ಬುಧವಾರ, ಫೆಬ್ರವರಿ 19, 2020
29 °C
ಬೆಂಗಳೂರಿನಲ್ಲಿ ಫೆ.16ರಂದು ನಡೆಯುವ ‘ಅಸಂಖ್ಯ ಪ್ರಮಥರ ಗಣಮೇಳ’ಕ್ಕೆ ಅದ್ಧೂರಿ ಸಿದ್ಧತೆ: ಬಸವಶಾಂತಲಿಂಗಶ್ರೀ

ಜಾಗತಿಕ ಶಾಂತಿಗಾಗಿ ಸರ್ವಶರಣರ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಇತಿಹಾಸದ ರೋಚಕ ಅಂಶ. 21ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ‘ಅಸಂಖ್ಯ ಪ್ರಮಥರ ಗಣಮೇಳ’ ಮತ್ತು ಸರ್ವಶರಣರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ನಗರದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ತಿಳಿಸಿದರು.

ಬೆಂಗಳೂರು ನಗರದ ನಂದಿ ಗ್ರೌಂಡ್ಸ್‌ (ಬಿಐಇಸಿ), ನೈಸ್‌ ರಸ್ತೆ ಪಕ್ಕ, ತುಮಕೂರು ರಸ್ತೆ ಇಲ್ಲಿ ಫೆ.16ರಂದು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ, ಬಸವಕೇಂದ್ರ, ಬಸವ ಸಂಘಟನೆ, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಸರ್ವಜನಾಂಗದ ಮಠಾಧೀಶರ ಸಹಯೋಗದೊಂದಿಗೆ ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

ಶಿವಯೋಗ ಸಂಭ್ರಮ:

ಬೆಳಿಗ್ಗೆ 7.45ಕ್ಕೆ ಶಿವಮೂರ್ತಿ ಮುರುಘಾ ಶರಣರು ಶಿವಯೋಗ ಸಂಭ್ರಮವನ್ನು ಮತ್ತು ಬಿಬಿಎಂಪಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಮಾಜಿ ಸಚಿವ ಎಚ್‌. ಆಂಜನೇಯ, ದಲಿತ ಮುಖಂಡ ಡಾ.ಎಂ. ವೆಂಕಟಸ್ವಾಮಿ, ಡಾ.ಕೆ.ಎಂ. ಸುರೇಶ್‌, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್‌ ಹಾಗೂ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.

ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನವು ಬೆಳಿಗ್ಗೆ 10.30ಕ್ಕೆ ನೆರವೇರಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದ ರವಿಶಂಕರ ಗುರೂಜಿ, ಮಂತ್ರಾಲಯದ ರಾಘವೇಂದ್ರಸ್ವಾಮಿಮಠದ ಸುಬುಧೇಂದ್ರ ತೀರ್ಥರು, ಕಾಗಿನೆಲೆಯ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕೂಡಲಸಂಗಮದ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಉದ್ಘಾಟನೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಬಿ.ಶ್ರೀರಾಮುಲು ಮತ್ತು ಬಿ.ವೈ.ವಿಜಯೇಂದ್ರ ಇತರರು ಭಾಗವಹಿಸಲಿದ್ದಾರೆ ಎಂದರು. 

ಮಧ್ಯಾಹ್ನ 3 ಗಂಟೆಗೆ ‘ಸಂಗೀತ ಸಂಭ್ರಮ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಶಾಸಕರು, ಗಣ್ಯರು, ಮಠಾಧೀಶರು ಭಾಗವಹಿಸಲಿದ್ದಾರೆ. ಚಲನಚಿತ್ರ ಹಿನ್ನೆಲೆ ಗಾಯಕ ವಿಜಯಪ್ರಕಾಶ್‌ ಸಂಗೀತ ಸಂಭ್ರಮ ನಡೆಸಿಕೊಡಲಿದ್ದಾರೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ, ರಾಣೆಬೆನ್ನೂರು ವಿರಕ್ತಮಠದ ಗುರುಬಸವ ಸ್ವಾಮೀಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು