ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಪ್ರತ್ಯೇಕ ಡಿಸಿಸಿ ಬ್ಯಾಂಕ್: ಅಧಿವೇಶನದಲ್ಲಿ ಚರ್ಚೆ

ಅಗಡಿ ಗ್ರಾಮದಲ್ಲಿ ಗೋದಾಮು ಉದ್ಘಾಟನೆ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ
Published 11 ಫೆಬ್ರುವರಿ 2024, 5:10 IST
Last Updated 11 ಫೆಬ್ರುವರಿ 2024, 5:10 IST
ಅಕ್ಷರ ಗಾತ್ರ

ಹಾವೇರಿ: ‘ಸಾಲ ಮಾಡಿ ಬೆಳೆ ಬೆಳೆಯುವ ರೈತರ ಬದುಕು ಹಸನಾಗಬೇಕಿದೆ. ಸರ್ಕಾರ ಹಾಗೂ ಸಹಕಾರ ಸಂಸ್ಥೆಗಳು ರೈತರ ಕಷ್ಟಕ್ಕೆ ಸ್ಪಂದಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಾವೇರಿ ಮತ್ತು ಗದಗ ಜಿಲ್ಲೆಗಳಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಕುರಿತು ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಚರ್ಚಿಸಲಾಗುವುದು’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ₹2.26 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಗೋದಾಮು ಹಾಗೂ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎರಡು ಜಿಲ್ಲೆಗಳಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯ ಸಾಧಕ–ಬಾಧಕಗಳ ಬಗ್ಗೆ ಕೂಡ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು. ಸಚಿವ ಶಿವಾನಂದ ಪಾಟೀಲ ಅವರಿಗೆ ವಿಜಯಪುರದಿಂದ ಬಾಗಲಕೋಟೆಗೆ ಬ್ಯಾಂಕ್‌ ಪ್ರತ್ಯೇಕಗೊಳಿಸಿದ ಅನುಭವವಿದೆ. ಅವರ ಅನುಭವವನ್ನೂ ಪಡೆದು ಧಾರವಾಡದ ಕೆಸಿಸಿ ಬ್ಯಾಂಕ್‌ನಿಂದ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಜಾತಿಗೆ ಮಣೆ ಹಾಕಬೇಡಿ: ‘ಸಹಕಾರ ಸಂಘಗಳನ್ನು ಜಾತಿ, ರಾಜಕಾರಣ ಇಲ್ಲದಂತೆ ಮುನ್ನಡೆಸಬೇಕಾಗಿದೆ. ಜನಪರವಾಗಿ ಸಂಘಗಳು ಕೆಲಸ ಮಾಡಬೇಕು. ಸಹಕಾರ ಆಂದೋಲನ ಜನರ ಆಂದೋಲನವಾಗಬೇಕು. ಸಹಕಾರ ಆಂದೋಲನ ಗ್ರಾಮೀಣ ಜನರಿಗೆ ಆರ್ಥಿಕ ಸದೃಢತೆ ನೀಡಿದೆ. ಕುರಿಯನ್ ದೂರದೃಷ್ಟಿಯಿಂದ ಹೈನುಗಾರಿಕೆ ಕ್ಷೇತ್ರ ಬೆಳೆದು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು’ ಎಂದರು. 

ಕಾನೂನು ಸಚಿವ ಎಚ್.ಕೆ.ಪಾಟೀಲ‌ ಮಾತನಾಡಿ, ‘ಧಾರವಾಡದಿಂದ ಹಾವೇರಿ ಮತ್ತು ಗದಗ ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷಗಳಾದರೂ ಪ್ರತ್ಯೇಕ ಜಿಲ್ಲಾ ಬ್ಯಾಂಕ್‌ ಸ್ಥಾಪನೆ ಸಾಧ್ಯವಾಗಿಲ್ಲ. ಈ ಬಗ್ಗೆ ಕೇವಲ ಪತ್ರ ಬರೆದರೆ ಆಗಲ್ಲ, ಹತ್ತಾರು ಬಾರಿ ಸಂಬಂಧಪಟ್ಟವರನ್ನು ಭೇಟಿಯಾಗಬೇಕು. ಎರಡು ವರ್ಷದಲ್ಲಿ ಪ್ರತ್ಯೇಕ ಜಿಲ್ಲಾ ಬ್ಯಾಂಕ್ ಮಾಡಲು ನಿರ್ಧರಿಸಿದರೆ ಅದಕ್ಕೆ ಅಗತ್ಯ ಸಹಕಾರ‌ ನೀಡುತ್ತೇವೆ. ಇಲ್ಲಿಯವರೇ ಮುಖ್ಯಮಂತ್ರಿಯಾದರೂ ಅದು ಸಾಧ್ಯವಾಗಿಲ್ಲ. ನೀವು ಮಾಡಿಕೊಡಿ’ ಎಂದು ಸಚಿವ ರಾಜಣ್ಣ ಅವರಲ್ಲಿ ಮನವಿ ಮಾಡಿದರು.

₹14 ಕೋಟಿ ಠೇವಣಿ: ‘ಸಹಕಾರ ಚಳವಳಿಗೆ ಅಖಂಡ ಧಾರವಾಡ ಜಿಲ್ಲೆಯ ಕೊಡುಗೆ ಶ್ಲಾಘನೀಯ. ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್‌ ಕನಸಿಗೆ ಪೂರಕವಾಗಿ ಗ್ರಾಮಕ್ಕೊಂದು ಪಂಚಾಯಿತಿ ತೆರೆಯಲಾಗಿದೆ. 6 ಸಾವಿರಕ್ಕಿಂತ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಅಗಡಿ ಗ್ರಾಮದ ಕೃಷಿ ಪತ್ತಿನ ಸಂಘದಲ್ಲಿ ₹14 ಕೋಟಿಯನ್ನು ಜನರು ಠೇವಣಿ ಇಟ್ಟಿದ್ದಾರೆ‌. ಅಖಂಡ ಧಾರವಾಡ ಜಿಲ್ಲೆಗೆ ಅಗಡಿ ಕೃಷಿ ಪತ್ತಿನ ಸಹಕಾರ ಸಂಘ ಮಾದರಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಶ್ಲಾಘಿಸಿದರು. 

ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಿ: ‘ಈ ಬಾರಿ ಬರಗಾಲ ಭೀಕರವಾಗಿದೆ. ರೈತ ಸಂಕಷ್ಟದಲ್ಲಿದ್ದಾನೆ. ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ದ್ರಾಕ್ಷಿ ಬೆಲೆ ಕುಸಿದಿದೆ. ಎಣ್ಣೆ ಉತ್ಪಾದನೆ ಕುಸಿತವಾಗಿದ್ದು, ಹೊರ ದೇಶದಿಂದ ಆಮದು ಮಾಡಿಕೊಳ್ಳುವ ದುಃಸ್ಥಿತಿ ಬಂದಿದೆ. ಎಣ್ಣೆ ಕಾಳು ಬೆಳೆಯುವುದು ಕುಂಠಿತವಾಗಿದೆ. ವೈಜ್ಞಾನಿಕ ಕೃಷಿ ಮಾಡಿದರೆ, ಬಾಳಲ್ಲಿ ಬೆಳಕು ಕಾಣಬಹುದು. ಬಹಳ ವರ್ಷಗಳ ಬೇಡಿಕೆಯಾದ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಸಹಕಾರ ಸಚಿವರು ಮತ್ತು ಕಾನೂನು ಸಚಿವರು ನೆರವು ನೀಡಲಿ’ ಎಂದು ಹೇಳಿದರು.

ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಕೊಟ್ರೇಶಪ್ಪ ಬಸೇಗಣ್ಣಿ, ಬಸಪ್ಪ ಬಸೇಗಣ್ಣಿ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಸುರೇಶಗೌಡ ಪಾಟೀಲ, ಕೆ.ಮುನಿಯಪ್ಪ,ಅಜ್ಮತ್‌ ಉಲ್ಲಾಖಾನ್‌ ರಂಗನಾಥ ಎಸ್‌., ಪ್ರೇಮವ್ವ ಹೊಮ್ಮರಡಿ, ಸಂಜೀವಕುಮಾರ ನೀರಲಗಿ ಇದ್ದರು. 

ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವ ಏಕೈಕ ರಾಜ್ಯ ಕರ್ನಾಟಕ. ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ರೈತರಿಗೆ ಸರಳವಾಗಿ ಸಾಲ ಸಿಗುವುದಿಲ್ಲ. ಕೃಷಿ ಪತ್ತಿನ ಸಂಘಗಳು ಜನಸ್ನೇಹಿಯಾಗಿವೆ.
ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

‘ರೈತಬೆಲೆ ನಿಗದಿ ಮಾಡುವಂತಾಗಲಿ’

‘ಕೃಷಿ ಉತ್ಪನ್ನದ ಬೆಲೆಯನ್ನು ರೈತ ನಿರ್ಣಯಿಸುವ ಪರಿಸ್ಥಿತಿ ಈಗ ಇಲ್ಲ. ಭೂಮಿ ಬಂಡವಾಳ ಪರಿಶ್ರಮ ಎಲ್ಲವೂ ರೈತನದ್ದೇ ಆಗಿದ್ದರೂ ಕೊಳ್ಳುವವರು ಬೆಲೆ ನಿರ್ಣಯಿಸುತ್ತಾನೆ. ಫಸಲನ್ನು ಮಾರುಕಟ್ಟೆಗೆ ಪೂರೈಕೆ ಮಾಡಿದಾಗ ವ್ಯಾಪಾರಿಗಳು ದರ ನಿರ್ಧರಿಸುತ್ತಾರೆ. ರೈತರ ಅಸಹಾಯಕತೆಯನ್ನು ಮಧ್ಯವರ್ತಿಗಳು ದುರಯಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಬೇಸರ ವ್ಯಕ್ತಪಡಿಸಿದರು.

‘ಮಾರುಕಟ್ಟೆಯಲ್ಲಿ ಶೋಷಣೆ ಮುಕ್ತ ಸಮಾಜ ನಿರ್ಮಾಣ ಆಗಬೇಕಾದರೆ ತಾವು ಬೆಳೆದ ಬೆಳೆಗೆ ರೈತರೇ ಬೆಲೆ ನಿರ್ಧರಿಸಬೇಕು. ಈ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಳ್ಳಬೇಕು’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಧ್ವನಿಗೂಡಿಸಿದರು.

ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ: ಎಚ್‌.ಕೆ.ಪಾಟೀಲ

‘ಮೀಸಲಾತಿಯನ್ನು ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೆ ತಂದಿದ್ದೇವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ ತರುವ ಮೂಲಕ ಸಚಿವ ರಾಜಣ್ಣ ಅವರು ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಾರ್ವತ್ರಿಕವಾಗಿ ಎಲ್ಲ ವರ್ಗದ ಜನರು ಸಹಕಾರ ಸಂಘಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಸದುದ್ದೇಶದಿಂದ ಸಚಿವ ಸಂಪುಟದಲ್ಲಿ ಸರ್ವಾನುಮತದಿಂದ ಸಹಕಾರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT