ಸೋಮವಾರ, ಆಗಸ್ಟ್ 15, 2022
21 °C
ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

‘ಕಾರ್ಖಾನೆಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಾರ್ಖಾನೆಗಳಲ್ಲಿ ರಾಸಾಯನಿಕ ಅವಘಡಗಳು ಸೇರಿದಂತೆ ಆಕಸ್ಮಿಕ ವಿಪತ್ತುಗಳು ಎದುರಾದಾಗ ತುರ್ತು ಸ್ಪಂದನೆ ಹಾಗೂ ಪರಿಹಾರ ಕ್ರಮಗಳ ಕುರಿತಂತೆ ಪ್ರಾಯೋಗಿಕ ಅರಿವು ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಅವಘಡಗಳು ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತಂತೆ ಎಲ್ಲ ಕಾರ್ಖಾನೆಗಳು ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಬೇಕು. ಕಾರ್ಖಾನೆಗಳಲ್ಲಿರುವ ಅಪಾಯಕಾರಿ ಘಟಕವನ್ನು ನಿತ್ಯ ನಿರ್ವಹಣೆಯ ಗರಿಷ್ಠ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

‌ಕಾರ್ಖಾನೆಗಳಲ್ಲಿ ರಾಸಾಯನಿಕ ಅವಘಡಗಳು ಒಳಗೊಂಡಂತೆ ವಿಪತ್ತುಗಳು ಘಟಿಸಿದಾಗ ತುರ್ತು ಸಂದರ್ಭಗಳನ್ನು ಎದುರಿಸುವಾಗ ವಿವಿಧ ಇಲಾಖೆಗಳ ಸಮನ್ವಯತೆ ಅವಶ್ಯ. ತುರ್ತು ಸ್ಪಂದನೆ, ಪರಿಹಾರ ಕ್ರಮಗಳನ್ನು ಕೈಗೊಳ್ಳುವಾಗ ಯಾವ ಇಲಾಖೆಗೆ ಯಾವ ಹೊಣೆಗಾರಿಕೆ ಇದೇ ಎಂಬುದು ಪ್ರತಿಯೊಂದು ಇಲಾಖೆಯ ಅಧಿಕಾರಿಗಳಿಗೆ ಅರಿವಿರಬೇಕು. ಇದರೊಂದಿಗೆ ಸಾರ್ವಜನಿಕರಿಗೂ ಜಾಗೃತಿ ಅವಶ್ಯ ಎಂದರು. 

ಕಾರ್ಖಾನೆ ಸೇರ್ಪಡೆ:

ಅಪಾಯಕಾರಿ ಕಾರ್ಖಾನೆಗಳ ವಯಲಗಳಿಗೆ ಸಕ್ಕರೆ ಕಾರ್ಖಾನೆ, ಅಂಬುಜಾ ಇಂಡಸ್ಟ್ರೀ, ಫಾಲಿಫೈಬರ್‌ ಇಂಡಸ್ಟ್ರಿ ಸೇರ್ಪಡೆ ಮಾಡಬೇಕು. ಈ ಕಾರ್ಖಾನೆಗಳಲ್ಲಿ ಕೈಗೊಂಡಿರುವ ಸುರಕ್ಷಾ ಕ್ರಮಗಳ ಕುರಿತಂತೆ ಪರಿಶೀಲಿಸಲು ಸೂಚನೆ ನೀಡಿದರು.

ಕಾರ್ಖಾನೆಗಳ ಹಾಗೂ ಬಾಯ್ಲರ್ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಹಾಗೂ ಗ್ರಾಸೀಂ ಕಾರ್ಖಾನೆಯ ಅಧಿಕಾರಿಗಳು ಜಿಲ್ಲೆಯಲ್ಲಿ ರಾಸಾಯನಿಕ ಅವಘಡಗಳ ಮುನ್ನೆಚ್ಚರಿಕೆ, ಸುರಕ್ಷಾ ಕ್ರಮಗಳ ಕುರಿತಂತೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಅಣುಕು ಪ್ರದರ್ಶನಗಳು, ಜಾಗೃತಿ ಕಾರ್ಯಕ್ರಮಗಳ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ.ದೇವರಾಜ ಎಸ್., ಪೌರಾಯುಕ್ತ ಪರಶುರಾಮ ಚಲವಾದಿ, ಸಾರಿಗೆ ಇಲಾಖೆಯ ಗುರುಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕವಿತಾ ಚಕ್ರಸಾಲಿ, ಅಗ್ನಿಶಾಮಕ ಇಲಾಖೆಯ ಬಿ.ವೈ. ತರುಣ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.