ಶುಕ್ರವಾರ, ಸೆಪ್ಟೆಂಬರ್ 17, 2021
31 °C
ಬಂಕಾಪುರ ಟೋಲ್ ನಾಕಾದಿಂದ ಕುಂದೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ

ರಸ್ತೆ ಕಾಮಗಾರಿ ಅಪೂರ್ಣ: ಜನರ ಪರದಾಟ

ಎಂ.ವಿ.ಗಾಡದ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ರಾಷ್ಟೀಯ ಹೆದ್ದಾರಿ (ಎನ್‌ಎಚ್-4) ಬಂಕಾಪುರ ಟೋಲ್ ನಾಕಾದಿಂದ ಕುಂದೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಸಾರ್ವಜನಿಕರು ಸಂಚಾರಕ್ಕಾಗಿ ಪರದಾಡುವಂತಾಗಿದೆ. ಅಪೂರ್ಣಗೊಂಡ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಏಂಟು ತಿಂಗಳ ಹಿಂದೆ ಡಾಂಬರೀಕರಣ ಮಾಡಲಾಗಿದೆ. ರಸ್ತೆಯಲ್ಲಿ ಒಂದು ಕ್ರಾಸಿಂಗ್ ರಸ್ತೆ ಬಂದಿದ್ದು, ಬಂಕಾಪುರದಿಂದ ತವರಮೆಳ್ಳಳ್ಳಿ ಗ್ರಾಮಗಳಿಗೆ ಹೋಗಬಹುದು. ಈ ರಸ್ತೆ ಕ್ರಾಸಿಂಗ್‌ನಲ್ಲಿ ಒಂದು ಸೇತುವೆ ನಿರ್ಮಾಣ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ವರೆಗೆ ರಸ್ತೆ ಪೂರ್ಣಗೊಂಡಿಲ್ಲ. ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಿಲ್ಲ. ಹೀಗಾಗಿ ಇಲ್ಲಿನ ಪ್ರಮಾಣಿಕರು ಪ್ರಯಾಣಕ್ಕಾಗಿ ಹರಸಾಹಸ ಪಡುವಂತಾಗಿದೆ ಎಂದು ಕುಂದೂರ ಗ್ರಾಮದ ಬಸವರಾಜ ಕುಂದೂರ ತಿಳಿಸಿದರು.

ಬಂಕಾಪುರ ಗ್ರಾಮದಿಂದ ತವರಮೆಳ್ಳಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಹಿಂದೆ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಈ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕಂದಕ ತೋಡಿ ಬಿಡಲಾಗಿದೆ. ಈ ಕಂದಕದಲ್ಲಿ ಸಾಕಷ್ಟು ಜನ ವಾಹನ ಸವಾರರು ಬಿದ್ದು, ತೀವ್ರತರನಾದ ಗಾಯಗಳಾಗಿವೆ. ರಾತ್ರಿ ವೇಳೆ ಈ ಕಂದಕ ಕಾಣದೆ ಅಪಘಾತಗಳು ನಡೆಯುತ್ತಿವೆ. ಅಪಘಾತದ ನಂತರ ಕೆಲವರು ಈ ಕಂದಕಕ್ಕೆ ಮುಳ್ಳು, ಕಲ್ಲುಗಳನ್ನು ಹಾಕಿದ್ದಾರೆ. ಅರ್ಧಕ್ಕೆ ನಿಂತ ಕಾಮಗಾರಿಯಲ್ಲಿ ಒಂದು ಸೂಚನಾ ಫಲಕವು ಹಾಕಿಲ್ಲ. ಅದರಿಂದ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು, ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡರು.

ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಲಾಗಿದೆ. ಆದರೂ ಈ ವರೆಗೆ ಕಾಮಗಾರಿ ಕೈಗೊಂಡಿಲ್ಲ. ಜಲಾನಯನ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ. ಹಾರಿಕೆ ಉತ್ತರ ನೀಡುತ್ತಿದ್ದಾರೆ. ಯಾವುದೇ ಇಲಾಖೆಯಗಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಬಸವರಾಜ ಕುಂದೂರ ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.