ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಸೀಲ್‌ಡೌನ್‌ ಪ್ರದೇಶದಲ್ಲಿ ಓಡಾಟಕ್ಕೆ ನಿರ್ಬಂಧ

ಮನೆ ಬಾಗಿಲಿಗೆ ಅಗತ್ಯ ವಸ್ತು ಪೂರೈಸಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ
Last Updated 7 ಮೇ 2020, 15:52 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್ ಪಾಸಿಟಿವ್ ಪ್ರಕರಣದ ಹಿನ್ನೆಲೆಯಲ್ಲಿ ‘ಸೀಲ್‍ಡೌನ್’ ಆಗಿರುವ ಸವಣೂರ ಪಟ್ಟಣ ರಾಜೀವಗಾಂಧಿ ನಗರ ಹಾಗೂ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ಸಾರ್ವಜನಿಕ ಓಡಾಟಕ್ಕೆ ಅವಕಾಶ ನೀಡಬೇಡಿ. ಅಗತ್ಯ ವಸ್ತುಗಳನ್ನು ಹೋಂ ಡೆಲಿವರಿ ನೀಡಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ಸವಣೂರು ಸೀಲ್‍ಡೌನ್ ಪ್ರದೇಶದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಗುರುವಾರ ಉಪವಿಭಾಗಾಧಿಕಾರಿ ಹಾಗೂ ತಾಲ್ಲೂಕು ತಹಶೀಲ್ದಾರರೊಂದಿಗೆ ವಿಡಿಯೊ ಸಂವಾದದ ಮೂಲಕ ಮಾತನಾಡಿ ಮಾಹಿತಿ ಪಡೆದರು.

ಸೀಲ್‍ಡೌನ್ ಆಗಿರುವ ಪ್ರದೇಶದಲ್ಲಿ ಉಚಿತ ಹಾಲು ವಿತರಣೆಗೆ ಆದೇಶ ಮಾಡಲಾಗಿದೆ. ಈಗಾಗಲೇ ಉಚಿತವಾಗಿ ಆಹಾರ ಕಿಟ್‍ಗಳನ್ನು ಸಹ ವಿತರಿಸಲಾಗಿದೆ. ದಾನಿಗಳಿಂದ ನೆರವು ಪಡೆದು ತರಕಾರಿ ವಿತರಣೆಗೆ ಸಾಧ್ಯವಾದರೆ ಕ್ರಮವಹಿಸಿ ಎಂದು ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.

ಈ ಪ್ರದೇಶದಲ್ಲಿ ಕಡ್ಡಾಯವಾಗಿ ಮನೆಯ ಶೌಚಾಲಯಗಳನ್ನೇ ಬಳಸುವಂತೆ ತಿಳಿವಳಿಕೆ ನೀಡಬೇಕು. ಬಯಲು ಬಹಿರ್ದೆಸೆಗೆ ನಿರ್ಬಂಧ ಹಾಕಬೇಕು. ಶೌಚಾಲಯ ವ್ಯವಸ್ಥೆ ಇಲ್ಲದವರಿಗೆ ಪುರಸಭೆಯಿಂದ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾಹಿತಿ ನೀಡಿ, ಮನೆ– ಮನೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಸೀಲ್‍ಡೌನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಪಾಸ್ ಹೊಂದಿದ ವಾಹನಗಳು, ಗೂಡ್ಸ್ ವಾಹನಗಳಿಗೆ ಮಾತ್ರ ಸವಣೂರ ಪಟ್ಟಣದ ಮೂಲಕ ರಾಜ್ಯ ಹೆದ್ದಾರಿ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಆಶಾ ಕಾರ್ಯಕರ್ತೆಯರೊಂದಿಗೆ ಸವಣೂರ ಪಟ್ಟಣದ ಎಸ್.ಎಂ.ಕೃಷ್ಣ ನಗರದಲ್ಲಿನ 374 ಮನೆಗಳಿಗೆ ಭೇಟಿ ನೀಡಿ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ ಏಳು ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಗೆ ಅನ್ನಪೂರ್ಣ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT