ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಜಿ. ಸೆಂಟರ್‌ ಸಮಗ್ರ ಅಭಿವೃದ್ಧಿಗೆ ಒತ್ತು

ಮಕ್ಕಳ ಹಾಜರಾತಿ ಹೆಚ್ಚಳ ಮತ್ತು ಕಾಯಂ ಶಿಕ್ಷಕರ ನೇಮಕಕ್ಕೆ ಒತ್ತು: ಪ್ರೊ.ಕೆ.ಬಿ.ಗುಡಸಿ
Last Updated 25 ಫೆಬ್ರುವರಿ 2021, 13:57 IST
ಅಕ್ಷರ ಗಾತ್ರ

ಹಾವೇರಿ: ‘ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಮಾದರಿಯಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯ ಹಾವೇರಿ, ಗದಗ ಹಾಗೂ ಕಾರವಾರದ ಸ್ನಾತಕೋತ್ತರ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ತಿಳಿಸಿದರು.

ತಾಲ್ಲೂಕಿನ ಕೆರಿಮತ್ತಿಹಳ್ಳಿಯ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ನಾತಕೋತ್ತರ ಕೇಂದ್ರಗಳ ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿನ ಕೊರತೆಗಳನ್ನು ಅರಿಯಲು ಮುಖ್ಯ ಕ್ಯಾಂಪಸ್‍ನಿಂದ ಹೊರಗಡೆ ಸಿಂಡಿಕೇಟ್ ಸಭೆಗಳನ್ನು ನಡೆಸಲಾಗುತ್ತಿದೆ. ಸ್ಥಳೀಯ ಅವಶ್ಯಕತೆಗಳಿನುಗುಣವಾಗಿ ಸ್ನಾತಕೋತ್ತರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮುಖ್ಯ ಕ್ಯಾಂಪಸ್‍ನ ಮಾದರಿಯಲ್ಲಿ ಎಲ್ಲ ಕೇಂದ್ರಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕ್ರೀಡಾಂಗಣ ನಿರ್ಮಾಣ:

ಹಾವೇರಿಯ ಸ್ನಾತಕೋತ್ತರ ಕೇಂದ್ರದ ಶೈಕ್ಷಣಿಕ ಬೆಳವಣಿಗೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಶೀಘ್ರವೇ ಇಲ್ಲಿನ ಸಂಸದರು, ಶಾಸಕರನ್ನು ಆಹ್ವಾನಿಸಿ ಪ್ರತ್ಯೇಕ ಸಭೆ ನಡೆಸಲಾಗುವುದು. ಕೇಂದ್ರವು ಕಟ್ಟಡ, ವಸತಿನಿಲಯ, ಗ್ರಂಥಾಲಯ ಸೇರಿದಂತೆ ಉತ್ತಮ ಮೂಲಸೌಕರ್ಯ ಹೊಂದಿದೆ. ಕ್ರೀಡಾಂಗಣದ ಕೊರತೆ ಕಂಡುಬಂದಿದೆ. ಶೀಘ್ರವೇ ಆಟದ ಮೈದಾನ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದರು.

ಸ್ಥಳೀಯ ಸಂಸದರು, ಶಾಸಕರ ಅನುದಾನ ಕ್ರೋಡೀಕರಿಸಿ ಕ್ರೀಡಾಂಗಣ ನಿರ್ಮಿಸಲಾಗುವುದು. ಈಗಾಗಲೇ ಸಂಸದರು, ಶಾಸಕರು ಅನುದಾನ ನೀಡುವ ವಾಗ್ದಾನ ನೀಡಿದ್ದಾರೆ. ಜೊತೆಗೆ ವಿಶ್ವವಿದ್ಯಾಲಯವು ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಒದಗಿಸಲಿದೆ ಎಂದು ತಿಳಿಸಿದರು.

ಮಹಿಳಾ ಹಾಸ್ಟೆಲ್‌:

ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಪುರುಷರ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಇದೀಗ ಮಹಿಳಾ ವಸತಿ ನಿಲಯದ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರವೇ ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.

ಹಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರವೇಶಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ‘ಕೋವಿಡ್‌ ಸೇರಿದಂತೆ ಇತರ ಕಾರಣಗಳಿಂದ ಪ್ರವೇಶಾತಿ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಬಸ್‌ ಸೌಲಭ್ಯ ಕಲ್ಪಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದರು.

ಹಾವೇರಿ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ ದೃಷ್ಟಿಯಿಂದ ಇಂದು ನಡೆಯುತ್ತಿರುವ ವಿವಿಯ ಸಿಂಡಿಕೇಟ್ ಸಭೆ ಮಹತ್ವದ್ದಾಗಿದೆ. ಕೇಂದ್ರದ ಶೈಕ್ಷಣಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲ ಕ್ರಮಗಳ ಕುರಿತಂತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಪ್ರೊ.ಕೆ.ಟಿ.ಹನುಮಂತಪ್ಪ, ಕುಲಸಚಿವ (ಮೌಲ್ಯಮಾಪನ) ಪ್ರೊ.ರವೀಂದ್ರನಾಥ ಎನ್.ಕದಂ, ಪಿ.ಜಿ. ಸೆಂಟರ್‌ ಆಡಳಿತಾಧಿಕಾರಿ ಡಾ.ಟಿ.ಎಂ.ಭಾಸ್ಕರ್‌, ಸಿಂಡಿಕೇಟ್ ಸದಸ್ಯರಾದ ಡಾ.ಕಲ್ಮೇಶ ಹಾವೇರಿಪೇಟ,ಪಿ.ಜಿ.ಸೆಂಟರ್ ಪ್ರಭಾರ ಆಡಳಿತಾಧಿಕರಿ ಪ್ರಶಾಂತ ಎಚ್.ವೈ, ಡಾ.ವಿಶ್ವನಾಥ ಚಿಂತಾಮಣಿ, ಡಾ.ಚಿದಾನಂದ ಕಮ್ಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT