ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಸೇವಾ ಮನೋಭಾವ ಅಗತ್ಯ

ಜಿಲ್ಲೆಯ 21 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ: ಶಾಸಕ ನೆಹರು ಓಲೇಕಾರ ಅಭಿಮತ
Last Updated 5 ಸೆಪ್ಟೆಂಬರ್ 2020, 13:12 IST
ಅಕ್ಷರ ಗಾತ್ರ

ಹಾವೇರಿ: ‘ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಆದರ್ಶ ಶಿಕ್ಷಕರಾಗಿದ್ದರು.ಆ ಕಾರಣಕ್ಕಾಗಿ ದೇಶದಾದ್ಯಂತ ಗೌರವಾದರಗಳು ಸಲ್ಲಿತ್ತಿವೆ. ಸರ್ವಪಲ್ಲಿ ಅವರ ದಾರಿಯಲ್ಲಿ ಪ್ರತಿಯೊಬ್ಬ ಶಿಕ್ಷಕನು ಮುನ್ನಡೆದು, ಆದರ್ಶ ಶಿಕ್ಷಕನಾಗಬೇಕು. ಉತ್ತಮ ಸೇವಾ ಹಾಗೂ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಬೇಕು’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ 132ನೇ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಸೇವೆಗಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಡಾ.ಸರ್ವಪಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಶಿಕ್ಷಕರು ಸ್ವಯಂ ಆಸಕ್ತಿಯಿಂದ ಶಾಲೆಯ ಅಂದವನ್ನು ಹೆಚ್ಚಿಸಿ ಸಂಪೂರ್ಣ ನೋಟವನ್ನೇ ಬದಲಾಯಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳತ್ತ ಪಾಲಕರು ಬರುವಂತೆ ಗಮನ ಸೆಳೆದಿದ್ದಾರೆ. ಒಂದು ಗ್ರಾಮದ ಬೆಳವಣಿಗೆಗೆ ಉತ್ತಮ ಸಂಸ್ಕೃತಿ, ಉತ್ತಮ ಪರಂಪರೆಯ ಜೀವನ ಕ್ರಮಗಳು ಕಾರಣವಾಗುತ್ತಿವೆ. ಇಂತಹ ಬೆಳವಣಿಗೆಯ ಹಿಂದೆ ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಶ್ರಮ ಹಾಗೂ ಪರಂಪರೆ ಕಾರಣವಾಗುತ್ತದೆ ಎಂದು ಹೇಳಿದರು.

ಇಂದು ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ದಾನಿಗಳು ಕೋಟ್ಯಾಂತರ ರೂಪಾಯಿ ನೆರವು ಒದಗಿಸುತ್ತಿದ್ದಾರೆ. ಇದಕ್ಕೆ ಕಾರಣ ಶಿಕ್ಷಕರು. ಮಕ್ಕಳ ಸಾಧನೆಯಿಂದ ಪ್ರೇರಿಪಿತವಾದ ಪಾಲಕರೇ ಕಲಿತ ಶಾಲೆಗೆ ಸ್ವಯಂಪ್ರೇರಣೆಯಿಂದ ಶಾಲೆಗಳಿಗೆ ದೇಣಿಗೆ ನೀಡುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ದಾನಿಗಳ ಸಹಕಾರದಿಂದ ಜಿಲ್ಲೆಯಲ್ಲಿನ ಅನೇಕ ಶಾಲೆಗಳ ವಾತಾವರಣವೇ ಬದಲಾವಣೆಗೊಂಡು ಮಕ್ಕಳ ಕಲಿಕೆಗೆ ಸುಂದರವಾದ ವಾತಾವರಣ ನಿರ್ಮಾಣವಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ವ್ಯಕ್ತಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ನಾಲ್ಕು ಕೋಟಿಗೂ ಅಧಿಕ ಮೊತ್ತ ವೆಚ್ಚಮಾಡಿ ಉತ್ತಮ ಕಟ್ಟಡ, ಕೊಠಡಿಗಳು ಹಾಗೂ ಮೂಲಸೌಕರ್ಯಗಳನ್ನು ದಾನವಾಗಿ ನೀಡಿದ್ದಾರೆ ಎಂದು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ಕುರಿತಂತೆ ವಿವರಿಸಿದರು.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಾಗಿ ಆಯ್ಕೆಗೊಂಡ ಜಿಲ್ಲೆಯ ವಿವಿಧ ಶಾಲೆಯ 21 ಶಿಕ್ಷಕರನ್ನು ಪುರಸ್ಕರಿಸಿ ಸನ್ಮಾನಿಸಿ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರು ಹಾಗೂ ಸೇವೆಯಲ್ಲಿರುವಾಗ ಅಕಾಲಿಕವಾಗಿ ಮರಣ ಹೊಂದಿದ್ದ ಶಿಕ್ಷಕರ ಕುಟುಂಬದವರನ್ನು ಗೌರವಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಮಲವ್ವ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದರಾಜ ಕಲಕೋಟಿ, ನಗರಸಭೆ ಸದಸ್ಯ ಗಿರೀಶ ತುಪ್ಪದ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಡಯಟ್ ಉಪನಿರ್ದೇಶಕ ಡಿ.ಎಂ.ಬಸವರಾಜಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ವಾರ್ತಾಧಿಕಾರಿ ಡಾ.ಬಿ.ಆರ್ ರಂಗನಾಥ್ ಇದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ ಸ್ವಾಗತಿಸಿದರು. ಜಿಲ್ಲಾ ಯೋಜನಾಧಿಕಾರಿ ಎಸ್.ಎಸ್.ಅಡಿಗ ವಂದಿಸಿದರು. ಎಂ.ಜಿ.ದೊಡ್ಡಗೌಡರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT