ಮಂಗಳವಾರ, ಜನವರಿ 28, 2020
19 °C
ಹಾವೇರಿಯಲ್ಲಿ ನಾಳೆ ಪ್ರತಿಭಟನಾ ಜಾಥಾ

ಸಹಕಾರ ಕ್ಷೇತ್ರವನ್ನು ತೆರಿಗೆ ಮುಕ್ತಗೊಳಿಸಿ: ಡಾ.ಸಂಜಯ ಹೊಸಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಕೇಂದ್ರ ಸರ್ಕಾರ ಸಹಕಾರ ಸಂಸ್ಥೆಗಳನ್ನು ಆದಾಯ ತೆರಿಗೆಯಿಂದ ಮುಕ್ತಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಪತ್ತಿನ ಮಹಾಮಂಡಳ ನಿರ್ದೇಶಕ ಡಾ.ಸಂಜಯ ಹೊಸಮಠ ಒತ್ತಾಯಿಸಿದರು. 

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಹಕಾರ ಕ್ಷೇತ್ರವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಆರ್ಥಿಕ ಸಹಾಯ ಒದಗಿಸುತ್ತಿದೆ. ಕೇಂದ್ರ ಸರ್ಕಾರ ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ ವಿಧಿಸುತ್ತಿದೆ. ಇದರಿಂದ ಸಹಕಾರ ಸಂಘಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ಎಲ್ಲ ಸಂಘಗಳು ಆದಾಯ ತೆರಿಗೆಯಿಂದ ನಷ್ಟದಲ್ಲಿ ಸಿಲುಕಿ ಆರ್ಥಿಕ ದಿವಾಳಿಯಾಗುತ್ತಿವೆ. ಈಗಾಗಲೇ ಅನೇಕ ಸಂಘಗಳು ಮುಚ್ಚಿವೆ’ ಎಂದು ಹೇಳಿದರು. 

‘ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ಸಹಕಾರ ಕ್ಷೇತ್ರ ತತ್ತರಿಸಿ ಹೋಗುತ್ತಿದೆ. ರಾಜ್ಯದಲ್ಲಿ 115 ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ಸಹಕರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗಮನಹರಿಸಬೇಕು. ಸಹಕಾರ ಕ್ಷೇತ್ರವನ್ನು ಸ್ವತಂತ್ರ ಹಾಗೂ ಸದೃಢವಾಗಿ ಬೆಳೆಯಲು ಅವಕಾಶ ನೀಡಬೇಕು’ ಎಂದು ಕೋರಿದರು. 

‘ನೋಟು ಅಮಾನ್ಯೀಕರಣಗೊಂಡ ಎರಡೂವರೆ ವರ್ಷಗಳ ನಂತರ ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡುತ್ತಿದೆ. 2016 ನವೆಂಬರ್‌ 8ರಿಂದ ಡಿಸೆಂಬರ್‌ 31ರವರೆಗೆ ನಡೆದ ವಹಿವಾಟು ಬಗ್ಗೆ ಲೆಕ್ಕ ಕೊಡಿ ಎಂದು ಕೇಳುತ್ತಿದ್ದಾರೆ. ನಮ್ಮಲ್ಲಿ ವಹಿವಾಟು ನಡೆಸಿದವರು ನಮ್ಮ ಸಂಸ್ಥೆಯ ಸದಸ್ಯರು. ಅವರು ಲೋನ್‌ಗಾಗಿ ಹಣ ಕಟ್ಟಿದ್ದಾರೆ. ಕಾನೂನುಬಾಹಿರ ಚಟುವಟಿಕೆ ನಡೆಸಿದ್ದರೆ ಕ್ರಮ ತೆಗೆದುಕೊಳ್ಳಿ, ಅದಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಅನಗತ್ಯವಾಗಿ ತೆರಿಗೆ ಹಾಕುವ ಮೂಲಕ ಗದಾಪ್ರಹಾರ ಮಾಡಬೇಡಿ ಎಂದು ಮನವಿ ಮಾಡಿದರು. 

ಸಹಕಾರ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ನಮ್ಮ ಬೇಡಿಕೆ ಈಡೇರದಿದ್ದರೆ, ನಂತರ ‘ಬೆಂಗಳೂರು ಚಲೋ’ ಆನಂತರ ‘ದೆಹಲಿ ಚಲೋ’ ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು. 

ಹಾವೇರಿಯಲ್ಲಿ ಜ.9ರಂದು ಮುರುಘಾಮಠದಿಂದ ಬೃಹತ್‌ ಪ್ರತಿಭಟನಾ ಜಾಥಾ ಹೊರಟು ಸಿದ್ದಪ್ಪ ಸರ್ಕಲ್‌ ತಲುಪಿ, ಅಲ್ಲಿ ಮಾನವ ಸರಪಳಿ ರಚಿಸಿ ನಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸುತ್ತೇವೆ. ನಂತರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪತ್ತಿನ ಮಹಾಮಂಡಳದ ನಿರ್ದೇಶಕ ಕೆಂಚರೆಡ್ಡಿ, ಶಿವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಬಿ.ಬೆಳವಡಿ, ವ್ಯವಸ್ಥಾಪಕ ಎಂ.ಎಂ. ಅಗಸನಹಳ್ಳಿ, ಮಹೇಶ್ವರ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಅಧ್ಯಕ್ಷ ಎಸ್‌.ಎನ್‌. ಹಿರೇಮಠ, ರತ್ನಾ ಭೀಮಕ್ಕನವರ್‌ ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು