ಮಂಗಳವಾರ, ಮೇ 11, 2021
27 °C
ಯುದ್ಧಗಳ ಕತೆ ಸಾರುವ ವೀರಗಲ್ಲುಗಳು: ಕೃಷಿ ಪ್ರಧಾನವಾದ ಊರಲ್ಲಿ ‘ಹಸಿರೇ ಉಸಿರು’

‘ಸಾವಿರ ಮೇಟಿಗಳ ಊರು ಶ್ಯಾಡಂಬಿ’

ಎಂ.ವಿ.ಗಾಡದ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ಮಲೆನಾಡು ಸೆರಗಿನ ಹಸಿರು ಸೊಬಗಿನಲ್ಲಿ ಕಂಗೊಳಿಸುವ ಶ್ಯಾಡಂಬಿ ಕೃಷಿ ಪ್ರಧಾನವಾದ ಗ್ರಾಮ. ಹೀಗಾಗಿಯೇ ‘ಸಾವಿರ ಮೇಟಿ ಶ್ಯಾಡಂಬಿ’ ಎಂಬ ಹೆಸರಿನಿಂದ ಖ್ಯಾತಿ ಗಳಿಸಿದೆ. 

ಶ್ಯಾಡ ಅಂದರೆ ಹಸಿರು ಬಣ್ಣಗಳಿಂದ ಕಂಗೊಳಿಸುವ ತಾಣ. ಅಂಬೆ ಎಂದರೆ ದೇವಾನುದೇವತೆಗಳು ನೆಲೆಸಿದ ತಾಣವಾದ ಕಾರಣ ಸದಾ ಹಸಿರು ತೋಪಿನಿಂದ ಕೂಡಿದ ಗ್ರಾಮ ಎಂಬರ್ಥ ನೀಡುವ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ‘ಶ್ಯಾಡಂಬಿ’ ಗ್ರಾಮವೆಂಬ ಹೆಸರು ಬಂದಿದೆ ಎಂದು ಗ್ರಾಮದ ಮುಖಂಡ ವರುಣಗೌಡ್ರ ಪಾಟೀಲ ವ್ಯಕ್ತಪಡಿಸುತ್ತಾರೆ.

ಪ್ರತಿ ಕುಟುಂಬವೂ ಕೃಷಿ ಕಾರ್ಯವನ್ನೇ ಅವಲಂಬಿಸಿತ್ತು. ಪ್ರತಿ ಕುಟುಂಬಕ್ಕೆ ಒಂದು ಮೇಟಿ ಇರುವುದು ಕಾಣುತ್ತಿದ್ದೆವು. ಅಂತಹ ಸಾವಿರ ಮೇಟಿಗಳಿಂದ ರಾಶಿ ಮಾಡುತ್ತಾ ಬಂದಿರುವ ಬಹುದೊಡ್ಡ ಗ್ರಾಮವಾಗಿತ್ತು. ಹೀಗಾಗಿ ಈ ಗ್ರಾಮವನ್ನು ‘ಸಾವಿರ ಮೇಟಿ ಶ್ಯಾಡಂಬಿ’ ಎಂದು ಪರಂಪರಾಗತವಾಗಿ ಕರೆದುಕೊಂಡು ಬಂದಿರುವುದನ್ನು ಕಾಣುತ್ತೇವೆ ಎಂದು ಹಿರಿಯ ಮುಖಂಡ ವೀರಭದ್ರಗೌಡ್ರ ಪಾಟೀಲ ಹೇಳುತ್ತಾರೆ.

ಗ್ರಾಮದಲ್ಲಿ ಸುಮಾರು 250 ಕುಟುಂಬಗಳು, ಸುಮಾರು 1200ರಷ್ಟು ಜನಸಂಖ್ಯೆಯಿದೆ. ಹಿಂದೆ ಪ್ಲೇಗ್ ರೋಗ ಬಂದು ಗ್ರಾಮದ ಇಡೀ ಜನ ಸುತ್ತಲಿನ ಬೇರೆ, ಬೇರೆ ಗ್ರಾಮಗಳಲ್ಲಿ ಹೋಗಿ ವಾಸ ಮಾಡುವಂತಾಯಿತು. ಹರಕುಣಿ, ಕುನ್ನೂರು, ಬಿರವಳ್ಳಿ, ಶೀಲವಂತ ಸೋಮಾಪುರ ಸೇರಿದಂತೆ ಹಲವು ಗ್ರಾಮದಲ್ಲಿ ವಾಸ ಮಾಡುವ ಜನರು ಇಂದಿಗೂ ಶ್ಯಾಡಂಬಿಯವರು ಎಂದು ಕರೆಸಿಕೊಳ್ಳುವುದನ್ನು ನೋಡಬಹುದು.

ರಾಜ್ಯದಲ್ಲಿ ಪ್ರಗತಿಪರ ರೈತ ಎನ್ನಿಸಿಕೊಂಡಿದ್ದ ಎಂ.ಸಿ.ಪಾಟೀಲರ ಗ್ರಾಮವಾಗಿದ್ದು, ನೂರಾರು ಎಕರೆ ಭೂಮಿಯಲ್ಲಿ ಕೃಷಿ ಮಾಡುವ ಜತೆಗೆ ಹತ್ತಾರು ಹಳ್ಳಿ ಒಡೆಯರಾಗಿ ನ್ಯಾಯ ಪಂಚಾಯ್ತಿಗಳನ್ನು ನಡೆಸುತ್ತಿದ್ದರು. ಪೊಲೀಸ್ ಠಾಣೆ, ಕೋರ್ಟು ಕಚೇರಿಗಳಿಗೆ ಗ್ರಾಮದ ವ್ಯಾಜ್ಯಗಳು ಹೋಗದಂತೆ ನೋಡಿಕೊಳ್ಳುತ್ತಿದ್ದರು. ‌ದಾನಧರ್ಮದಲ್ಲಿ ಎತ್ತಿದ ಕೈ, ದಾನಶೂರ ಕರ್ಣನೆಂದು ಕರೆಯಿಸಿಕೊಂಡಿದ್ದರು.

ವೀರಣ್ಣದೇವರ, ಹನುಮಂತ ದೇವರ ಸೇರಿದಂತೆ ಹಲವು ದೇವಾಲಯಗಳ ನಿರ್ಮಾಣ ಮಾಡುವುದರ ಮೂಲಕ ಧಾರ್ಮಿಕ ಆಚರಣೆಗೆ ಆದ್ಯತೆ ನೀಡಿದ್ದರು. ಸಮಾಜ ಸೇವಾ ಕಾರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟಿದ್ದರು. ಹೀಗಾಗಿ ಎಂ.ಸಿ.ಪಾಟೀಲರ ಹೆಸರಿನೊಂದಿಗೆ ಶ್ಯಾಡಂಬಿ ಗ್ರಾಮವನ್ನು ಇಂದಿಗೂ ಗುರುತಿಸಲಾಗುತ್ತದೆ. ಅವರ ಮಕ್ಕಳಾದ ಕಿರಣಗೌಡ್ರ, ವರುಣಗೌಡ್ರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರೀಫ್ ಮಾಕಾಪುರ ಹೇಳುತ್ತಾರೆ.

ಕಲ್ಯಾಣ ಚಾಲುಕ್ಯರ ಶೈಲಿ ಹೊಂದಿರುವ ಈಶ್ವರ ದೇವಸ್ಥಾನದ ಮುಂದೆ ಶಾಸನಗಳಿದ್ದು, ಅವುಗಳ ಪ್ರಕಾರ ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯ ಕಾಲದ ಶಾಸನಗಳಲ್ಲಿ ಈ ಗ್ರಾಮವನ್ನು ‘ಶಂಬೊಳಲು’ ಎಂದು ದಾಖಲಾಗಿದೆ. ಈ ಶಾಸನಗಳು ಸುಂಕಗಳ ಮತ್ತು ದಾನದ ವಿಷಯಗಳನ್ನು ಒಳಗೊಂಡಿವೆ. ಯುದ್ಧದಲ್ಲಿ ಮಡಿದ ವೀರರ ವೀರಗಲ್ಲುಗಳಿವೆ. ದೇವಾಲಯದಲ್ಲಿ ನಂದಿ, ವಿಷ್ಣು, ನಾಗದೇವರ ಮೂರ್ತಿಗಳು ಕಂಡು ಬರುತ್ತಿವೆ. ಅಲ್ಲದೆ ರಾಜ್ಯ ಮಟ್ಟದ ದೊಡ್ಡಾಟ, ಭಜನೆ, ಜಾಂಜ್ ಮೇಳದ ಕಲಾವಿದರಿದ್ದಾರೆ ಎಂದು ಗ್ರಾ.ಪಂ ಸದಸ್ಯ ಬಸನಗೌಡ ಪೊಲೀಸ್‌ ಪಾಟೀಲ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.