ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾಂವಿ | ಬರದ ಬೆನ್ನಲ್ಲೇ ಮೇವು ಕೊರತೆ: ಆತಂಕ

ಪುಟ್ಟಪ್ಪ ಲಮಾಣಿ
Published 7 ಡಿಸೆಂಬರ್ 2023, 3:02 IST
Last Updated 7 ಡಿಸೆಂಬರ್ 2023, 3:02 IST
ಅಕ್ಷರ ಗಾತ್ರ

ತಡಸ (ದುಂಡಶಿ): ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ದುಂಡಶಿ ಹೋಬಳಿ ಸೇರಿದಂತೆ ಶಿಗ್ಗಾಂವಿ ತಾಲ್ಲೂಕಿನಲ್ಲಿ ಮೇವಿನ ಕೊರತೆಯಾಗಿದ್ದು, ರೈತರು ಮೇವು ಸಂಗ್ರಹಿಸಲು ನಿತ್ಯ ಊರೂರು ತಿರುಗುವ ಸ್ಥಿತಿ ನಿರ್ಮಾಣವಾಗಿದೆ.

ಬರದಿಂದಾಗಿ ರೈತರು ಬೆಳೆ ನಷ್ಟದ ಸುಳಿಗೆ ಸಿಲುಕಿದ್ದಾರೆ. ಮಳೆ ಕೊರತೆಯಿಂದಾಗಿ ಹಲವೆಡೆ ಬೆಳೆ ಒಣಗಿದೆ. ಅರ್ಧದಷ್ಟು ಸಹ ಬೆಳೆ ಕೈ ಸೇರುವ ನಿರೀಕ್ಷೆ ಇಲ್ಲ. ಇದರ ನಡುವೆಯೇ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕ ಶುರುವಾಗಿದೆ.

ಜಾನುವಾರುಗಳ ಮೇವಿನ ಕೊರತೆ ತೀವ್ರವಾಗುವುದಕ್ಕೆ ಮುಂಚೆ, ಅಗತ್ಯ ಪ್ರಮಾಣದ ಮೇವು ಬೆಳೆಯುವುದಕ್ಕಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯು ರೈತರಿಗೆ ಮೆಕ್ಕೆಜೋಳ, ಅಲಸಂದೆ, ಬಿಳಿಜೋಳ ಹಾಗೂ ಇತರ ಮೇವಿನ ಬೀಜಗಳನ್ನೊಳಗೊಂಡ ಮೇವಿನ ಕಿಟ್ ವಿತರಣೆ ಮಾಡಲು ಮುಂದಾಗಬೇಕಾಗಿದೆ.

ಸಮರ್ಪಕ ಮಳೆಯಾಗದೆ ಭತ್ತದ ಬೆಳೆಯು ಬೆಳೆಯದ ಮೇವು ಪೂರೈಕೆಯಾಗಿಲ್ಲ. ಇದರಿಂದಾಗಿ, ಮುಂದೆ ಮೇವು ಕೊರತೆ ಉಲ್ಭಣಿಸುವ ಆತಂಕ ರೈತರನ್ನು ಕಾಡುತ್ತಿದೆ. ಜಾನುವಾರುಗಳ ಮೇವಿನ ವಿಷಯದಲ್ಲೂ ಸರ್ಕಾರದ ನಿರ್ಲಕ್ಷ್ಯ ಕುರಿತು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‌ಅಗತ್ಯ  ಮೇವು ಪೂರೈಕೆಗೆ ಮನವಿ

‘ಸರ್ಕಾರ ಮೇವು ಪೂರೈಕೆ ವಿಷಯದಲ್ಲಿ ಮೀನಮೇಷ ಎಣಿಸಬಾರದು. ಜಾನುವಾರುಗಳು ನಮ್ಮ ರೈತರ ಜೀವನಾಡಿಗಳು. ಹಾಲು ಉತ್ಪಾದನೆ ಜೊತೆಗೆ, ಕೃಷಿ ಚಟುವಟಿಕೆಗಳಿಗೆ ರೈತರು ಜಾನುವಾರುಗಳನ್ನೇ ನೆಚ್ಚಿಕೊಂಡಿದ್ದಾರೆ. ಬರದಿಂದ ಬೆಳೆ ನಷ್ಟದಲ್ಲಿರುವ ರೈತರಿಗೆ ಜಾನುವಾರುಗಳಿಗೆ ಅಗತ್ಯ ಮೇವು ಕೊಡಲಾಗದ ಸ್ಥಿತಿ ಎದುರಾಗಿದೆ. ಸರ್ಕಾರ ಅಂತಹವರಿಗೆ ಅಗತ್ಯ ಪ್ರಮಾಣದ ಮೇವು ಪೂರೈಕೆ ಮಾಡಬೇಕು’ ಎಂದು ರೈತ ಮುಖಂಡ ಹಸಿರು ಸೇನೆ ವರುಣಗೌಡ ಪಾಟೀಲ್ ಒತ್ತಾಯಿಸಿದರು.

