ಶುಕ್ರವಾರ, ಮೇ 14, 2021
25 °C
ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ವಿಡಿಯೊ ಸಂವಾದ: ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಏಪ್ರಿಲ್‌ 24ರಿಂದ ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಮಾಡಿ. ತಾಲ್ಲೂಕುಗಳಲ್ಲಿ ಕೋವಿಡ್ ನಿಯಂತ್ರಣ, ಚಿಕಿತ್ಸೆ, ಪರೀಕ್ಷೆ, ಲಸಿಕೆ ಒಳಗೊಂಡಂತೆ ವೈದ್ಯರ ಬೇಕು, ಬೇಡಗಳ ಕುರಿತು ಮುಂದಾಳತ್ವ ವಹಿಸಿ ಅಗತ್ಯ ನೆರವು ಹಾಗೂ ಮಾರ್ಗದರ್ಶನ ನೀಡುವಂತೆ ಜಿಲ್ಲೆಯ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಕೋವಿಡ್ ಮಾರ್ಗಸೂಚಿಗಳ ಅನುಷ್ಠಾನ ಕುರಿತಂತೆ ತಾಲ್ಲೂಕು ತಹಶೀಲ್ದಾರಗಳೊಂದಿಗೆ ‘ವಿಡಿಯೊ ಸಂವಾದ’ ನಡೆಸಿದ ಜಿಲ್ಲಾಧಿಕಾರಿ, ಕೋವಿಡ್ ಕೇರ್ ಸೆಂಟರ್‌ಗಳಿಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಸಿದ್ಧ ಮಾಡಿಕೊಳ್ಳಿ. ಜತೆಗೆ ಸೂಕ್ತ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಆಮ್ಲಜನಕ, ಲಸಿಕೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳ ಕೊರತೆ, ತಾಂತ್ರಿಕ ಸಮಸ್ಯೆಗಳು ಉಂಟಾದರೆ ನನ್ನ ಗಮನಕ್ಕೆ ತನ್ನಿ. ತತ್‌ಕ್ಷಣದಲ್ಲಿ ಸಮಸ್ಯೆ ನಿವಾರಣೆ ಮಾಡಲಾಗುವುದು. ನಿತ್ಯವೂ ತಾಲ್ಲೂಕಿನ ಪಾಸಿಟಿವ್‍ ಪ್ರಕರಣಗಳ ಸಂಖ್ಯೆ, ಸಂಪರ್ಕ ಪತ್ತೆ, ಜ್ವರ ತಪಾಸಣೆ ಹಾಗೂ ಲಸಿಕಾ ಪ್ರಗತಿಯ ಕುರಿತಂತೆ ಮಾಹಿತಿ ಹೊಂದಿರಬೇಕು. ಆಸ್ಪತ್ರೆಗಳಲ್ಲಿ ಕೋವಿಡ್ ಪಾಸಿಟಿವ್ ಹಾಗೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದರು. 

ಎಲ್ಲರೂ ಕೈಜೋಡಿಸಿ: ಕೋವಿಡ್ ನಿಯಂತ್ರಣದ ಕಾರ್ಯ ಕೇವಲ ಆರೋಗ್ಯ ಇಲಾಖೆಯದ್ದು ಮಾತ್ರವಲ್ಲ. ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರ ಜಂಟಿ ಹೊಣೆಗಾರಿಕೆಯಾಗಿದೆ. ಪ್ರಸ್ತುತ ಕೋವಿಡ್ ಕಾಲದಲ್ಲಿ ಜಾಗೃತರಾಗಿ ಕರ್ತವ್ಯ ನಿರ್ವಹಿಸಿ. ರಜೆ ಹಾಕಬೇಡಿ, ಕೇಂದ್ರ ಸ್ಥಾನಬಿಡಬೇಡಿ. ಎಲ್ಲ ಅಧಿಕಾರಿಗಳು ಸಕಾಲಕ್ಕೆ ಸಂಪರ್ಕಕ್ಕೆ ಸಿಗಬೇಕು ಎಂದು ತಾಕೀತು ಮಾಡಿದರು. 

ಸಾಧ್ಯವಾದಷ್ಟು ತಾಲ್ಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕು. ಅನಗತ್ಯವಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಬಾರದು. ಆಸ್ಪತ್ರೆಗಳಿಗೆ ಬರುವ ರೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಬೇಕು. ಸಂಖ್ಯೆ ಹೆಚ್ಚಳವಾಗಿ ಸರತಿ ಸಾಲಿನಲ್ಲಿ ನಿಲ್ಲುವಂತಾದವರೆ ಆಸನದ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳಿಗೆ ಜ್ವರದ ಲಕ್ಷಣಗಳು ಕಂಡುಬಂದರೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಕೈಗೊಳ್ಳುವಂತೆ ಸೂಚನೆ ನೀಡಿದರು.

ನಿಷೇಧಾಜ್ಞೆ ಕಠಿಣ ಜಾರಿಗೊಳಿಸಿ: ಪರಸ್ಪರ ಅಂತರ ಹಾಗೂ ಮಾಸ್ಕ್‌ ಧರಿಸುವ ಕುರಿತಂತೆ ಜಾಗೃತಿಯ ಜೊತೆಗೆ ಸರ್ಕಾರದ ಕೋವಿಡ್ ಮಾರ್ಗಸೂಚಿ ಅನುಸಾರ ಸೆಕ್ಷನ್ 144ನ್ನು ಕಠಿಣವಾಗಿ ಜಾರಿಗೊಳಿಸಿ. ಸರ್ಕಾರ ನಿಗದಿಪಡಿಸಿದಂತೆ ಬೆಳಗಿನ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಿ. ಕೆಲಸವಿಲ್ಲದೆ ಅನಗತ್ಯವಾಗಿ ಅಡ್ಡಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದರು. 

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಳ್ಳಳ್ಳಿ, ಡಿವೈಎಸ್ಪಿ ಶಂಕರ ಮಾರಿಹಾಳ ಸೇರಿದಂತೆ ವಿವಿಧ ಇಲಾಖೆಗಳ ಉಪನಿರ್ದೇಶಕರು ಮತ್ತು ಮುಖ್ಯಸ್ಥರು ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು