ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಯಶ ಕಂಡ ನಿವೃತ್ತ ಯೋಧ

ಮಾವು, ಕಬ್ಬು ಬೆಳೆಯಿಂದ ಲಕ್ಷಾಂತರ ಆದಾಯ, ಯುವರೈತರಿಗೆ ಮಾದರಿಯಾದ ಉಜ್ಜನಗೌಡ
Published 20 ಅಕ್ಟೋಬರ್ 2023, 4:19 IST
Last Updated 20 ಅಕ್ಟೋಬರ್ 2023, 4:19 IST
ಅಕ್ಷರ ಗಾತ್ರ

ಹಂಸಭಾವಿ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಬಹುತೇಕರು ಯಾವುದೇ ಕೆಲಸ ಮಾಡದೆ ಆರಾಮದಾಯಕವಾಗಿ ನಿವೃತ್ತಿ ಜೀವನ ಸಾಗಿಸುತ್ತಾರೆ. ಆದರೆ, ಸಮೀಪದ ದೀವಿಗಿಹಳ್ಳಿ ಗ್ರಾಮದ ನಿವೃತ್ತ ಯೋಧ ಉಜ್ಜನಗೌಡ ಮಾವಿನತೋಪ ಅವರು, ಕೃಷಿ ಕಾಯಕ ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಆರೂವರೆ ಎಕರೆ ಭೂಮಿಯಲ್ಲಿ 275 ಮಾವಿನ ಸಸಿ ನೆಟ್ಟಿದ್ದು, ಅದರಿಂದ ವಾರ್ಷಿಕ ₹15 ಲಕ್ಷ ಆದಾಯ, 4.5 ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ವಾರ್ಷಿಕ ₹2 ಲಕ್ಷ ಆದಾಯ ಪಡೆಯುತ್ತಿದ್ದಾರೆ. ತರಕಾರಿ ಬೆಳೆಗಳನ್ನೂ ಬೆಳೆಯುತ್ತಿದ್ದು, ಬದನೆ, ಮೆಣಸು, ಟೊಮೆಟೊ ಮೂಲಕ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಆದಾಯ ಗಳಿಸಿದ್ದಾರೆ.

‘2020ರಲ್ಲಿ 1.5 ಎಕರೆ ಜಮೀನಿನಲ್ಲಿ 550 ಮಹಾಗಣಿ ಸಸಿಗಳನ್ನು ನಾಟಿ ಮಾಡಲಾಗಿದ್ದು, 12 ವರ್ಷಕ್ಕೆ ಕಟಾವಿಗೆ ಬರಲಿವೆ. ಇವುಗಳಿಂದ ಪ್ರತೀ ಒಂದು ಎಕರೆಗೆ ₹1 ಕೋಟಿ ಆದಾಯದ ನಿರೀಕ್ಷೆ ಹೊಂದಿದ್ದೇನೆ. ಇದರ ಮಧ್ಯೆ ಕಳೆದ ವರ್ಷ ₹15 ಸಾವಿರ ಖರ್ಚು ಮಾಡಿ 550 ಸೀಬೆ ಸಸಿಗಳನ್ನು ನಾಟಿ ಮಾಡಿದ್ದು, ಅವು ಈಗಾಗಲೇ ಫಲ ಕೊಡುತ್ತಿವೆ. ಸದ್ಯ ಮಾರುಕಟ್ಟೆ ದರ ಕೆ.ಜಿಗೆ ₹50 ಇದ್ದು, ವಾರ್ಷಿಕ ₹1.50 ಲಕ್ಷ ಆದಾಯದ ನಿರೀಕ್ಷೆ ಇದೆ. ಇವುಗಳ ಜೊತೆಗೆ 500 ನಿಂಬೆ ಸಸಿ ನಾಟಿ ಮಾಡುವ ಗುರಿಯನ್ನೂ ಹೊಂದಿದ್ದೇನೆ’ ಎನ್ನುತ್ತಾರೆ ಉಜ್ಜನಗೌಡ.

ತರಕಾರಿ ಬೆಳೆಯಲ್ಲೂ ಉತ್ತಮ ಆದಾಯ: ಉಜ್ಜನಗೌಡ ಅವರು ತರಕಾರಿ ಬೆಳೆಗಳನ್ನೂ ಬೆಳೆಯುತ್ತಿದ್ದು, ಬದನೆ, ಮೆಣಸು, ಟೊಮೆಟೊ ಇನ್ನಿತರ ತರಕಾರಿಗಳಿಂದ ಕಳೆದ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಆದಾಯ ಗಳಿಸಿದ್ದಾರೆ. ಪ್ರತಿಯೊಂದೂ ಬೆಳೆಗೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನೇ ಕೊಡುತ್ತಿದ್ದು, ಇದಕ್ಕಾಗಿ ಎರಡು ಹಸುಗಳನ್ನು ಸಾಕಿದ್ದಾರೆ.

ತೋಟದ ರಕ್ಷಣೆಗೆ ಸೋಲಾರ್‌ ಬೇಲಿ:  ಉಜ್ಜನಗೌಡ ಅವರು ತಮ್ಮ ತೋಟದಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಮನುಷ್ಯ, ಪ್ರಾಣಿ-ಪಕ್ಷಿಗಳಿಂದ ರಕ್ಷಣೆ ಕೊಡಲು ಸುಮಾರು ₹1.70 ಲಕ್ಷ ಖರ್ಚು ಮಾಡಿ ಸೋಲಾರ್‌ ಬೇಲಿ ನಿರ್ಮಾಣ ಮಾಡಿದ್ದಾರೆ. ಇದರಿಂದ ತೋಟ ಕಾಯುವ ಗೋಜು ತಪ್ಪಿದೆ ಎನ್ನುತ್ತಾರೆ ಅವರು.

ಕೃಷಿಯಲ್ಲಿ ಸಿಗುವ ನೆಮ್ಮದಿ ಎಲ್ಲೂ ಇಲ್ಲ. ಆಸಕ್ತಿಯಿಂದ ಮಾಡಿದ ಎಲ್ಲ ಕೆಲಸವೂ ಯಶಸ್ಸು ತಂದು ಕೊಡುತ್ತದೆ. ಸೈನಿಕ ಕೃಷಿಕನಾಗಿದ್ದು ನನಗೆ ಹೆಮ್ಮೆ ತರಿಸಿದೆ

–ಉಜ್ಜನಗೌಡ ನಿವೃತ್ತ ಯೋಧ

ಕೃಷಿಯಲ್ಲಿ ಒಂದೇ ಬೆಳೆಯಿಂದ ಲಾಭ ಅಸಾಧ್ಯ. ಮಿಶ್ರ ಬೆಳೆಯೊಂದಿಗೆ ಸಮಗ್ರ ಕೃಷಿ ಮಾಡಿದರೆ ಯಶಸ್ಸು ಸಾಧಿಸಬಹುದು. ಅದಕ್ಕೆ ನಿವೃತ್ತ ಯೋಧ ಉಜ್ಜನಗೌಡ ಅವರೇ ಉದಾಹರಣೆ

–ಮಂಜುನಾಥ ಎಂ.ವಿ. ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಹಿರೇಕೆರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT