪಿ ಜಿಲ್ಲಾ ವಕ್ತಾರ

ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿಯೂ ಪಕ್ಷವನ್ನು ಬಲಪಡಿಸಲಾಗುವುದು
ಸಂಜೀವಕುಮಾರ ನೀರಲಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.