‘ಕೆಲವು ಕಡೆಗಳಲ್ಲಿ ಮಳೆ ಉತ್ತವಾಗಿದ್ದು, ಅಲ್ಲಿ ಸದ್ಯಕ್ಕೆ ಮೇವು ಕೊರತೆಯಾಗಿಲ್ಲ. ಆದರೆ ಮಳೆ ಇಲ್ಲದೇ ಕೆಲವು ಗ್ರಾಮಗಳಲ್ಲಿ ಈಗಾಗಲೇ ಮೇವಿನ ಕೊರತೆಯಾಗಿದೆ. ಸರ್ಕಾರ ಕೂಡಲೇ ಮುನ್ನೆಚ್ಚರಿಕೆ ವಹಿಸಿ ಕುಡಿಯುವ ನೀರು ಮತ್ತು ಮೇವಿನ ಬಗ್ಗೆ ಗಮನ ಹರಿಸಬೇಕು’ ಎಂದು ರಾಜು ಮಾಸ್ತಿ ಆಗ್ರಹಿಸಿದರು.

ನೀರಾವರಿ ಹೊಂದಿರುವ ರೈತರು ತಮ್ಮ ಹೊಲದಲ್ಲಿ ಹಸಿ ಮೇವನ್ನು ಬೆಳೆಯಲು ಹೋಬಳಿ ಮಟ್ಟದ ಪಸು ಆಸ್ಪತ್ರೆ ಸಂಪರ್ಕಿಸಿ ಬೀಜ ಪಡೆಯಬಹುದು.

ಶಿಗ್ಗಾಂವಿ ತಾಲೂಕಿನ ಹೊಸೂರು ಎತ್ತಿನಹಳ್ಳಿ ಗ್ರಾಮದ ರೈತರು ಭತ್ತ ಬಂದಿಲ್ಲ ಎಂದು ಹುಲ್ಲನ್ನು ಬೇರೆ ತಾಲೂಕು ಜಿಲ್ಲೆಗೆ ಕಳುಸಿತಿದ್ದು, ಹಿಂಗಾರು ಬೆಳೆಯು ಸರಿಯಾಗಿ ಬರದಿದ್ದರೆ ತಾಲೂಕಿಗೆ ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಮೇವು ಕೊರತೆಯಾಗುವ ಸಂಭವ ಇದೆ ಎಂದು ಸಹಾಯಕ ಪಶು ನಿರ್ದೇಶಕರು ಡಾ.ರಾಜೇಂದ್ರ ಅರಳೇಶ್ವರ ಮಾಹಿತಿ ನೀಡಿದರು.

ಕಡಿಮೆ ಬೆಲೆಗೆ ಜಾನುವಾರು ಮಾರಾಟ

ತಡಸ (ದುಂಡಶಿ): ರಾಜ್ಯದಲ್ಲಿ ಬರಗಾಲ ತೀವ್ರವಾಗುತ್ತಿದ್ದು, ಹಲವು ಭಾಗಗಳಲ್ಲಿ ಮೇವು ಕೊರತೆ ಎದುರಾಗಿರುವುದರಿಂದ ರೈತರು ಜಾನುವಾರುಗಳನ್ನು ಮಾರಾಟ ಮಾಡುವ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ. ಹೋಬಳಿಯ ಹಲವಡೆ ಇದೇ ಪರಿಸ್ಥಿತಿ ಎದುರಾಗಿದ್ದು, ಕಡಿಮೆ ದರಕ್ಕೆ ಜಾನುವಾರುಗಳನ್ನು ಮಾರಾಟ ಮಾಡಲು ರೈತರು ಮುಂದಾಗುತ್ತಿದ್ದಾರೆ.

‘ಶಿಗ್ಗಾಂವಿ ತಾಲೂಕಿನ ಎಪಿಎಂಸಿ ಮಾರುಕಟ್ಟೆಯಲ್ಲಿ ನೂರಾರು ರೈತರು ₹30 ರಿಂದ ₹40 ಸಾವಿರ ಬೆಲೆ ಬಾಳುವ ತಮ್ಮ ಜಾನುವಾರುಗಳನ್ನು ಕೇವಲ ₹10ರಿಂದ ₹15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಖರೀದಿಸಲು ರೈತರು ಮುಂದಾಗುತ್ತಿಲ್ಲ. ಬದಲಾಗಿ ಕಸಾಯಿಖಾನೆಗಳಿಗೆ ಜಾನುವಾರುಗಳು ಮಾರಾಟವಾಗುತ್ತಿವೆ‘ ಎಂದು ಚಾಯಪ್ಪ ಅಳಲು ತೋಡಿಕೊಂಡಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT