ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಸೌಲಭ್ಯಕ್ಕೆ ‘ರಸ್ತೆಯೇ ದುಸ್ತರ’

ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಸಚಿವ ಜಮೀರ್ ಅಹ್ಮದ್ ಖಾನ್ ಉಸ್ತುವಾರಿ ಜಿಲ್ಲೆಯ ಪಾಡು
Last Updated 2 ಸೆಪ್ಟೆಂಬರ್ 2018, 9:18 IST
ಅಕ್ಷರ ಗಾತ್ರ

ಹಾವೇರಿ: ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್‌ ಖಾನ್ ಉಸ್ತುವಾರಿಹೊಂದಿರುವ ಜಿಲ್ಲೆಯ (ಹಾವೇರಿ) ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಹಾಗೂ ನಿಗಮದ ಕಚೇರಿಗಳಿಗೆ ಹೋಗುವ ರಸ್ತೆಯೇ ಹದಗೆಟ್ಟಿದ್ದು, ಪರದಾಡುವಂತಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ, ಮೌಲಾನಾ ಆಝಾದ್ ಭವನ, ಪ್ರಾದೇಶಿಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಿಳಾ ಸ್ವಧಾರ ಗೃಹ, ಖಾಸಗಿ ಶಾಲೆ ಸೇರಿದಂತೆ ಹಲವಾರು ಸಂಸ್ಥೆಗಳಿರುವ ಶಿವಾಜಿನಗರದ ರಸ್ತೆ ಹದಗೆಟ್ಟಿದ್ದು, ಒಂದಲ್ಲ ಒಂದು ಅವಘಢ ಸಂಭವಿಸುತ್ತಿದೆ.

ನಗರ ಪೊಲೀಸ್ ಠಾಣೆಯ ಬಳಿ ಪಿ.ಬಿ. ರಸ್ತೆಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಹೊಂಡಗುಂಡಿಗಳಿಂದ ಕೂಡಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಾದರೆ, ಬಿಸಿಲಿಗೆ ದೂಳುಮಯ.

ಸುಮಾರು ಒಂದೂವರೆ ಕಿ.ಮೀ. ಸಾಗಿದರೆ, ಮೌಲಾನಾ ಅಝಾದ್ ಅಲ್ಪಸಂಖ್ಯಾತರ ಭವನ ಇದೆ. ಈ ಕಟ್ಟಡದಲ್ಲಿ ಇಲಾಖೆ ಹಾಗೂ ನಿಗಮದ ಕಚೇರಿಗಳಿವೆ. ಇವುಗಳ ವ್ಯಾಪ್ತಿಗೆ ಜಿಲ್ಲೆಯ ಮುಸ್ಲಿಂ, ಜೈನ್, ಕ್ರೈಸ್ತ, ಬೌದ್ಧ, ಪಾರ್ಸಿ, ಸಿಖ್‌ ಧರ್ಮಗಳು ಒಳಪಡುತ್ತಿದ್ದು, ಒಟ್ಟು 3.02 ಲಕ್ಷ (2011 ಜನಗಣತಿ) ಜನಸಂಖ್ಯೆ ಇದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ 18.85ರಷ್ಟಿದೆ.

ಭವನದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಶಾದಿಭಾಗ್ಯ, ಸಮುದಾಯ ಭವನ ಮಂಜೂರಿ, ಹಿರಿಯರು, ವ್ಯಾಪಾರಿಗಳು ಇತರರಿಗೆ ಸಾಲ ಮಂಜೂರಾತಿ, ಸಬ್ಸಿಡಿ ಸೌಲಭ್ಯ, ರೈತರಿಗೆ ಗಂಗಾ ಕಲ್ಯಾಣ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ. ಅದಕ್ಕಾಗಿ ಅರ್ಜಿ ಸಲ್ಲಿಸಲು, ಪರಿಶೀಲನೆ ಮತ್ತಿತರ ಕಾರ್ಯಕ್ಕೆ ದಿನ ನಿತ್ಯವೂ ಸಾವಿರಾರು ಜನ ಓಡಾಡುತ್ತಾರೆ.

ಒಟ್ಟಾರೆ, ಜಿಲ್ಲೆಯ ಪ್ರತಿ ಐದರಿಂದ ಆರು ವ್ಯಕ್ತಿಗಳ ಪೈಕಿ ಒಬ್ಬರು ಇಲ್ಲಿಗೆ ಬರುತ್ತಾರೆ. ಇಷ್ಟೊಂದು ಜನ ಕೇಂದ್ರೀಕೃತ ಭವನಕ್ಕೆ ಬರುವ ರಸ್ತೆಯಲ್ಲಿ ವಾಹನಗಳು ಮಾತ್ರವಲ್ಲ, ನಡೆದಾಡಲೂ ಸಾಧ್ಯವಿಲ್ಲ.

‘ಆಝಾದ್’ ಭವನದ ಮುಂಭಾಗದ ಕೆಲವು ಮೀಟರ್‌ ರಸ್ತೆಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸಿ.ಸಿ. ರಸ್ತೆ ಮಾಡಲಾಗಿದೆ. ಇದೇ ರಸ್ತೆಯ ಕೆಲವೆಡೆ ಒಳಚರಂಡಿ ಕಾಮಗಾರಿ ನಡೆದಿದ್ದು, ಅಗೆದು ಹಾಕಿದ ಸ್ಥಳಗಳಲ್ಲಿ ಇನ್ನಷ್ಟು ಹದಗೆಟ್ಟು ಹೋಗಿದೆ.

‘ನಾವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಹೋಗಿದ್ದೆವು. ಆದರೆ, ನಡೆದಾಡಲೂ ಪರದಾಡಬೇಕಾಗಿತ್ತು. ಆಕಸ್ಮಾತ್ ಬಿದ್ದುಬಿಟ್ಟರೆ, ವಿದ್ಯಾರ್ಥಿ ವೇತನದ ಹಣಕ್ಕಿಂತ ಹೆಚ್ಚಾಗಿ ಆಸ್ಪತ್ರೆಗೆ ಖರ್ಚು ಮಾಡ ಬೇಕಾದ ಭಯ ಕಾಡಿತ್ತು’ ಎಂದು ವಿದ್ಯಾರ್ಥಿಗಳಾದ ದಾವಲ್‌ಬಿ ಮುಜಾವರ್, ಅಸ್ಗರ್ ಅಲಿ ಮತ್ತಿತರರು ದೂರಿದರು.

‘ಸ್ವಯಂ ಉದ್ಯೋಗ ಆರಂಭಿಸುವ ಸಲುವಾಗಿ ಅರ್ಜಿ ಹಾಕಲು ನಿಗಮಕ್ಕೆ ಹೋಗುವುದೇ ದುಸ್ತರ’ ಎಂದು ರಾಜೀವ್ ಸಾಬ ಹುಲಗೂರ ತಿಳಿಸಿದರು.

ಹಾವೇರಿ ನಗರದ ಅಭಿವೃದ್ಧಿಗೆ ಈ ಹಿಂದಿನ ಮುಖ್ಯಮಂತ್ರಿ ವಿಶೇಷ ಅನುದಾನ ₹50 ಕೋಟಿ ಹಾಗೂ ನಗರೋತ್ಥಾನದ ಪೈಕಿ ಶಿವಾಜಿನಗರದ ರಸ್ತೆಗಳಿಗೆ ಅನುದಾನ ಮಂಜೂರಾಗಿದೆ. ಆದರೆ, ಮಳೆಯ ಕಾರಣ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಶೀಘ್ರವೇ ಕಾಮಗಾರಿ ನಡೆಸಲಾಗುವುದು ಎಂದು ನಗರಸಭೆಯ ಅಧಿಕಾರಿಗಳು ತಿಳಿಸುತ್ತಾರೆ.

ನಗರಸಭೆ ಚುನಾವಣೆ ಸಂದರ್ಭದಲ್ಲಿ ಶಿವಾಜಿನಗರ ಬಡಾವಣೆಗೆ ಬಂದಿದ್ದ ಶಾಸಕರು, ಮಾಜಿ ಶಾಸಕರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಕಾರಿನಿಂದ ಇಳಿದು ನಡೆದಾಡಲೂ ಪರದಾಡಿದ್ದರು ಎಂದು ಸ್ಥಳೀಯರೊಬ್ಬರು ತಿಳಿಸಿದರು.

ನೊಂದ ಮಹಿಳೆಯರಿಗೆ ಇನ್ನಷ್ಟು ನೋವು!

ಇದೇ ರಸ್ತೆಯಲ್ಲಿ ಮಹಿಳಾ ಸ್ವಧಾರ ಗೃಹವೂ ಇದೆ. ಇಲ್ಲಿ ಶೋಷಿತ, ನೊಂದ ಮಹಿಳೆಯರಿಗೆ ರಕ್ಷಣೆ, ಸಾಂತ್ವನ ನೀಡಲಾಗುತ್ತದೆ. ಆದರೆ, ರಸ್ತೆ ಹದಗೆಟ್ಟ ಕಾರಣ, ಇಲ್ಲಿಗೆ ಬರುವ ಮಹಿಳೆಯರೇ ನೊಂದು ವಾಪಸ್ ಆಗುವ ಪರಿಸ್ಥಿತಿ ಉಂಟಾಗಿದೆ.

‘ನಾಲ್ವರು ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ಈಚೆಗೆ ರಾತ್ರಿ ವೇಳೆ ಸುದ್ದಿ ಬಂತು. ನಮಗೆ ರಸ್ತೆ ದಾಟಿ ಹೋಗುವುದೇ ಸಾಹಸವಾಗಿತ್ತು. ಆ ಬಳಿಕ ಅವರನ್ನು ಆಟೊ ಮೂಲಕ ಕರೆದುಕೊಂಡು ಬರವುದೇ ಕಷ್ಟವಾಗಿತ್ತು. ನೊಂದ ಮಹಿಳೆಯರು ರಸ್ತೆಯ ಪಾಡಿನಿಂದ ಇನ್ನಷ್ಟು ನೊಂದುಕೊಳ್ಳುವಂತಾಯಿತು’ ಎಂದು ಸಾಮಾಜಿಕ ಕಾರ್ಯಕರ್ತೆ ಪರಿಮಳಾ ಜೈನ್ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಯಾರೂ ಸ್ಪಂದಿಸುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT