ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಮೂವರು ಆರೋಪಿಗಳು 5 ದಿನ ಪೊಲೀಸ್‌ ಕಸ್ಟಡಿಗೆ

ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ
Published 12 ಜನವರಿ 2024, 15:39 IST
Last Updated 12 ಜನವರಿ 2024, 15:39 IST
ಅಕ್ಷರ ಗಾತ್ರ

ಹಾನಗಲ್ (ಹಾವೇರಿ ಜಿಲ್ಲೆ): ನಾಲ್ಕರ ಕ್ರಾಸ್‌ ಸಮೀಪದ ಹೋಟೆಲ್‌ನಲ್ಲಿ ನಡೆದ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಪೊಲೀಸ್‌ ಬಂದೋಬಸ್ತ್‌ನಲ್ಲಿ ಶುಕ್ರವಾರ ಹಾವೇರಿಯ ಜಿಲ್ಲಾಸ್ಪತ್ರೆಗೆ ಕರೆತಂದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಮಾಹಿತಿ ಕಲೆ ಹಾಕಲು ದಾವಣಗೆರೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌.ಎಸ್‌.ಎಲ್‌) ಅಧಿಕಾರಿಗಳ ತಂಡ ಹಾನಗಲ್‌ಗೆ ಶುಕ್ರವಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.

ಸ್ಥಳ ಮಹಜರು:

ಆರೋಪಿಗಳು ಮಹಿಳೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದ ಕಾಡಂಚಿನ ಪ್ರದೇಶಗಳಿಗೆ, ಎಫ್.ಎಸ್‌.ಎಲ್‌ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳ ತಂಡ ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದರು.

ನಾಲ್ಕರ್‌ಕ್ರಾಸ್ ಬಳಿಯ ಹೋಟೆಲ್‌ ಮತ್ತು ಇದರ ಸಮೀಪದ ಬಾಳೂರ ಗ್ರಾಮ ಹೊರಭಾಗ, ಮಾವಕೊಪ್ಪ-ಶಿರಗೋಡ ರಸ್ತೆ, ಸಮ್ಮಸಗಿ ರಸ್ತೆ ಮಾರ್ಗವಾಗಿ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು. ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಶೀಲನಾ ಅಧಿಕಾರಿಗಳೊಂದಿಗೆ ಹಾನಗಲ್ ಸಿಪಿಐ ಶ್ರೀಧರ ಎಸ್.ಆರ್, ಪಿಎಸ್ಐ ಯಲ್ಲಪ್ಪ ಹಿರಗಪ್ಪನವರ, ಸಂಪತ್ ಆನಿಕಿವಿ ಇದ್ದರು.

5 ದಿನ ಪೊಲೀಸ್‌ ಕಸ್ಟಡಿಗೆ:

‘ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ನೀಡುವಂತೆ ಮನವಿ ಮಾಡಿದ ಮೇರೆಗೆ ಹಾನಗಲ್‌ ಹಿರಿಯ ಸಿವಿಲ್‌ ನ್ಯಾಯಾಧೀಶರು ಆರೋಪಿಗಳನ್ನು 5 ದಿನ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ’ ಎಂದು ಎಸ್ಪಿ ಅಂಶುಕುಮಾರ್‌ ತಿಳಿಸಿದರು.

ವಿಶೇಷ ತಂಡ ರಚನೆ:

‘7 ಆರೋಪಿಗಳಲ್ಲಿ ಮೂವರ ಬಂಧನವಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಒಬ್ಬ ಆರೋಪಿ ಬೈಕ್‌ ಅಪಘಾತದಲ್ಲಿ ಕಾಲು ಮುರಿದುಕೊಂಡು ಶಸ್ತ್ರಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು.

‘ನನ್ನ ಮಗ ಹುಡುಗಿಯರನ್ನು ಚುಡಾಯಿಸಿದವನಲ್ಲ’

‘ನನ್ನ ಮಗನಿಗೆ ಅವನ ಸ್ನೇಹಿತರು ಫೋನ್‌ ಮಾಡಿ ಕರೆದು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ನನ್ನ ಮಗನಿಗೆ ದುಶ್ಚಟಗಳಿಲ್ಲ, ಯಾವತ್ತೂ ಹುಡುಗಿಯರನ್ನು ಚುಡಾಯಿಸಿದವನಲ್ಲ. ತರಕಾರಿ ವ್ಯಾಪಾರ ಮಾಡುತ್ತಾನೆ. ಅವನು ಊರಲ್ಲಿ ಇರುವುದೇ ಕಡಿಮೆ. ಅಕ್ಕಿಆಲೂರು ಬಳಿ ಇರುವ ಬಾಳೂರು ಕ್ರಾಸ್‌ನಲ್ಲಿ ನನ್ನ ಮಗನಿಗೆ ಬೈಕ್‌ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಆರೋಪಿ ಮಹಮ್ಮದ್‌ ಸೈಫು ಅವರ ತಾಯಿ ಫೈರುನ್ನೀಸಾ ಅಳಲು ತೋಡಿಕೊಂಡರು.

ಹಾನಗಲ್‌ ಘಟನೆ ಅತ್ಯಂತ ಹೀನ ಕೃತ್ಯವಾಗಿದೆ. ಆರೋಪಿಗಳ ನಡವಳಿಕೆಯು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು
– ಯಾಸೀರ್‌ಅರಾಫತ್ ಮಕಾನದಾರ್, ‘

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT