ಬುಧವಾರ, ಆಗಸ್ಟ್ 17, 2022
23 °C
ವರದಾ ಮತ್ತು ನಾಗರ ಹಳ್ಳಗಳ ಸಂಗಮ ಸ್ಥಳ, ಗುಬ್ಬಿ ನಂಜುಂಡೇಶ್ವರ ಮಠದ ಆಕರ್ಷಣೆ 

ಹೊನ್ನಿನ ಕಣ ಈಗಿನ ‘ಹೊಂಕಣ’

ಮಾಲತೇಶ ಆರ್. Updated:

ಅಕ್ಷರ ಗಾತ್ರ : | |

Prajavani

ತಿಳವಳ್ಳಿ: ಹಾನಗಲ್‌ ತಾಲ್ಲೂಕು ತಿಳವಳ್ಳಿ ಸಮೀಪದ ವರದಾ ನದಿಯ ದಂಡೆಯ ಮೇಲಿರುವ ಪುಟ್ಟ ಗ್ರಾಮವೇ ಹೊಂಕಣ.

ಈಗಿನ ಹಾನಗಲ್ಲನ್ನು ಹಿಂದೆ ‘ವಿರಾಟನಗರ’ ಎಂದು ಕರೆಯಲಾಗುತ್ತಿತ್ತು. ಹಿಂದೆ ವಿರಾಟರಾಜನು ತನ್ನ ಧನ-ಸಂಪತ್ತು ಹಾಗೂ ಹೊನ್ನನ್ನು ರಹಸ್ಯವಾಗಿ ಶೇಖರಿಸಿಡಲು ವಸತಿ ರಹಿತ ಪ್ರದೇಶವನ್ನು ಆಯ್ಕೆ ಮಾಡಿಕೊಂಡನು. ಆ ಪ್ರದೇಶಕ್ಕೆ ‘ಹೊನ್ನಿನ ಕಣ’ ಎಂದು ಕರೆಯಲಾಗುತ್ತಿತ್ತು. ಕಾಲ ಕಳೆದಂತೆ ಈ ಪ್ರದೇಶಕ್ಕೆ ಹೊಂಗಳ, ಹೊಂಕಣ ಎಂದೂ ಕರೆಯಲಾಯಿತು.

ಸಿದ್ಧಪ್ಪನ ಗವಿ: ಹಾನಗಲ್‌ ತಾಲ್ಲೂಕಿನ ಹೊಂಕಣ ಮತ್ತು ಶೇಷಗಿರಿ ಗ್ರಾಮದಲ್ಲಿ ಅಂದಾಜು 2ರಿಂದ 3 ಕಿ.ಮೀ ಅಂತರದಲ್ಲಿರುವ ಈ ಎರಡೂ ಹಳ್ಳಿಗಳ ನಡುವೆ 1 ರಿಂದ 1.5 ಕಿ.ಮೀ ಮಾರ್ಗದಲ್ಲಿ ಗವಿ ಇದೆ. ಶೇಷಗಿರಿ ಗುಡ್ಡದ ಗವಿ ಜೊತೆ ಹೊಂಕಣದ ಗವಿಗಳು ಗತಿಸಿರುವ ಮಹಾಭಾರತದ ಘಟನಾವಳಿಗಳನ್ನು ಪುಷ್ಟೀಕರಿಸುವ ಸಾಧ್ಯತೆಗಳಿವೆ.

ಶೇಷಗಿರಿಯ ಧನ ಕಾಯುವ ಯುವಕರಿಗೆ ಸಿದ್ಧಪ್ಪನ ಗುಡ್ಡದಲ್ಲಿರುವ ಗುಹೆಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ ಹೆಚ್ಚಾಗಿತ್ತು. ಹಾಗೆಯೇ ಹೊಂಕಣ ಗ್ರಾಮದ ಜನತೆಯಲ್ಲೂ ಮೂಡಿದೆ. ನಂತರ ಶೇಷಗಿರಿಯಿಂದ ಒಂದು ಕೋಳಿಯನ್ನು ಮತ್ತು ಹೊಂಕಣದಿಂದ ಬೆಕ್ಕನ್ನು ಗವಿಯೊಳಗೆ ಬಿಡಲಾಯಿತು. ಆದರೆ ಶೇಷಗಿರಿ ಕೋಳಿ ಹೊಂಕಣದಲ್ಲಿ ಬಂದು ಕೂಗಿತು. ಆದರೆ ಹೊಂಕಣದ ಬೆಕ್ಕು ಶೇಷಗಿರಿ ತಲುಪದೆ ಮಾರ್ಗದಲ್ಲಿಯೇ ಸಾವನ್ನಪ್ಪಿತ್ತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ದೇವಾಲಯಗಳು:

ಗುಬ್ಬಿ ನಂಜುಂಡೇಶ್ವರ ಮಠವು ಗುಬ್ಬಿ ಅಜ್ಜ ಅವರಿಂದ ಸ್ಥಾಪಿಸಲ್ಪಟ್ಟಿದೆ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಶಿವಯೋಗಿಗಳು ಲೋಕ ಸಂಚಾರ ಕೈಗೊಂಡು ಇಲ್ಲಿಗೆ ಬಂದರು. 1927ರಲ್ಲಿ ನಾಗರ ಹಳ್ಳ ಮತ್ತು ವರದಾ ನದಿ ಸಂಗಮ ಕ್ಷೇತ್ರದಲ್ಲಿರುವ ಹೋಳಿ ಲಿಂಗೇಶ್ವರ ಜಾತ್ರೆಯನ್ನು ಪ್ರಾರಂಭಿಸಿದರು.

ಜಾತ್ರೆಯ ಕಾಲದಲ್ಲಿ ಮಾತ್ರ ಇಲ್ಲಿದ್ದು, ಅನಂತರ ಪ್ರವಾಸ ಹೊರಡುತ್ತಿದ್ದರು. ಪೂಜ್ಯರು ಬ್ಯಾಡಗಿ ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಲಿಂಗೈಕ್ಯರಾದರು. ಅವರ ಅಪೇಕ್ಷೆ ಮೇರೆಗೆ ಅವರ ಸಮಾಧಿಯನ್ನು ಹೊಂಕಣ ಗ್ರಾಮದಲ್ಲಿ ಮಾಡಲಾಯಿತು. ಅವರ ಗದ್ದುಗೆ ನಿರ್ಮಿಸಲಾಯಿತು. ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ರಾಮಲಿಂಗೇಶ್ವರ ದೇವಾಲಯ, ಬಸವಣ್ಣ, ಮಾರುತಿ, ಗವಿಸಿದ್ಧೇಶ್ವರ ದೇವಾಲಯಗಳಿವೆ. ದ್ಯಾಮವ್ವ, ಮರಿಯಮ್ಮ, ಚೌಳವ್ವ ಗ್ರಾಮ ದೇವತೆಗಳಿವೆ.

ಕಲಾಗ್ರಾಮ:

ಇಲ್ಲಿಯ ಜನರು ಕಲಾ ಪ್ರೇಮಿಗಳಾಗಿದ್ದಾರೆ. ನಾಟಕ ಮಾಸ್ತರರಿದ್ದು, ಹವ್ಯಾಸಿ ನಾಟಕ ಕಲಾವಿದರಿದ್ದು, ಗುಬ್ಬಿ ನಂಜುಂಡೇಶ್ವರ ಭಜನಾ ಮಂಡಳಿ, ರಾಮಲಿಂಗೇಶ್ವರ ಭಜನಾ ಮಂಡಳಿಗಳಿವೆ. ಗುಬ್ಬಿ ನಂಜುಂಡೇಶ್ವರ ರಂಗಮಂದಿರ ಇದೆ.

ತಾಲ್ಲೂಕು ಕೇಂದ್ರದಿಂದ 261 ಕಿ.ಮೀ ದೂರದಲ್ಲಿರುವ ಹೊಂಕಣ ಗ್ರಾಮ ಭೌಗೋಳಿಕವಾಗಿ 767.83 ಹೇಕ್ಟರ್ ವಿಸ್ತೀರ್ಣ ಹೊಂದಿದ್ದು, ಕೆಂಪು ಶಿಲೆಯನ್ನು ಹೊಂದಿದೆ. ಕಪ್ಪು ಮತ್ತು ಕೆಂಪು ಮಣ್ಣಿನ ಲಕ್ಷಣ ಹೊಂದಿದೆ. ಪಕ್ಕದಲ್ಲಿ ವರದಾ ನದಿ ಹರಿಯುತ್ತದೆ. ನಾಗರ ಹಳ್ಳ, ದೊಡ್ಡಕೆರೆ, ಚನ್ನತ್ತಿ ಕಟ್ಟಿ, ಜಕ್ಕಟ್ಟಗಳಿವೆ.

ಇಲ್ಲಿ ಭತ್ತ ಗೋವಿನಜೋಳ, ಹತ್ತಿ ಪ್ರಮುಖ ಬೆಳೆಗಳು. ಬಾಳೆ, ಅಡಿಕೆ, ತೆಂಗು, ಮಾವು, ಚಿಕ್ಕು, ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಾ ರೈತರು ಸಮೃದ್ಧ ಜೀವನ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು