ಸೋಮವಾರ, ಏಪ್ರಿಲ್ 6, 2020
19 °C
ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆ: ತಹಶೀಲ್ದಾರ ಶಂಕರ್ ಸೂಚನೆ

ಪರೀಕ್ಷಾ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುವ ಹಾವೇರಿ ತಾಲ್ಲೂಕಿನ ಎಲ್ಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳು ಹಾಗೂ ವೈದ್ಯಕೀಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಶಂಕರ್ ಅವರು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸೂಕ್ತ ಆಸನದ ವ್ಯವಸ್ಥೆ, ವೈದ್ಯಕೀಯ ಸೇರಿದಂತೆ ಎಲ್ಲ ಮೂಲಸೌಕರ್ಯಗಳ ವ್ಯವಸ್ಥೆ ಕೈಗೊಳ್ಳುವಂತೆ ಸಲಹೆ ನೀಡಿದರು.

ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಿತ ಪ್ರದೇಶದಲ್ಲಿ ಯಾವುದೇ ಹೊರಗಿನ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಕ್ರಮವಹಿಸಬೇಕು. ಪ್ರೌಢಶಿಕ್ಷಣ ಮಂಡಳಿಯ ಮಾರ್ಗಸೂಚಿಯಂತೆ ಮಾರ್ಗಾಧಿಕಾರಿ, ಕೊಠಡಿ ಮೇಲ್ವಿಚಾರಕರನ್ನೊಳಗೊಂಡಂತೆ ನಿಯೋಜಿತ ಅಧಿಕಾರಿಗಳು ತಮಗೆ ವಹಿಸಿದ ಪರೀಕ್ಷಾ ಕೆಲಸಗಳನ್ನು ಅಚ್ಚುಕಟ್ಟಾಗಿ ಯಾವುದೇ ಲೋಪವಿಲ್ಲದಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೊಠಡಿಯೋಳಗೆ ವಿದ್ಯಾರ್ಥಿಗಳ ನಡುವೆ ಗರಿಷ್ಠ ಅಂತರವಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೊಬೈಲ್‌ಗಳಿಗೆ ಅವಕಾಶವಿಲ್ಲ

ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ನಿಷೇಧವಿರುವುದರಿಂದ ಒಳಗಡೆ ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ. ಈ ಉದ್ದೇಶಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಇವರ ಬಳಿ ವಿದ್ಯಾರ್ಥಿಗಳು ತಮ್ಮ ಫೋನ್‍ಗಳನ್ನು ನೀಡಬೇಕು. ಈ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದೊಳಗೆ ಪ್ರಾಥಮಿಕ ವೈದ್ಯಕೀಯ ಹೆಲ್ಪ್‌ಡೆಸ್ಕ್ ಹಾಗೂ ಕೇಂದ್ರಗಳ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು. ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಅವು ಸರಿಯಾಗಿವೇ ಇಲ್ಲವೇ ಎಂದು ಪರಿಶೀಲಿಸಬೇಕು. ನಕಲು ನಡೆಯುವುದನ್ನು ತಡೆಗಟ್ಟಬೇಕು ಎಂದರು. 

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಒಬ್ಬ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ನಗರದಲ್ಲಿರುವ ಸೇಂಟ್ ಆ್ಯನ್ಸ್‌ ಪ್ರೌಢಶಾಲೆಯ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಜಿಲ್ಲೆಯ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹಾಗಾಗಿ ಆ ಎರಡು ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳು ಎಂದು ಪರಿಗಣಿಸಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಮಾಹಿತಿ ನೀಡಿದರು.

3,623 ಪರೀಕ್ಷೆಗೆ 

ಈ ವರ್ಷ ಹಾವೇರಿ ತಾಲ್ಲೂಕಿನಲ್ಲಿ 69 ಶಾಲೆಯ 3,623 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1,605 ಗಂಡು ಹಾಗೂ 1,637 ಹೆಣ್ಣು ಮಕ್ಕಳು ಪರೀಕ್ಷೆ ಎದುರಿಸಲು ನೋಂದಾಯಿಸಿಕೊಂಡಿದ್ದಾರೆ. ಕನ್ನಡ ಮಾಧ್ಯಮದ 48 ಶಾಲೆಯ 1,144 ಗಂಡು ಹಾಗೂ 1,114 ಹೆಣ್ಣು ಮಕ್ಕಳು ಸೇರಿದಂತೆ 2,258 ವಿದ್ಯಾರ್ಥಿಗಳು, ಇಂಗ್ಲೀಷ್ ಮಾಧ್ಯಮದ 15 ಶಾಲೆಯ 395 ಗಂಡು ಹಾಗೂ 285 ಹೆಣ್ಣು ಮಕ್ಕಳು ಸೇರಿದಂತೆ 680 ವಿದ್ಯಾರ್ಥಿಗಳು, ಉರ್ದು ಮಾಧ್ಯಮದ 6 ಶಾಲೆಯ 66 ಗಂಡು ಹಾಗೂ 238 ಹೆಣ್ಣು ಮಕ್ಕಳು ಸೇರಿದಂತೆ 304 ವಿದ್ಯಾರ್ಥಿಗಳು ಹಾಗೂ ಖಾಸಗಿಯ 381 ಅಭ್ಯರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು. 

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್.ಭಗವಂತಗೌಡ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಪಿ.ಎಸ್.ಐ ಪ್ರಕಾಶ ನಂದಿ, ತಾಲ್ಲೂಕು ಪರೀಕ್ಷಾ ನೋಡಲ್‌ ಅಧಿಕಾರಿ ಸಿದ್ಧರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು