ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಗಜ್ಜರಿ ಬೆಳೆಯುತ್ತಿದ್ದ ಊರು ಕಜ್ಜರಿ!

ಜೀರ್ಣೋದ್ಧಾರಕ್ಕೆ ಕಾದಿರುವ ಪ್ರಾಚೀನ ಕಲ್ಲೇಶ್ವರ ದೇವಾಲಯ: ನಶಿಸುತ್ತಿರುವ ಶಿಲಾಶಾಸನಗಳು
Last Updated 30 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಕಜ್ಜರಿ ಗ್ರಾಮವು ಪಟ್ಟಣದಿಂದ 10 ಕಿಮೀ ಅಂತರದಲ್ಲಿದ್ದು, ಕೃಷಿ ಮತ್ತು ಕಲ್ಲು ಗಣಿಗಾರಿಕೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ.

420 ಎಕರೆಗೂ ಹೆಚ್ಚು ಅರಣ್ಯ ಹಾಗೂ ಹುಲ್ಲುಗಾವಲು ಪ್ರದೇಶವಿದ್ದು, ಅಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಎಲ್ಲಿ ನೋಡಿದರೂ ಕ್ರಷರ್‌ಗಳಿಂದ ತುಂಬಿದ ಗಣಿ ಮತ್ತು ಜೆಸಿಬಿ, ಹಿಟಾಚಿ, ಟಿಪ್ಪರ್‌ ವಾಹನಗಳ ಸದ್ದು ಎಲ್ಲೆಡೆ ಕೇಳಿ ಬರುತ್ತದೆ. ಹಿಂದೆ ಇಲ್ಲಿ ಗಜ್ಜರಿ ಮತ್ತು ಖರ್ಜೂರವನ್ನು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಕಾಲ ಕ್ರಮೇಣ ‘ಕಜ್ಜರಿ’ ಎಂದು ಹೆಸರು ಬಂದಿತು ಎಂಬ ಪ್ರತೀತಿ ಇದೆ.

ಕಜ್ಜರಿ ಗ್ರಾಮದಲ್ಲಿಯೇ ಸುಕ್ಷೇತ್ರ ದೇವರಗುಡ್ಡ ಹೆಸರಿನ ವಿಶಾಲವಾದ ರೈಲ್ವೆ ನಿಲ್ದಾಣವಿದೆ. ಜಿಲ್ಲೆಯ ಕರ್ಜಗಿ ಮತ್ತು ಕಜ್ಜರಿ ಎರಡೂ ಕಡೆ ರೈಲ್ವೆ ನಿಲ್ದಾಣವಿದ್ದು, ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ಕಜ್ಜರಿ ರೈಲ್ವೆ ನಿಲ್ದಾಣಕ್ಕೆ ಸಮೀಪದ ‘ದೇವರಗುಡ್ಡ ರೈಲ್ವೆ ನಿಲ್ದಾಣ’ ಎಂದು ನಾಮಕರಣ ಮಾಡಲಾಗಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಇಲ್ಲಿ 12ನೇ ಶತಮಾನಕ್ಕೆ ಸೇರಿದ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಪ್ರಾಚೀನ ಕಲ್ಲೇಶ್ವರ ದೇವಾಲಯವಿದ್ದು, ಒಂದು ಭೂದಾನ ಶಾಸನವಿದೆ. ದೇವಸ್ಥಾನದ ಕಿಂಡಿಯಿಂದ ಒಳಗಡೆ ಇರುವ ಬಸವಣ್ಣ ಹಾಗೂ ಶಿವಲಿಂಗದ ಮೇಲೆ ಬೆಳಿಗ್ಗೆ ಸೂರ್ಯನ ಕಿರಣ ಬೀಳುವ ದೃಶ್ಯ ಈಗಲೂ ಕಾಣಿಸುತ್ತದೆ.

‘ಪ್ರಾಚೀನ ಇತಿಹಾಸ ಹೊಂದಿದ ಶಾಸನಗಳು ನಶಿಸಿ ಹೋಗುತ್ತಿವೆ. ಕಿಡಿಗೇಡಿಗಳು ಕಲ್ಲೇಶ್ವರ ದೇವಸ್ಥಾನದ ಬಳಿ ಇರುವ ಶಾಸನಗಳ ಅಂದಗೆಡಿಸಿ ಹಾಳುಗೆಡವಿದ್ದಾರೆ. ಪ್ರಾಚ್ಯವಸ್ತು ಇಲಾಖೆಯಿಂದ ಈವರೆಗೂ ಏನೂ ಅಭಿವೃದ್ಧಿ ಕೈಗೊಂಡಿಲ್ಲ’ ಎನ್ನುತ್ತಾರೆ ಭೀಮಪ್ಪ ಹಡಪದ.

ಇಲ್ಲಿ ಹಿಂದೂ, ಮುಸ್ಲಿಂ ಜನಾಂಗದವರು ಸಹೋದರತ್ವದಿಂದ ಅಳಿಯ ಮಾವ, ದಾದಾ ಎಂದು ಸಂಬೋಧಿಸುತ್ತಾ ಭಾವೈಕ್ಯತೆಯಿಂದ ಉರುಸ್‌, ಜಾತ್ರೆ, ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಗ್ರಾಮದ ಲಂಬಾಣಿ ಜನಾಂಗದವರು ಒಗ್ಗೂಡಿ ‘ಸೇವಾಲಾಲ್‌’ ದೇವಾಲಯವನ್ನು ನಿರ್ಮಿಸಿದ್ದಾರೆ.

ಹಾನಗಲ್ಲ ಕುಮಾರ ಸ್ವಾಮೀಜಿ ಅವರ ಸ್ಮಾರಕವಿದೆ. ಮಸೀದಿ, ಮೈಲಾರಲಿಂಗ ದೇವರ ಶಿಬಾರ, ಆಂಜನೇಯ, ದ್ಯಾಮವ್ವ, ವೀರಭದ್ರೇಶ್ವರ, ಉಜಿನೆಪ್ಪ, ಸೇವಾಲಾಲ್‌, ಯಲ್ಲಮ್ಮ ದುರ್ಗಮ್ಮ ದೇವಸ್ಥಾನಗಳಿವೆ. ಪ್ರತಿ ವರ್ಷ ದುರಗಮ್ಮನ ಹಾಗೂ ಐದು ವರ್ಷಕ್ಕೊಮ್ಮೆ ಗ್ರಾಮ ದೇವತೆ ದ್ಯಾಮವ್ವನ ಜಾತ್ರೆ ಆಚರಿಸಲಾಗುತ್ತದೆ.

ಪಾಳುಬಿದ್ದ ಹೊಂಡ

ಸಮೀಪದಲ್ಲಿಯೇ ಊರ ಹೊಂಡವಿದ್ದು ಯಾವುದೇ ಅಭಿವೃದ್ಧಿ ಕಂಡಿಲ್ಲ. ಸಣ್ಣ ನೀರಾವರಿ ಇಲಾಖೆ ಅಥವಾ ಗ್ರಾಮ ಪಂಚಾಯಿತಿಯಿಂದ ಹೊಂಡವನ್ನು ಅಭಿವೃದ್ಧಿಪಡಿಸಿ ಸುತ್ತಲೂ ತಂತಿಬೇಲಿ ಹಾಕಿ, ಗಿಡ ಮರಗಳನ್ನು ನೆಟ್ಟರೆ ದೇವಸ್ಥಾನದ ಅಂದ ಹೆಚ್ಚಾಗುತ್ತದೆ. ಕೊಳವೆಬಾವಿಗಳಲ್ಲಿ ಜಲ ಮರುಪೂರಣಗೊಂಡು ಕೃಷಿ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎನ್ನುತ್ತಾರೆ ಸಂಜೀವ ಮೋಟೆಬೆನ್ನೂರ.

ಇಲ್ಲಿನ ಅಳಿಯಂದಿರ ನಗರದಲ್ಲಿ (ಶನಿ ದುರ್ಗಪ್ಪನ ಕೆರೆ) ದೊಡ್ಡ ಕೆರೆ ಇದ್ದು ನೀರಿಲ್ಲದೇ ಭಣಗುಡುತ್ತಿದೆ. ಜಾಲಿ ಮುಳ್ಳಿನ ಕಂಠಿ ಬೆಳೆದಿವೆ. ಕೆರೆಗೆ ನೀರು ತುಂಬಿಸಿ ಅಭಿವೃದ್ಧಿ ಪಡಿಸಿದರೆ ರೈಲ್ವೆ ನಿಲ್ದಾಣದ ಸೌಂದರ್ಯ ಹೆಚ್ಚುತ್ತದೆ ಎನ್ನುತ್ತಾರೆ ಗುಡ್ಡಪ್ಪ ಕರಿಯಪ್ಪ ಶಿಡಗನಹಾಳ.

***

ಕಲ್ಲೇಶ್ವರ ದೇವಸ್ಥಾನದ ಆವರಣಕ್ಕೆ ಕಾಂಕ್ರೀಟ್‌ ಹಾಕಿಸಿ, ಸುತ್ತಲೂ ಆವರಣ ಗೋಡೆ ನಿರ್ಮಿಸಲು ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದೆ

– ಸುರೇಶ ಮೋಟೆಬೆನ್ನೂರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಜ್ಜರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT