ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಳುವ ಹೂಗಳನ್ನು ಚಿವುಟಬೇಡಿ..‘

ಪಶುವೈದ್ಯೆ ಮೇಲೆ ಅತ್ಯಾಚಾರ: ಎಸ್‌ಎಫ್‌ಐ ಖಂಡನೆ
Last Updated 5 ಡಿಸೆಂಬರ್ 2019, 9:22 IST
ಅಕ್ಷರ ಗಾತ್ರ

ಹಾವೇರಿ: ಹೈದರಾಬಾದ್‌ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕಲಬುರ್ಗಿ ಜಿಲ್ಲೆಯ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಖಂಡಿಸಿ, ಎಸ್‌ಎಫ್‌ಐ– ಡಿವೈಎಫ್‌ಐ ನೇತೃತ್ವದಲ್ಲಿ ನಗರದ ಜಿ.ಎಚ್‌. ಕಾಲೇಜು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಡಿವೈಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ಎರಡೂ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ, ದಬ್ಬಾಳಿಕೆ ಮತ್ತು ಅತ್ಯಾಚಾರಗಳು ಹೆಚ್ಚಾಗುತ್ತಲೇ ಇವೆ. ಆದರೂ ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳು ಇವುಗಳಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿ.ಎಸ್‌. ಉಗ್ರಪ್ಪ ವರದಿ ಮತ್ತು ನ್ಯಾ.ವರ್ಮಾ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ಎಲ್ಲ ಶಾಲಾ– ಕಾಲೇಜು ಮತ್ತು ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ವಿರೋಧ ಸಮಿತಿಯನ್ನು ರಚಿಸಬೇಕು. ಕಚೇರಿ, ಕಾರ್ಖಾನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಹಿಂಸೆ ನಿಲ್ಲಿಸಿ, ಅರಳುವ ಹೂಗಳನ್ನು ಚಿವುಟುವ ಕಾಮಾಂಧರಿಗೆ ಧಿಕ್ಕಾರ, ಮಹಿಳೆಯರ ರಕ್ಷಣೆ– ನಮ್ಮೆಲ್ಲರ ಹೊಣೆ ಮುಂತಾದ ಘೋಷಣಾ ಫಲಕಗಳನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಡಿವೈಎಫ್‌ಐ ಮುಖಂಡ ಮಹೇಶ ನರೆಗಲ್‌, ಎಸ್‌ಎಫ್‌ಐ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವನಗೌಡ ಭರಮಗೌಡ್ರ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಜ್ಯೋತಿ ಪೊಲೀಸ್‌ಗೌಡ್ರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT