ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ವಿಳಂಬ; ಆತಂಕದಲ್ಲಿ ವಿದ್ಯಾರ್ಥಿಗಳು

ಹಾವೇರಿ ಜಿಲ್ಲೆಗೆ ಪೂರೈಕೆಯಾಗದ ಶೇ 60ರಷ್ಟು ಪುಸ್ತಕಗಳು, ಮಕ್ಕಳ ಕಲಿಕೆಯ ಮೇಲೆ ಕಾರ್ಮೋಡ
Last Updated 6 ಜೂನ್ 2022, 14:06 IST
ಅಕ್ಷರ ಗಾತ್ರ

ಹಾವೇರಿ: ಹೊಸ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭಗೊಂಡು 22 ದಿನ ಕಳೆದರೂ, ಹಾವೇರಿ ಜಿಲ್ಲೆಗೆ ಬೇಡಿಕೆಗೆ ತಕ್ಕಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ. ಪುಸ್ತಕಗಳು ಕೈ ಸೇರದೇ ಇರುವುದರಿಂದ ಪೋಷಕರು ಮತ್ತು ಶಿಕ್ಷಕರಲ್ಲಿ ತಳಮಳ ಉಂಟಾಗಿದ್ದು, ಮಕ್ಕಳ ಕಲಿಕೆಯ ಮೇಲೆ ಕಾರ್ಮೋಡ ಕವಿದಂತಾಗಿದೆ.

ಹಾವೇರಿ ಜಿಲ್ಲೆಗೆ ಈ ಬಾರಿ 22,98,110 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಇದುವರೆಗೂ 9,60,134 (ಶೇ 41.78) ಪಠ್ಯಪುಸ್ತಕಗಳು ಮಾತ್ರ ಪೂರೈಕೆಯಾಗಿವೆ. ಈ ಪೈಕಿ ಶೇ 39.26ರಷ್ಟು ಪುಸ್ತಕಗಳನ್ನು ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನೂ ಶೇ 59ರಷ್ಟು ಪುಸ್ತಕಗಳು ಬರುವುದು ಬಾಕಿ ಇದೆ.

6ರಿಂದ 10ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ಗೊಂದಲ ಇನ್ನೂ ನಿವಾರಣೆಯಾಗದ ಕಾರಣ ಈ ಎರಡೂ ವಿಷಯಗಳ ಪಠ್ಯಪುಸ್ತಕಗಳು ಇನ್ನೂ ಪೂರೈಕೆಯಾಗಿಲ್ಲ. ಜತೆಗೆ ಮುದ್ರಣ ವೆಚ್ಚ ಹೆಚ್ಚಳ ಮತ್ತು ಕಾಗದದ ಕೊರತೆಯಿಂದ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಹಳೆಯ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ಸಂಗ್ರಹಿಸಿ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಕೊಡುವ ‘ಬುಕ್‌ ಬ್ಯಾಂಕ್‌’ ಕಾರ್ಯಕ್ರಮ ಪಠ್ಯಪುಸ್ತಕಗಳ ಕೊರತೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸಿದೆ. ಕೆಲವು ಪಠ್ಯಗಳು ಪರಿಷ್ಕರಣೆಗೊಂಡಿರುವ ಕಾರಣ ಯಾವುದನ್ನು ಬೋಧಿಸಬೇಕು ಎಂಬ ಗೊಂದಲ ಶಿಕ್ಷಕರನ್ನೂ ಕಾಡುತ್ತಿದೆ.ಪಠ್ಯ ಪುಸ್ತಕ ನಿರೀಕ್ಷೆಯಲ್ಲಿರುವ ಶಿಕ್ಷಕರು ರಜಾ ಅವಧಿಯಲ್ಲಿ ತರಬೇತಿ ಪಡೆದಿದ್ದು ಶಾಲೆಗಳಲ್ಲಿ ಕಲಿಕಾ ಚೇತರಿಕೆ, ಮಳೆಬಿಲ್ಲು ಹಾಗೂ ಸೇತುಬಂಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಲಿಕಾ ಚೇತರಿಕೆ ತರಬೇತಿ

ಸವಣೂರು:ತಾಲ್ಲೂಕಿನ ಪ್ರತಿಯೊಂದು ಸರ್ಕಾರಿ ಹಾಗೂ ಅನುದಾನಿತ ಎಲ್ಲ ಶಾಲೆಗಳಲ್ಲಿ ಪುಸ್ತಕ ಭಂಡಾರವನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಅದಲ್ಲದೆ, ತಾಲ್ಲೂಕಿಗೆ ಈಗಾಗಲೇ ಶೇ 57ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿದ್ದು, ವಿತರಣೆ ಕೈಗೊಳ್ಳಲಾಗಿದೆ.

‘ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಈಗಾಗಲೇ ‘ಮಳೆಬಿಲ್ಲು’ ಕಾರ್ಯಕ್ರಮದಡಿ 14 ದಿನಗಳ ಕಾಲ ದಿನಕ್ಕೊಂದು ಕಾರ್ಯಕ್ರಮಗಳನ್ನು ರೂಪಿಸಿ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ, 4ರಿಂದ 9ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಶಿಕ್ಷಕರಿಗೆ ‘ಕಲಿಕಾ ಚೇತರಿಕೆ’ ಕಾರ್ಯಕ್ರಮದಡಿ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ನೈತಿಕ ಮೌಲ್ಯಗಳ ಶಿಕ್ಷಣ ನೀಡಲಾಗುತ್ತಿದೆ’ ಎಂದು ಬಿಇಒ ಐ.ಬಿ.ಬೆನಕೊಪ್ಪ ಮಾಹಿತಿ ನೀಡಿದರು.

ಮರುಪರಿಷ್ಕರಣೆಯ ಗೊಂದಲ ನಿವಾರಿಸಿ

ಬ್ಯಾಡಗಿ: ಶಾಲಾರಂಭದಲ್ಲಿಯೇ ಮಕ್ಕಳ ಕಲಿಕಾ ಗುಣಮಟ್ಟವನ್ನು ಪರೀಕ್ಷಿಸುವುದರ ಜೊತೆಗೆ ಪಾಠ ಬೋಧನೆ ನಡೆಯಬೇಕಾಗಿದೆ. ಪಠ್ಯ ಪುಸ್ತಕಗಳ ಮರುಪರಿಷ್ಕರಣೆಯ ಗೊಂದಲಗಳನ್ನು ನಿವಾರಿಸಬೇಕಿದೆ. ಪ್ರತಿ ವರ್ಷ ಸಕಾಲದಲ್ಲಿ ಪಠ್ಯಪುಸ್ತಕ ಪೂರೈಸಲು ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದುಶಿಕ್ಷಣ ಪ್ರೇಮಿ ಉದಯ ಚೌಧರಿ ಹೇಳಿದರು.

‘ಬ್ಯಾಡಗಿ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ 2 ಲಕ್ಷ ಪಠ್ಯ ಪುಸ್ತಕಗಳ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದ್ದು, ಇದುವರೆಗೆ 87 ಸಾವಿರ ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ.ಜೂನ್‌ ತಿಂಗಳಲ್ಲಿ ಅವರ ಕಲಿಕಾ ಗುಣಮಟ್ಟದ ಪರೀಕ್ಷೆ ನಡೆಸಿ, ಪರಿಹಾರ ಬೋಧನೆ ನಡೆಸುವ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲಾಗುತ್ತಿದೆ’ ಎಂದು ಬಿಇಒ ಸತ್ಯನಾರಾಯಣ ಟಿ.ಎಂ ಹೇಳಿದರು.

ನೆರವಿಗೆ ಬಂದ ಬುಕ್‌ಬ್ಯಾಂಕ್‌

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಒಟ್ಟು 360 ಶಾಲೆಗಳಿವೆ. 1ನೇ ತರಗತಿಯಿಂದ 10ನೇ ತರಗತಿವರೆಗೆ 1.82 ಲಕ್ಷ ಉಚಿತ ಪುಸ್ತಕಗಳು ಬಂದಿವೆ. ಈಗಾಗಲೇ 52 ಸಾವಿರ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ವರ್ಕ್‌ ಬುಕ್‌ ಮತ್ತು ಡೈರಿಗಳು ಸೇರಿದಂತೆ ಶೇ 30ರಷ್ಟು ಪಠ್ಯಪುಸ್ತಕಗಳು ಬರಬೇಕಾಗಿದೆ. ಪಠ್ಯಪುಸ್ತಕಗಳ ಕೊರತೆಯಾಗದಂತೆ ಬುಕ್‌ಬ್ಯಾಂಕ್‌ ಯೋಜನೆ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಜೆ.ಎನ್‌.

ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಹಾಗೂ ಸಾಮರ್ಥ್ಯಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು, ಕಲಿತಿರುವ ಮತ್ತು ಕಲಿಯುತ್ತಿರುವ ವಿಷಯಗಳ ಅಂತರದ ನಡುವೆ ಸಹಸಂಬಂಧ ಕಲ್ಪಿಸುವುದು ‘ಸೇತುಬಂಧ’ ಶಿಕ್ಷಣದ ಮೂಲ ಉದ್ದೇಶವಾಗಿದೆ ಎನ್ನುತ್ತಾರೆ ಬಿಆರ್‌ಪಿ ಗಂಗಪ್ಪ ನಾಯಕ.

ಪ್ರತಿವರ್ಷವೂ ಪುಸ್ತಕದ ಸಮಸ್ಯೆ

ರಟ್ಟೀಹಳ್ಳಿ: ಪ್ರತಿ ಶೈಕ್ಷಣಿಕ ವರ್ಷದಲ್ಲಿಯೂ ಪಠ್ಯಪುಸ್ತಕಗಳ ಸಮಸ್ಯೆ ಎದುರಾಗುತ್ತಿದ್ದು, ಶಿಕ್ಷಣ ಇಲಾಖೆ, ಸರ್ಕಾರ ಸಾಕಷ್ಟು ಮುಂಜಾಗ್ರತೆ ವಹಿಸಿ ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳುವ ಪೂರ್ವದಲ್ಲಿಯೇ ಅಗತ್ಯ ಪಠ್ಯಪುಸ್ತಕಗಳನ್ನು ಮುದ್ರಿಸಬೇಕು. ಖಾಸಗಿ ಶಾಲೆಯವರು ವಿದ್ಯಾರ್ಥಿಗಳಿಗೆ ಶಾಲೆಗೆ ಸೇರಿಕೊಂಡ ದಿನವೇ ಪಠ್ಯಪುಸ್ತಕ ವಿತರಿಸುತ್ತಾರೆ. ಈ ವ್ಯವಸ್ಥೆ ಸರ್ಕಾರಿ ಶಾಲೆಗಳಿಗೆ ಏಕಿಲ್ಲ ಎನ್ನುತ್ತಾರೆ ಇಲ್ಲಿನ ಶಿಕ್ಷಣ ಪ್ರೇಮಿ ಸುನೀಲ ನಾಯ್ಕ್.

‘ತಾಲ್ಲೂಕಿನಾದ್ಯಂತ ಶೇ 70 ಪಠ್ಯಪುಸ್ತಕಗಳ ವಿತರಣೆ ಮಾಡಲಾಗಿದೆ. ಉಳಿದ 30 ಬುಕ್ ಬ್ಯಾಂಕ್ (ಹಳೆಯ ಪುಸ್ತಕಗಳ ಸಂಗ್ರಹ) ದಿಂದ ಪೂರೈಸಲಾಗುತ್ತಿದ್ದು, ಮಕ್ಕಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ.

ಕೈಸೇರದ ಪುಸ್ತಕ; ಪರದಾಟ

ಶಿಗ್ಗಾವಿ:‘ಬುಕ್ ಬ್ಯಾಂಕ್’ ಕಾರ್ಯಕ್ರಮದಡಿ ಸಂಗ್ರಹಿಸಿರುವ ಕೆಲವು ಪುಸ್ತಕಗಳು ಹರಿದು ಹೋಗಿವೆ. ಇಂಥ ಪುಸ್ತಕಗಳನ್ನು ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಪರಿಷ್ಕೃತ ಪಠ್ಯಪುಸ್ತಕಗಳು ಕೈಸೇರದೇ ಇರುವುದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ. ಸರ್ಕಾರ ಕೂಡಲೇ ಹೊಸ ಪುಸ್ತಕಗಳನ್ನು ಪೂರೈಸಬೇಕು’ ಎಂದುಪೋಷಕ ಮಂಜುನಾಥ ಕೂಲಿ ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ ಈಗಾಗಲೇ ಶೇ 40ರಷ್ಟು ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಒಂದು ವಾರದಲ್ಲಿ ಸಂಪೂರ್ಣ ಹೊಸ ಪುಸ್ತಕಗಳ ವಿತರಣೆ ಮಾಡಲಾಗುತ್ತಿದೆ. ಪಾಲಕರು ಸಹಕರಿಸಬೇಕು’ ಎಂದು ಬಿಇಒ ಪಿ.ಕೆ. ಚಿಕ್ಕಮಠ ಹೇಳುತ್ತಾರೆ.

ಹಳೇ ಪುಸ್ತಕದಲ್ಲಿಯೇ ವಿದ್ಯಾಭ್ಯಾಸ

ಹಾನಗಲ್: ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳು ಈತನಕ ಸಿಕ್ಕಿಲ್ಲ.
ಕೊರೊನಾದಿಂದ ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿಳಂಬವಾಗಿರುವುದು ಮತ್ತಷ್ಟು ಸಮಸ್ಯೆ ತೊಂದೊಡ್ಡಿದೆ. ಹಳೆಯ ಪುಸ್ತಕಗಳನ್ನು ಇಟ್ಟುಕೊಂಡು ಶಿಕ್ಷಕರು ಬೋಧನೆಯಲ್ಲಿ ತೊಡಗಿದ್ದಾರೆ.

ಹಳೆ ಪುಸ್ತಕಗಳ ‘ಬುಕ್‌ ಬ್ಯಾಂಕ್‌’ ತಕ್ಕ ಮಟ್ಟಿಗೆ ವಿದ್ಯಾರ್ಥಿಗಳಿಗೆ ಪ್ರಯೋಜನ ತಂದಿದೆ. ಪರಿಷ್ಕೃತ ಹೊಸ ಪಠ್ಯಪುಸ್ತಕಗಳು ಈತನಕ ತಾಲ್ಲೂಕಿನ ಒಂದು ಶಾಲೆಯನ್ನೂ ತಲುಪಿಲ್ಲ. ಹಳೆಯ ಪಠ್ಯಕ್ರಮದ ಪುಸ್ತಕಗಳು ಶೇ 60ರಷ್ಟು ತಾಲ್ಲೂಕಿಗೆ ಪೂರೈಕೆಯಾಗಿದೆ. ಕಾಮನಬಿಲ್ಲು ಮತ್ತಿತರ ಚಟುವಟಿಕೆಗಳು ಪೂರ್ಣಗೊಳ್ಳುತ್ತಿವೆ. ಲಭ್ಯ ಪುಸ್ತಕಗಳಲ್ಲೇ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಉಮೇಶ ತಿಳಿಸಿದ್ದಾರೆ.

***

ಪ್ರತಿ ವರ್ಷವೂ ಪಠ್ಯಪುಸ್ತಕ ಸಮಸ್ಯೆ ಕಾಡುತ್ತದೆ. ಸರ್ಕಾರಿ ಶಾಲೆ, ಬಡಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗಿರುವ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ
–ಬಸವರಾಜ ಪೂಜಾರ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ

***

ಪಠ್ಯಪುಸ್ತಕಗಳ ಕೊರತೆಯನ್ನು ‘ಬುಕ್‌ ಬ್ಯಾಂಕ್‌’ ನಿವಾರಿಸಿದೆ. ಈ ಮಾಸಾಂತ್ಯದಲ್ಲಿ ಬಾಕಿ ಪಠ್ಯಪುಸ್ತಕಗಳು ಜಿಲ್ಲೆಗೆ ಪೂರೈಕೆಯಾಗುವ ನಿರೀಕ್ಷೆಯಿದೆ
–ಜಗದೀಶ್ವರ ಬಿ.ಎಸ್‌., ಡಿಡಿಪಿಐ, ಹಾವೇರಿ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT