ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ: 4 ತಿಂಗಳಾದರೂ ಸಿಗದ ನೇಮಕಾತಿ ಆದೇಶ

ಗುತ್ತಿಗೆ ನೌಕರರ ಭರ್ತಿಗೆ ಅಧಿಕಾರಿಗಳ ಮೀನಮೇಷ
Last Updated 31 ಜನವರಿ 2021, 3:10 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿ ಖಾಲಿ ಇದ್ದ 12 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ತಿಂಗಳು ಕಳೆದರೂ ನೇಮಕಾತಿ ಆದೇಶ ನೀಡಿಲ್ಲ.

ಮೆಡಿಕಲ್‌ ಆಫೀಸರ್‌, ಜಿಲ್ಲಾ ಕಾರ್ಯಕ್ರಮ ಸಂಯೋಜಕ, ಜಿಲ್ಲಾ ಪಿ.ಪಿ.ಎಂ ಸಂಯೋಜಕ, ಸೀನಿಯರ್‌ ಟ್ರೀಟ್‌ಮೆಂಟ್‌ ಸೂಪರ್‌ವೈಸರ್‌, ಎಸ್‌.ಟಿ.ಎಲ್.‌ ಸೂಪರ್‌ವೈಸರ್‌, ಕ್ಷಯ ಹೆಲ್ತ್‌ ವಿಸಿಟರ್‌, ಅಕೌಂಟೆಂಟ್‌ ಈ 7 ಪದನಾಮಗಳ12 ಹುದ್ದೆಗಳಿಗೆ ಮೆರಿಟ್‌ ಹಾಗೂ ರೋಸ್ಟರ್‌ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿ, 2020ರ ಸೆಪ್ಟೆಂಬರ್‌ 19ರಂದು ‘ತಾತ್ಕಾಲಿಕ ಆಯ್ಕೆ ಪಟ್ಟಿ’ ಪ್ರಕಟಿಸಲಾಗಿತ್ತು.

ತಾತ್ಕಾಲಿಕ ಆಯ್ಕೆಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದರೆ 2020ರ ಸೆ.25ರೊಳಗೆ ಅರ್ಜಿ ಸಲ್ಲಿಸಲು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದಾಗಿ ನಾಲ್ಕು ತಿಂಗಳು ಕಳೆದರೂ ಅಂತಿಮ ಆಯ್ಕೆ ಪಟ್ಟಿಯನ್ನೇ ಪ್ರಕಟಿಸಿಲ್ಲ. ಈ ಬಗ್ಗೆ ವಿಚಾರಿಸಲು ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿ ಗಳು ನಿತ್ಯ ಕಚೇರಿಗಳಿಗೆ ಅಲೆದಾಡಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ.

4 ಬಾರಿ ಸಂದರ್ಶನ!: ‘ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ 6 ವರ್ಷಗಳಲ್ಲಿ 4 ಬಾರಿ ಸಂದರ್ಶನ ಕರೆಯಲಾಗಿದೆ. ವಿಶೇಷವೆಂದರೆ 3 ಬಾರಿಯೂ ಆಯ್ಕೆ ಪಟ್ಟಿಯನ್ನೇ ಪ್ರಕಟಿಸಿಲ್ಲ. ನಾಲ್ಕನೇ ಬಾರಿ ಮಾತ್ರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದಾರೆ. ಆದರೆ, ನೇಮಕಾತಿ ಆದೇಶ ಪತ್ರ ನೀಡದೆ ನಮ್ಮನ್ನು ಉದ್ಯೋಗದಿಂದ ವಂಚಿತರನ್ನಾಗಿ ಮಾಡಿದ್ದಾರೆ’ ಎಂದು ನೊಂದ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಸಿಇಒಗೆ ಮನವಿ: ‘ನಿಗದಿತ ವಿದ್ಯಾರ್ಹತೆ ಮತ್ತು ಮೆರಿಟ್‌ ಹೊಂದಿದ್ದರೂ, ಅಧಿಕಾರಿಗಳ ವಿಳಂಬ ಧೋರಣೆಯಿಂದ ನಿರುದ್ಯೋಗಿಗಳಾಗಿದ್ದೇವೆ. ನಮಗೆ ನೇಮಕಾತಿ ಆದೇಶ ನೀಡಿ, ಸೇವೆ ಮಾಡಲು ಅವಕಾಶ ಕೊಡಿ ಎಂದು ಜಿಲ್ಲಾ ಪಂಚಾಯಿತಿಯ ಸಿಇಒಗೆ ಮನವಿ ಸಲ್ಲಿಸಿದ್ದೆವು. ಮನವಿಗೆ ಸ್ಪಂದಿಸಿದ ಸಿಇಒ ಅವರು, ಅರ್ಜಿ ಪರಿಶೀಲಿಸಿ, ನಿಯಮಾನುಸಾರ ಕ್ರಮವಹಿಸಲು ಸೂಚಿಸಿದ್ದರು. ಆದರೂ, ಡಿಎಚ್‌ಒ ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನೊಂದ ಅಭ್ಯರ್ಥಿಗಳು ದೂರಿದರು.

‘ನಾವು ಪದವೀಧರರಾಗಿದ್ದರೂ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಗೌಂಡಿ ಕೆಲಸ, ಚಾಲಕ ವೃತ್ತಿ ಮತ್ತು ಹೊಲದ ಕೆಲಸಗಳಿಗೆ ಹೋಗುತ್ತಿದ್ದೇವೆ. ಆಯ್ಕೆಯಾದ ನಾವೆಲ್ಲರೂ ಬಡ ಕುಟುಂಬದವರಾಗಿದ್ದು, ದಯಮಾಡಿ ನಮಗೆ ನ್ಯಾಯ ಒದಗಿಸಿಕೊಡಿ ಎಂದು ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದೇವೆ. ಇಷ್ಟಾದರೂ ನಮಗೆ ನ್ಯಾಯ ಸಿಕ್ಕಿಲ್ಲ’ ಎಂದು ನೊಂದ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಸಹ ನಿರ್ದೇಶಕರ ಆದೇಶಕ್ಕೂ ಸಿಗದ ಬೆಲೆ!

ಜಿಲ್ಲಾ ಪಂಚಾಯ್ತಿ ಸಿಇಒ ಅವರ ಪತ್ರಕ್ಕೆ ಸಂಬಂಧಪಟ್ಟಂತೆ ರಾಜ್ಯ ಕ್ಷಯರೋಗ ಕೇಂದ್ರದ ಸಹ ನಿರ್ದೇಶಕರು, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಿಗೆ ಜನವರಿ 13ರಂದು ಪತ್ರ ಬರೆದು, ನಿರ್ದೇಶನಾಲಯದ ಮಾರ್ಗಸೂಚಿ ಅನ್ವಯ ಮೆರಿಟ್‌ ಕಂ ರೋಸ್ಟರ್‌ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು.

2025ನೇ ಸಾಲಿನಲ್ಲಿ ಕ್ಷಯರೋಗ ನಿರ್ಮೂಲನಾ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಜಿಲ್ಲೆಗಳಲ್ಲಿ ಅಗತ್ಯವಿರುವ ಗುತ್ತಿಗೆ/ಹೊರಗುತ್ತಿಗೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆದೇಶ ಇರುವುದರಿಂದ ಈಗಾಗಲೇ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳನ್ನು ಜನವರಿ ಅಂತ್ಯದೊಳಗೆ ನೇಮಕಾತಿ ಮಾಡಿಕೊಳ್ಳುವಂತೆ ಸಹ ನಿರ್ದೇಶಕರು ಆದೇಶಿಸಿದ್ದರು. ಆದರೂ, ಡಿಎಚ್‌ಒ ಮತ್ತು ಕ್ಷಯರೋಗ ನಿರ್ಮೂಲನಾಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ನೊಂದ ಅಭ್ಯರ್ಥಿಗಳ ಆರೋಪ.

* ಮೆರಿಟ್‌ ಆಧಾರದ ಮೇಲೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ನೀಡಿದ್ದೇನೆ. ಡಿಎಚ್‌ಒ ಕೂಡಲೇ ಕ್ರಮ ಕೈಗೊಂಡು, ನೇಮಕಾತಿ ಆದೇಶ ಪತ್ರ ನೀಡಬೇಕು.
– ಮೊಹಮ್ಮದ್‌ ರೋಶನ್‌, ಸಿಇಒ, ಜಿಲ್ಲಾ ಪಂಚಾಯಿತಿ

* ಆಯ್ಕೆ ಪಟ್ಟಿಗೆ ನೇಮಕಾತಿ ಸಮಿತಿ ಸದಸ್ಯರ ಸಹಿ ಪಡೆಯಲಾಗಿದೆ. ಡಿಎಚ್ಒ ಸಹಿ ಹಾಕಿದ ತಕ್ಷಣ ನೇಮಕಾತಿ ಆದೇಶ ಪತ್ರ ನೀಡುತ್ತೇವೆ.
– ಡಾ.ಜಯಾನಂದ, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT