ಮಂಗಳವಾರ, ಜನವರಿ 31, 2023
19 °C
ಅಕ್ಕಿಆಲೂರಿನಲ್ಲಿ ಪ್ರಜಾವಾಣಿ ಅಮೃತ ಮಹೋತ್ಸವ ಸಂಭ್ರಮ

ಪ್ರಜಾವಾಣಿ@75: 75 ಸಹೃದಯಿಗಳಿಂದ ರಕ್ತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ಕನ್ನಡ ದಿನಪತ್ರಿಕೆ ಪ್ರಜಾವಾಣಿಯ ಅಮೃತ ಮಹೋತ್ಸವ ಹಾಗೂ ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿರಡಿ ಸಾಯಿಬಾಬಾ ಮಂದಿರದ ಲೋಕಾರ್ಪಣೆ, ಅಮೃತ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಅಂಗವಾಗಿ ಬುಧವಾರ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 76 ಜನ ರಕ್ತದಾನ ಮಾಡುವ ಮೂಲಕ, ಪ್ರಜಾವಾಣಿಯ ಅಮೃತ ಮಹೋತ್ಸವದ ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾದರು.

ಜಿಲ್ಲಾ ಆಸ್ಪತ್ರೆಯ ಜಿಲ್ಲಾ ರಕ್ತಕೇಂದ್ರ, ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಹಾಗೂ ಎಚ್‍ಡಿಎಫ್‍ಸಿ ಬ್ಯಾಂಕಿನ ಹಾವೇರಿಯ ಶಾಖೆಯ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಸಹೃದಯಿಗಳು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನದ ಮಾನವೀಯ ಕಾರ್ಯದಲ್ಲಿ ಭಾಗಿಗಳಾದರು.

ಶಿಬಿರ ಉದ್ಘಾಟಿಸಿದ ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಅಕ್ಕಿಆಲೂರಿನಲ್ಲಿ ರಕ್ತದಾನ ಪ್ರತಿ ಮನೆ, ಮನಗಳ ಸಂಪ್ರದಾಯವಾಗಿದ್ದು, ಇಡೀ ಜಿಲ್ಲೆಗೆ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರಕ್ತದ ಪೈಕಿ ಶೇ. 35 ರಿಂದ 40 ರಷ್ಟನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ರಕ್ತದಾನದಿಂದ ಸಿಗುವ ತೃಪ್ತಿ ಬೇರೆ ಯಾವುದರಿಂದಲೂ ಸಿಗದು. ಅಕ್ಕಿಆಲೂರ ಭಾಗದಲ್ಲಿ 6 ಸಾವಿರಕ್ಕೂ ಹೆಚ್ಚು ರಕ್ತದಾನಿಗಳಿದ್ದು, ನಿಯಮಿತವಾಗಿ ರಕ್ತದಾನ ಮಾಡುವ ಪದ್ಧತಿ ರೂಢಿಸಿಕೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ರಕ್ತಕೇಂದ್ರದ ಡಾ.ಬಸವರಾಜ ತಳವಾರ ಮಾತನಾಡಿ, ರಕ್ತ ಹಣ ಕೊಟ್ಟು ಖರೀದಿಸುವಂಥದ್ದಲ್ಲ. ಸಹೃದಯಿಗಳು ದಾನ ಮಾಡಿದರಷ್ಟೇ ರಕ್ತ ಸಿಗಲಿದ್ದು, ತುರ್ತು ಸಂದರ್ಭಗಳಲ್ಲಿ ಅಮೂಲ್ಯ ಜೀವ ಉಳಿಸಲಿದೆ. ರಕ್ತದಾನದ ಬಗೆಗೆ ಇನ್ನಷ್ಟು ಜಾಗೃತಿ ಮೂಡಬೇಕಿದೆ. ರಕ್ತದಾನದಿಂದ ಸಾಕಷ್ಟು ಪ್ರಯೋಜನಗಳಿದ್ದು, ಒತ್ತಡ ರಹಿತ ಜೀವನ ಸಾಗಿಸಬಹುದಾಗಿದೆ. ಸಾತ್ವಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಸಾಗಿಸುವಂತೆ ಕರೆ ನೀಡಿದರು.

ಪ್ರಜಾವಾಣಿಯ ಜಾಹೀರಾತು ಪ್ರತಿನಿಧಿ ಅಮಿತ್ ಶೇಠ ಮಾತನಾಡಿ, ಕನ್ನಡಿಗರ ಅಚ್ಚುಮೆಚ್ಚಿನ ದಿನಪತ್ರಿಕೆ ಪ್ರಜಾವಾಣಿ ಈಗ ಅಮೃತ ಮಹೋತ್ಸವಕ್ಕೆ ಕಾಲಿಟ್ಟಿದೆ. ಅಮೃತ ಮಹೋತ್ಸವದ ನೆಪದಲ್ಲಿ ಸಾಮಾಜಿಕ ಸೇವಾ ಚಟುವಟಿಕೆ ಆಯೋಜಿಸಲು ನಿರ್ಧರಿಸಲಾಗಿದ್ದು, ಮೊದಲ ಭಾಗವಾಗಿ ಅಕ್ಕಿಆಲೂರಿನಲ್ಲಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಜಿಲ್ಲೆಯ ಬೇರೆ ಬೇರೆ ನಗರಗಳಲ್ಲಿಯೂ ಸಹ ಶಿಬಿರ ಆಯೋಜಿಸುವ ಉದ್ದೇಶವಿದೆ ಎಂದರು.

ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಯಿಮಂದಿರದ ಧರ್ಮದರ್ಶಿ ಶಾಂತಯ್ಯಶಾಸ್ತ್ರಿ ಹಿರೇಮಠ, ಸ್ನೇಹಮೈತ್ರಿ ಬ್ಲಡ್ ಆರ್ಮಿಯ ಕರಬಸಪ್ಪ ಗೊಂದಿ, ಪ್ರಜಾವಾಣಿ ಜಿಲ್ಲಾ ವರದಿಗಾರ ಸಿದ್ದು ಆರ್.ಜಿ.ಹಳ್ಳಿ, ಅಕ್ಕಿಆಲೂರ ವರದಿಗಾರ್ತಿ ಸುರೇಖಾ ಪೂಜಾರ, ಹಾನಗಲ್ ವರದಿಗಾರ ಮಾರುತಿ ಪೇಟಕರ್, ಬಸವರಾಜ ಕಮತದ, ರಾಜೇಶ ತೇಲಗಿ ಸೇರಿದಂತೆ ಮುಂತಾದವರು ಇದ್ದರು.

***

ವಿಶ್ವಾಸಾರ್ಹ ಸುದ್ದಿಗಳಿಂದ ಮನೆಮಾತಾಗಿರುವ ಪ್ರಜಾವಾಣಿ ಅಮೃತ ಮಹೋತ್ಸವದ ಸಡಗರದಲ್ಲಿದೆ. ಈ ಸಂದರ್ಭದಲ್ಲಿ ರಕ್ತದಾನ ಶಿಬಿರಗಳಂಥ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿರುವುದು ಸ್ತುತ್ಯಾರ್ಹ
– ಶಿವಬಸವ ಸ್ವಾಮೀಜಿ, ವಿರಕ್ತಮಠ, ಅಕ್ಕಿಆಲೂರ

***

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.