ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ರೈಲ್ವೆ ಇಲಾಖೆ ಉದ್ಯೋಗಿಗಳಿಗಾಗಿ ವಿಶೇಷ ರೈಲು!

ಹುಬ್ಬಳ್ಳಿ–ಹರಿಹರದ ನಡುವೆ ಸಂಚಾರ: 60 ನೌಕರರ ಓಡಾಟಕ್ಕೆ ನಿತ್ಯ ₹1.40 ಲಕ್ಷ ವೆಚ್ಚ
Last Updated 9 ಏಪ್ರಿಲ್ 2020, 5:59 IST
ಅಕ್ಷರ ಗಾತ್ರ

ಹಾವೇರಿ: ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣ ಬಸ್‌, ರೈಲು ಮತ್ತು ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ, ರೈಲ್ವೆ ನೌಕರರನ್ನು ಉದ್ಯೋಗಕ್ಕೆ ಕರೆತರುವುದಕ್ಕಾಗಿಯೇ ಹುಬ್ಬಳ್ಳಿ–ಹರಿಹರದ ನಡುವೆ ಎರಡು ವಿಶೇಷ ರೈಲುಗಳನ್ನು ಬಿಡಲಾಗಿದೆ.

ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ.ಹುಬ್ಬಳ್ಳಿ ನಿಲ್ದಾಣದಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ಎರಡು ಬೋಗಿ ಮತ್ತು ಎಂಜಿನ್‌ ಒಳಗೊಂಡ ವಿಶೇಷ ರೈಲು 131 ಕಿ.ಮೀ. ಅಂತರದಲ್ಲಿರುವ ಹರಿಹರ ನಿಲ್ದಾಣವನ್ನು ಬೆಳಿಗ್ಗೆ 9ಕ್ಕೆ ತಲುಪುತ್ತದೆ. ಮತ್ತೆ ಸಂಜೆ 6.15ಕ್ಕೆ ಹರಿಹರದಿಂದ ಹೊರಟು ರಾತ್ರಿ 8.45ಕ್ಕೆ ಹುಬ್ಬಳ್ಳಿಗೆ ಹಿಂದಿರುಗುತ್ತದೆ. ಇದೇ ರೀತಿ ಮತ್ತೊಂದು ವಿಶೇಷ ರೈಲು ಹರಿಹರದಿಂದಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಹರಿಹರಕ್ಕೆ ಸಂಚರಿಸುತ್ತದೆ.

ಈ ಎರಡೂ ವಿಶೇಷ ರೈಲುಗಳಲ್ಲಿ ಸುಮಾರು 60ರಿಂದ 70 ನೌಕರರು ಪ್ರಯಾಣ ಮಾಡುತ್ತಾರೆ. ಕುಂದಗೋಳ, ಸಂಶಿ, ಗುಡಗೇರಿ, ಯಲವಿಗಿ, ಸವಣೂರು, ಕರಜಗಿ, ಹಾವೇರಿ, ಬ್ಯಾಡಗಿ, ದೇವರಗುಡ್ಡ, ರಾಣೆಬೆನ್ನೂರು, ಚಳಗೇರಿ, ಕುಮಾರಪಟ್ಟಣ ನಿಲ್ದಾಣಗಳಿಗೆ ಆಯಾ ಕಚೇರಿಯ ನೌಕರರಾದ ಸ್ಟೇಷನ್ ಮಾಸ್ಟರ್‌, ಪಾಯಿಂಟ್ಸ್‌ಮನ್‌, ಎಂಜಿನಿಯರ್‌, ಗ್ಯಾಂಗ್‌ಮನ್‌ಗಳು ಸಂಚರಿಸುತ್ತಾರೆ.

ನಿತ್ಯ ₹1.40 ಲಕ್ಷ ವೆಚ್ಚ!
ದಿನಕ್ಕೆ ಇಂಧನಕ್ಕಾಗಿಯೇ ₹1.40 ಲಕ್ಷ ವೆಚ್ಚವನ್ನು ಭರಿಸುತ್ತಿದೆ ರೈಲ್ವೆ ಇಲಾಖೆ. ಒಮ್ಮೆ ರೈಲು ನಿಂತು ಹೊರಟರೆ 10 ಲೀಟರ್‌ ಡೀಸೆಲ್‌ ಖರ್ಚಾಗುತ್ತದೆ. ಹುಬ್ಬಳ್ಳಿ ಮತ್ತು ಹರಿಹರದ ನಡುವೆ 12 ನಿಲ್ದಾಣಗಳು ಬರುತ್ತವೆ. ಒಬ್ಬ ಅಥವಾ ಇಬ್ಬರು ನೌಕರರಿದ್ದರೂ ಪ್ರತಿ ನಿಲ್ದಾಣದಲ್ಲೂ ರೈಲು ನಿಂತು ಹೊರಡಬೇಕು.

ಲಾಕ್‌ಡೌನ್‌ಗೂ ಮುನ್ನ, ರೈಲ್ವೆ ನೌಕರರು ಪಾಸ್‌ಗಳನ್ನು ತೋರಿಸಿ, ಪ್ಯಾಸೆಂಜರ್‌ ರೈಲುಗಳಲ್ಲಿ ಸಂಚರಿಸುತ್ತಿದ್ದರು. ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಣೆಯಾದ ನಂತರ ತಮ್ಮ ಖಾಸಗಿ ವಾಹನಗಳಲ್ಲಿ ಉದ್ಯೋಗಕ್ಕೆ ಬರುತ್ತಿದ್ದರು. ಆದರೆ ದಾರಿ ಮಧ್ಯೆ ಪೊಲೀಸರು ತಡೆದು, ಗುರುತಿನ ಚೀಟಿ ಇದ್ದರೂ ನಿತ್ಯ ಕಿರಿಕಿರಿ ಮಾಡುತ್ತಿದ್ದರು. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಮೊದಲಿಗೆ, ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಸಂಪಿಗೆವರೆಗೆ ವಿಶೇಷ ರೈಲು ಆರಂಭವಾಯಿತು ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.

ಲಾಕ್‌ಡೌನ್‌ಗೂ ಮುನ್ನ ಈ ಮಾರ್ಗದಲ್ಲಿ ನಿತ್ಯ 35 ರೈಲುಗಳು ಸಂಚರಿಸುತ್ತಿದ್ದವು. ಈಗ 5ರಿಂದ 6 ‘ಗೂಡ್ಸ್‌ ಟ್ರೈನ್‌’ಗಳು ಓಡಾಡುತ್ತವೆ.ಎಷ್ಟೇ ರೈಲುಗಳು ಓಡಾಡಿದರೂ ನಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕು ಎನ್ನುತ್ತಾರೆ ರೈಲ್ವೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT