ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ರೋಗಕ್ಕೆ ಮನದಲ್ಲೇ ಪರಿಹಾರ

ಹೊಸಮಠದ ಶರಣ ಸಂಸ್ಕೃತಿ ಉತ್ಸವ: ಸಹಜ ಶಿವಯೋಗದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು
Last Updated 1 ಡಿಸೆಂಬರ್ 2018, 10:11 IST
ಅಕ್ಷರ ಗಾತ್ರ

ಹಾವೇರಿ:ಬದುಕಿಗೆ ವಿಜ್ಞಾನ, ತಂತ್ರಜ್ಞಾನದ ಜೊತೆ ಧ್ಯಾನವೂ ಬಹುಮುಖ್ಯ. ಅಂಗವೇ ಲಿಂಗವಾಗುವ ಧ್ಯಾನದ ‘ಸಹಜ ಶಿವಯೋಗ’ವು ಕಾಣದ ಕಾಯಿಲೆಗಳಿಗೂ ಪರಿಹಾರ ನೀಡುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಲಿಂ.ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವದ ನಿಮಿತ್ತ ಇಲ್ಲಿನ ಹೊಸಮಠದಲ್ಲಿ ನಡೆಯುತ್ತಿರುವ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಶನಿವಾರ ಬೆಳಿಗ್ಗೆ ‘ಸಹಜ ಶಿವಯೋಗ’ದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ಖಿನ್ನತೆಯು ಬಾಲ್ಯದಿಂದ ವೃದ್ಧಾಪ್ಯ ತನಕ ಸಾಮಾನ್ಯನಿಂದ ಸ್ವಾಮೀಜಿಗಳ ತನಕ ಎಲ್ಲರಿಗೂ ಕಾಡುವ ಕಾಯಿಲೆ. ಈ ಮಹಾಮಾರಿಯು ಹಲವರ ಬದುಕಗಳನ್ನೂ ಬಲಿ ಪಡೆದಿದೆ. ಇದು, ವೈದ್ಯಕೀಯ ಪರೀಕ್ಷೆಗಳಲ್ಲಿ ಪತ್ತೆಯಾಗದಿರಬಹುದು. ಆದರೆ, ಪರಿಣಾಮಕಾರಿ ಧ್ಯಾನದಿಂದ ಬಗೆಹರಿಸಬಹುದು ಎಂದರು.

ಒಳಗಿನ ಸಮಸ್ಯೆಗಳಿಗೆ ಹೊರಗೆ ಪರಿಹಾರ ಹುಡುಕಾಡಬೇಡಿ. ಅಂತರಂಗದಲ್ಲಿ ಪಾರಮಾರ್ಥ ತುಂಬಿಕೊಳ್ಳಿ. ಬದುಕೇ ಧ್ಯಾನವಾಗಲಿ, ಸಮಸ್ಯೆಗಳು ಕರಗಿ ಹೋಗುತ್ತವೆ ಎಂದರು.

ಪಾಶ್ಚಾತ್ಯದ ಸಿದ್ಧಾಂತಗಳು ತತ್ವಜ್ಞಾನ ನೀಡಿದರೆ, ಶರಣರು ತತ್ವಜ್ಞಾನದ ಜೊತೆ ಕಾಯಕವನ್ನು ನೀಡಿದ್ದಾರೆ. ಹೀಗಾಗಿ, ಧ್ಯಾನ, ಏಕಾಗ್ರತೆ, ಶಿಯೋಗಗಳನ್ನು ‘ಪಾರ್ಟ್‌ ಟೈಮ್‌ ’ ರೀತಿ ಮಾಡಬೇಡಿ. ಧ್ಯಾನದಲ್ಲಿ ಲೀನವಾಗಿ, ಕಣ್ಣಲ್ಲಿ ಭಾಷ್ಪ ತುಂಬುವಷ್ಟು ತಲ್ಲೀನರಾಗಿ ಎಂದರು.

ಅದಕ್ಕಾಗಿ ಸತ್ಯ ಶುದ್ಧ ಕಾಯಕ ಮಾಡಿ. ಸತ್ ಚಿಂತನೆ, ಸದ್ಭಾವನೆ, ಸದ್ವರ್ತನೆಗಳಿಂದ ಸನ್ಮಾರ್ಗ ಮತ್ತು ಯಶಸ್ಸು ಕಂಡುಕೊಳ್ಳಿ ಎಂದ ಅವರು, ಬಸವಣ್ಣನವರ ಮಾರ್ಗವನ್ನು ರಾಷ್ಟ್ರಕವಿ ಕುವೆಂಪು ಅವರು ‘ಋಜುಮಾರ್ಗ’ ಎಂದು ಕರೆದಿದ್ದಾರೆ ಎಂದರು.

ಹಾವನೂರು ದಳವಾಯಿ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ತನುವಿದ್ದಲ್ಲೇ ಮನ ಇರಬೇಕು. ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣ ಇರಬೇಕು ಎಂದರು.

ತಿಪ್ಪಾಯಿಕೊಪ್ಪದ ಮಹಾಂತ ದೇವರು ಮಾತನಾಡಿ, ‘ಶರಣ ಸಂಸ್ಕೃತಿ’ಯು ಪುರಾಣವಲ್ಲ. ಅದು, ಚಲನಶೀಲ, ಸದಾ ಬದುಕು ಮತ್ತು ಬದಲಾವಣೆಗೆ ಸ್ಪಂದಿಸುವ ಸಂಸ್ಕೃತಿ. ಪೂಜೆಗಾಗಿಯೇ ಪ್ರತ್ಯೇಕ ಸಮಯ ಮತ್ತು ಹಣದ ದುಂಧುವೆಚ್ಚ ಬೇಡ. ಕಾಯಕದಲ್ಲೇ ಭಗವಂತನ ಕಾಣಿರಿ. ದಾಸೋಹದಲ್ಲಿ ನೆಮ್ಮದಿ ಪಡೆಯಿರಿ ಎಂದರು.

ಸಾಮರಸ್ಯ, ಸಮಭಾವದ ಸಂದೇಶವನ್ನು ಸಹಜ ಶಿವಯೋಗ ನೀಡಿದೆ ಎಂದು ಚಿತ್ರಕಲಾವಿದ ಎಂ.ಡಿ. ರಫಿ ಹೇಳಿದರು. ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ, ಅಗಡಿ ತೋಟದ ಜಯದೇವ ಅಗಡಿ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ, ಕಾರ್ಯಾಧ್ಯಕ್ಷ ಡಾ.ಮೃತ್ಯುಂಜಯ ತುರಕಾಣಿ, ಉಪಾಧ್ಯಕ್ಷ ಇಂಧೂದರ ಯರೇಶಿಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT