ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಶಿಗ್ಗಾವಿ ಪಟ್ಟಣದ ‘ಶಬರಿಗಿರಿ’

ರಸ್ತೆ ಮೇಲೆ ಹರಿಯುವ ಚರಂಡಿ ನೀರು: ತಗ್ಗಿನ ಮನೆಗಳಿಗೆ ನುಗ್ಗುವ ಮಳೆ ನೀರು
Last Updated 28 ಸೆಪ್ಟೆಂಬರ್ 2021, 14:44 IST
ಅಕ್ಷರ ಗಾತ್ರ

ಶಿಗ್ಗಾವಿ:ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಮೂಲಸೌಕರ್ಯದಿಂದ ಶಿಗ್ಗಾವಿ ಪಟ್ಟಣದ ಶಬರಗಿರಿ ಕಾಲೊನಿಯ ನಿವಾಸಿಗಳು ವಂಚಿತರಾಗಿದ್ದಾರೆ.

ಈ ಕಾಲೊನಿಯಲ್ಲಿ ನೂರಕ್ಕಿಂತ ಹೆಚ್ಚಿನ ಮನೆಗಳಿದ್ದು, ಇಲ್ಲಿ ರೈತರು, ನೌಕರಸ್ಥರು, ವ್ಯಾಪಾಸ್ಥರು ಹೆಚ್ಚಾಗಿ ವಾಸವಾಗಿದ್ದಾರೆ. ಪಕ್ಕದ ರಸ್ತೆಯಲ್ಲಿನ ಮಳೆ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ, ಒಂದೆಡೆ ನಿಂತು ದುರ್ವಾಸನೆ ಹರಡುತ್ತಿದೆ.

ಹಲವು ವರ್ಷಗಳಿಂದ ಇಲ್ಲಿನ ಚರಂಡಿ, ರಸ್ತೆಗಳು ಸುಧಾರಣೆ ಕಂಡಿಲ್ಲ. ಮಳೆಗಾಲದಲ್ಲಿ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗುತ್ತವೆ. ಕೆಸರಿನಲ್ಲಿ ವಾಹನಗಳ ಸಂಚಾರ ದುಸ್ತರವಾಗುತ್ತದೆ. ನಿತ್ಯ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು ಮತ್ತು ವಯೋವೃದ್ಧರು ಜಾರಿಬಿದ್ದು ತೀವ್ರ ಗಾಯಗಳಾದ ಉದಾಹರಣೆಗಳಿವೆ.

ರಸ್ತೆಯಲ್ಲಿನ ತಗ್ಗು ಗುಂಡಿಗಳಿಂದ ಸುಗಮ ಸಂಚಾರಕ್ಕೆ ಧಕ್ಕೆಯಾಗಿದೆ. ಅಲ್ಲದೆ ದ್ವಿಚಕ್ರ ವಾಹನಗಳ ಸವಾರರು ಮತ್ತು ಜನರು ಇಲ್ಲಿ ಸಂಚರಿಸಲು ನಿತ್ಯ ಬವಣೆ ಪಡುವಂತಾಗಿದೆ.

ಮನೆಗಳಿಗೆ ನುಗ್ಗುವ ನೀರು

ಮಳೆಗಾಲ ಬಂದರೆ ಸಾಕು ಇಲ್ಲಿನ ಜನ ತಮ್ಮ ಮನೆಗಳಿಂದ ಹೊರ ಹೋಗಲು ಸಾಧ್ಯವಿಲ್ಲದಾಗಿದೆ. ಮಹಿಳೆಯರು, ಮಕ್ಕಳು ಪರಿಸ್ಥಿತಿ ಹೇಳ ತೀರದಾಗಿದೆ. ಸರಿಯಾದ ಚರಂಡಿಗಳಿಲ್ಲದೆ ಕೊಳಚೆ ನೀರು ಮನೆಯೊಳಗೆ ನುಗ್ಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸುಮಾರು ವರ್ಷಗಳಿಂದ ಮನವಿ ಮಾಡುತ್ತಾ ಬರಲಾಗಿದೆ. ಆದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ಪ್ರವೀಣ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಸೊಳ್ಳೆಗಳ ಕಾಟ

ಸರಿಯಾದ ಬೀದಿ ದೀಪಗಳಿಲ್ಲ. ಅದರಿಂದಾಗಿ ರಾತ್ರಿ ವೇಳೆ ಮನೆ ಬಿಟ್ಟು ಹೊರಬಾರದಂತಾಗಿದೆ. ರಸ್ತೆ ಬದಿಗೆ ಸಮರ್ಪಕ ಚರಂಡಿಗಳಿಲ್ಲ. ಹಾಗಾಗಿ ಮಳೆ ಬಂದರೆ ಚರಂಡಿಯಲ್ಲಿನ ಕೊಳಚೆ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೆ ರಸ್ತೆ ಬದಿಗೆ ಗಿಡಗಂಟಿಗಳು ಬೆಳೆದು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ.

ಹಾವು, ಚೇಳುಗಳ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕು ಕಳೆಯುವಂತಾಗಿದೆ. ಇಷ್ಟಾದರೂ ಇಲ್ಲಿನ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT