ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ | ಕೆರೆಗಳಲ್ಲಿ ಹೂಳು; ನಿವಾಸಿಗಳ ಗೋಳು

ರಟ್ಟೀಹಳ್ಳಿ: ಕೆರೆಗೆ ಹರಿಯುವ ಕಲುಷಿತ ನೀರು, ದಂಡೆಯಲ್ಲಿ ಹರಡಿದ ಕಸದ ರಾಶಿ
Published 15 ಏಪ್ರಿಲ್ 2024, 3:59 IST
Last Updated 15 ಏಪ್ರಿಲ್ 2024, 3:59 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ‌ಜನ–ಜಾನುವಾರು, ಪ್ರಾಣಿ–ಪಕ್ಷಿಗಳಿಗೆ ನೀರಿನ ಮೂಲವಾಗಿದ್ದ ಪಟ್ಟಣದ ಶಿರಗಂಬಿ ರಸ್ತೆಗೆ ಹೊಂದಿಕೊಂಡಿರುವ ಚಕ್ರಗಟ್ಟಿ ಕೆರೆ ಹಾಗೂ ಹೊಸಬಸ್ ನಿಲ್ದಾಣದ ಪಕ್ಕದಲ್ಲಿರುವ ಕೆಂಗಟ್ಟಿ ಕೆರೆ ಸಮರ್ಪಕ ನಿರ್ವಹಣೆಯಿಲ್ಲದೆ ಹೂಳು ತುಂಬಿಕೊಂಡು, ಕಲುಷಿತ ನೀರು ಸೇರಿ ದುರ್ನಾತ ಬೀರುತ್ತಿವೆ.  

ಜಲಮೂಲವಾಗಿರುವ ಕೆರೆಗಳಲ್ಲಿ ಜನರು ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವ ಪರಿಣಾಮ ಅನೈರ್ಮಲ್ಯ ವಾತಾವರಣ ಉಂಟಾಗಿದೆ. ಪಟ್ಟಣದ ಕಸ-ತ್ಯಾಜ್ಯಗಳನ್ನು ಕೆರೆಯಲ್ಲಿ ಹಾಗೂ ಕೆರೆಯ ದಂಡೆಯ ಮೇಲೆ ಸುರಿಯುವುದರಿಂದ ಕೆರೆಯ ಪರಿಸರ ಹಾಳಾಗಿದೆ.

ಕೆರೆ ಹೂಳು ತೆಗೆದು, ತ್ಯಾಜ್ಯವನ್ನು ವಿಲೇವಾರಿ ಮಾಡಿ, ಸ್ವಚ್ಛತೆ ಕಾಪಾಡಿದರೆ ಬೇಸಿಗೆ ಸಂದರ್ಭದಲ್ಲಿ ಜನ–ಜಾನುವಾರುಗಳಿಗೆ ನೀರಿನ ಮೂಲವಾಗುತ್ತವೆ. ಆದರೆ, ಅಧಿಕಾರಿಗಳ ನಿಷ್ಕಾಳಜಿ ಮತ್ತು ಜನರ ಅಸಡ್ಡೆಯಿಂದ ಕೆರೆಗಳು ಹಾಳುಬಿದ್ದು, ನಿಷ್ಪ್ರಯೋಜಕವಾಗಿವೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ. 

ಕೆಂಗಟ್ಟಿ ಕೆರೆ:

ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ. 79ರಲ್ಲಿ ಈ ಕೆರೆಯು 13 ಎಕರೆ 34 ಗುಂಟೆ ವಿಸ್ತೀರ್ಣ ಹೊಂದಿದೆ. ಕೆರೆಯು ಅಲ್ಲಲ್ಲಿ ಒತ್ತುವರಿಯಾಗಿದೆ ಎನ್ನುವ ಕೂಗು ಸಹ ಇದೆ. ಕೆರೆಯನ್ನು ಅಳತೆ ಮಾಡಿಸಿ ಹದ್ದುಬಸ್ತು ಮಾಡುವುದು ಅವಶ್ಯವಿದೆ. ಕೆರೆಯಲ್ಲಿನ ಸಂಪೂರ್ಣ ಹೂಳು ತೆಗೆದು ಮಳೆಗಾಲದಲ್ಲಿ ನದಿಯ ನೀರು ಶೇಖರಿಸಲು ಅನುಕೂಲವಾಗುತ್ತದೆ.

ಪ್ರಸ್ತುತ ಕೆರೆಗೆ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ನೀರು ಕೂಡ ಬಂದು ಸೇರುವುದರಿಂದ ಸದಾ ಕೆರೆಯಲ್ಲಿ ನೀರು ಶೇಖರಿಸಿಡುವಂತೆ ಮಾಡಬಹುದಾಗಿದೆ. ಕೆರೆಯಲ್ಲಿ ಪ್ರತಿವರ್ಷ ಮೀನು ಸಾಕಾಣಿಕೆಗೆ ಪಟ್ಟಣ ಪಂಚಾಯ್ತಿಯಿಂದ ಅನುವು ಮಾಡಿಕೊಡಲಾಗಿದೆ. ಕೆಂಗಟ್ಟಿ ಕೆರೆ ತುಂಬಿದಲ್ಲಿ ಸುತ್ತಮುತ್ತಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸಿ ರೈತರ ಆದಾಯ ಹೆಚ್ಚಿಸಬಹುದಾಗಿದೆ.

ಕೆರೆಯ ಸುತ್ತಲೂ ಉದ್ಯಾನ ನಿರ್ಮಿಸಬಹುದು. ಅಲ್ಲದೆ ವಾಯುವಿಹಾರಕ್ಕೆ ಕೆರೆಯ ಸುತ್ತಲು ಗಿಡಮರಗಳನ್ನು ನೆಟ್ಟು ಸುಂದರ ತಾಣವನ್ನಾಗಿ ಮಾಡಬಹುದಾಗಿದೆ. ಸರೋವರ ಸಂಪೂರ್ಣ ಅಭಿವೃದ್ಧಿಪಡಿಸಿದಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡಬಹುದು ಎನ್ನುತ್ತಾರೆ ಗ್ರಾಮಸ್ಥರು.

ಚಕ್ರಗಟ್ಟಿ ಕೆರೆ:

ಚಕ್ರಗಟ್ಟಿ ಕೆರೆಯು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ. 93 ರಲ್ಲಿ 1 ಎಕರೆ 33 ಗುಂಟೆ ವಿಸ್ತೀರ್ಣ ಹೊಂದಿದೆ. ಈ ಕೆರೆಯು ಇಲ್ಲಿನ ಪೂರ್ವಜರ ಕಾಲದಲ್ಲಿ ಉತ್ತಮವಾಗಿದ್ದು, ಕೆರೆಯ ನೀರನ್ನು ಕುಡಿಯಲು, ಬಳಕೆಗೆ, ಜಾನುವಾರುಗಳಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು ಎನ್ನಲಾಗಿದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿದೆ. ಕೆರೆಯ ಸುತ್ತಲೂ ಕಲ್ಲಿನಿಂದ ಒಡ್ಡು ನಿರ್ಮಿಸಿ, ಮಳೆ ನೀರು ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕಾಗಿದೆ.

ಇದೀಗ ಕೆರೆಯು ಸಂಪೂರ್ಣ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ. ತ್ಯಾಜ್ಯ, ಮಲ-ಮೂತ್ರ ಮಾಡುವ ಗುಂಡಿಗಳಾಗಿವೆ. ಇಲ್ಲಿ ವಿಶೇಷವಾಗಿ ಕೆರೆಯಲ್ಲಿ ಕಮಲದ ಹೂವುಗಳು ಹಿಂದೆ ಅರಳುತ್ತಿದ್ದವು. ಅಲ್ಲದೆ ವಿವಿಧ ಬಗೆಯ ಪಕ್ಷಿಗಳು ಇಲ್ಲಿ ಬಂದು ಸಂತಾನೋತ್ಪತ್ತಿ ಮಾಡುತ್ತಿದ್ದವು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

‘ಪಟ್ಟಣ ಕೆಂಗಟ್ಟಿ ಕರೆ ಹಾಗೂ ಚಕ್ರಗಟ್ಟಿ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸುವುದರಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಬವಣೆ ತಪ್ಪುತ್ತದೆ. ಪ್ರಾಣಿ,ಪಕ್ಷಿ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೆ ಪಟ್ಟಣದಲ್ಲಿನ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ’ ಎನ್ನುತ್ತಾರೆ ರೈತ ಸಂಘದ ಮುಖಂಡ ಪ್ರಶಾಂತ ದ್ಯಾವಕ್ಕಳವರ.

ನಾಗರಾಜ ಶೆಟ್ಟಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ 
ನಾಗರಾಜ ಶೆಟ್ಟಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ 
ರಟ್ಟೀಹಳ್ಳಿ ಪಟ್ಟಣದ ಐತಿಹಾಸಿಕ ಕೆಂಗಟ್ಟಿ ಕೆರೆ ನೀರಿಲ್ಲದೆ ಒಣಗಿದೆ ಹಾಗೂ ದಡದಲ್ಲಿ ಕಸದ ರಾಶಿ ಹರಡಿದೆ 
ರಟ್ಟೀಹಳ್ಳಿ ಪಟ್ಟಣದ ಐತಿಹಾಸಿಕ ಕೆಂಗಟ್ಟಿ ಕೆರೆ ನೀರಿಲ್ಲದೆ ಒಣಗಿದೆ ಹಾಗೂ ದಡದಲ್ಲಿ ಕಸದ ರಾಶಿ ಹರಡಿದೆ 
ರಟ್ಟೀಹಳ್ಳಿ ಪಟ್ಟಣದ ಶಿರಗಂಬಿ ರಸ್ತೆ ಹೊಂದಿಕೊಂಡಿರುವ ಚಕ್ರಗಟ್ಟಿ ಕೆರೆ ಹೂಳು ತುಂಬಿಕೊಂಡಿದೆ
ರಟ್ಟೀಹಳ್ಳಿ ಪಟ್ಟಣದ ಶಿರಗಂಬಿ ರಸ್ತೆ ಹೊಂದಿಕೊಂಡಿರುವ ಚಕ್ರಗಟ್ಟಿ ಕೆರೆ ಹೂಳು ತುಂಬಿಕೊಂಡಿದೆ

ಹೂಳು ತೆಗೆದು ಕೆರೆ ಅಭಿವೃದ್ಧಿ ಪಡಿಸುವುದು ಬಹಳ ಮಹತ್ವದ್ದಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಕೆರೆಗಳ ಅಭಿವೃದ್ಧಿಗೆ ಕೈಜೋಡಿಸಿದರೆ ಪಟ್ಟಣ ಪಂಚಾಯ್ತಿಯಿಂದ ಸಹಕಾರ ನೀಡಲಾಗುವುದು

– ಸಂತೋಷ ಚಂದ್ರಿಕೇರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ

‘ಮನವಿ ಸಲ್ಲಿಸಿದರೆ ಕೆರೆ ಅಭಿವೃದ್ಧಿ’

'ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಎಲ್ಲೆಡೆ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಕೆರೆಯಲ್ಲಿ ನೀರು ಸಂಗ್ರಹದಿಂದ ಹಲವಾರು ರೀತಿ ಮನುಷ್ಯ ಹಾಗೂ ಪ್ರಾಣಿ ಕುಲಕ್ಕೆ ಬಹಳಷ್ಟು ಪ್ರಯೋಜನವಾಗುವುದನ್ನು ಮನಗಾಣಲಾಗಿದೆ. ಸುತ್ತಮುತ್ತಲಿನ ಕೊಳವೆಬಾವಿಗಳು ನೀರಿನ ಸಮೃದ್ಧಿಯಿಂದ ಕೂಡುತ್ತವೆ. ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರವಾಗುವುದಿಲ್ಲ. ಪಟ್ಟಣ ಪಂಚಾಯ್ತಿಯಿಂದ ರಟ್ಟೀಹಳ್ಳಿ ಪಟ್ಟಣದ ಕೆಂಗಟ್ಟಿ ಕೆರೆ ಹಾಗೂ ಚಕ್ರಗಟ್ಟಿ ಕೆರೆಗಳನ್ನು ಹೂಳೆತ್ತಿ ಅಭಿವೃದ‍್ದಿ ಪಡಿಸುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸಂಸ್ಥೆಗೆ ಮನವಿ ಸಲ್ಲಿಸಿದಲ್ಲಿ ಕೂಡಲೇ ಕೆರೆಗಳ ಸಮಗ್ರ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ’ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT