ಗುರುವಾರ , ಜನವರಿ 27, 2022
21 °C
15ರಿಂದ 18 ವರ್ಷದೊಳಗಿನವರಿಗೆ ಕೋವಿಡ್ ಲಸಿಕಾಕರಣಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಚಾಲನೆ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕೋವಿಡ್-19 ಮೂರನೆ ಅಲೆ ಎದುರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ 15 ರಿಂದ 18 ವರ್ಷದೊಳಗಿನ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 77,677 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಯಾವುದೇ ಭಯವಿಲ್ಲದೆ ಲಸಿಕೆ ಪಡೆದುಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಲಸಿಕೆ ನೀಡಲಾಗುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಲಸಿಕೆ ನೀಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.

ಎರಡನೇ ಅಲೆಯಲ್ಲಿ ಹೋಂ ಕ್ವಾರಂಟೈನ್‌ಗೆ ಅವಕಾಶ ನೀಡಲಾಯಿತು. ವೈದ್ಯರ ಚೀಟಿಗಳಿಲ್ಲದೆ ಔಷಧ ಅಂಗಡಿಗಳಲ್ಲಿ ಮಾತ್ರೆಗಳನ್ನು ನೀಡಲಾಯಿತು. ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಿ, ಉಸಿರಾಟದ ತೊಂದರೆಯಾದಾಗ ಆಸ್ಪತ್ರೆಗಳಿಗೆ ಬಂದರು. ಈ ಎಲ್ಲ ಕಾರಣಗಳಿಂದ ಜಿಲ್ಲೆಯಲ್ಲಿ 650 ಜನರು ಕೋವಿಡ್‌ನಿಂದ ಮೃತಪಟ್ಟರು ಎಂದು ಹೇಳಿದರು. 

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 11.79 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹಾಕಿಕೊಂಡು 11,31,036 (ಶೇ 96)ಜನರಿಗೆ ಹಾಗೂ 8,66,855 (ಶೇ 74)ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ 2,13,380 ಡೋಸ್ ಕೋವಿಶೀಲ್ಡ್‌ ಹಾಗೂ 97,250 ಡೋಸ್ ಕೋವ್ಯಾಕ್ಸಿನ್ ಸೇರಿ 3,10,630 ಡೋಸ್ ಲಸಿಕೆ ದಾಸ್ತಾನು ಲಭ್ಯವಿದೆ ಎಂದರು. 

ಶಾಸಕ ನೆಹರು ಓಲೇಕಾರ ಮಾತನಾಡಿದರು. ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.