ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನವೇ ಬದುಕಿಗೆ ದಾರಿದೀಪ: ಮಾಜಿ ಸಚಿವ ಬಸವರಾಜ ಶಿವಣ್ಣನವರ

ಸಾಮ್ರಾಟ ಚಂದ್ರಗುಪ್ತ ಮೌರ್ಯ ಜಯಂತಿ
Last Updated 20 ಜುಲೈ 2021, 16:37 IST
ಅಕ್ಷರ ಗಾತ್ರ

ಹಾವೇರಿ: ‘ಭಾರತದಲ್ಲಿ ಸಂವಿಧಾನ ಇಲ್ಲದೇ ಇದ್ದಿದ್ದರೆ ರಾಜರ, ಒಡೆಯರ ಅಧೀನದಲ್ಲಿ ನಾವು ಸ್ವಾತಂತ್ರ್ಯವಿಲ್ಲದೆ ಬದುಕಬೇಕಾಗಿತ್ತು. ಅಂಬೇಡ್ಕರ್‌ ರಚಿಸಿದ ಸಂವಿಧಾನದಿಂದ ಸಮಾನತೆ ಮತ್ತು ಸ್ವಾತಂತ್ರ್ಯ ದೊರೆತಿದೆ’ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಭವನದಲ್ಲಿ ಚಂದ್ರಗುಪ್ತ ಮೌರ್ಯ ನ್ಯಾಷನಲ್ ಫೌಂಡೇಷನ್, ಜಿಲ್ಲಾ ಸಮತಾ ಸೈನಿಕ ದಳ, ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಾಮ್ರಾಟ ಚಂದ್ರಗುಪ್ತ ಮೌರ್ಯ ಜಯಂತಿ’ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶೋಷಿತರಿಗೆ, ಬಡವರಿಗೆ, ದೀನ ದಲಿತರಿಗೆ ಹೀಗೆ ಧ್ವನಿ ಇಲ್ಲದವರಿಗೆ ಧ್ವನಿ ನೀಡಿ, ಬದುಕುವ ಹಕ್ಕನ್ನು ಕಲ್ಪಿಸಿದ್ದಾರೆ. ಅವರ ಆದರ್ಶ ಮತ್ತು ತತ್ವಗಳು ಬದುಕಿಗೆ ದಾರಿದೀಪ ಎಂದು ಹೇಳಿದರು.

ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎನ್.ಎನ್. ಗಾಳೆಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಪೂರ್ವದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಸತಿ ಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಜಾತೀಯತೆ, ಅಸಮಾನತೆ, ಜನಾಂಗೀಯ ತಾರತಮ್ಯಗಳು ಜಾರಿಯಲ್ಲಿದ್ದವು. ಭಾರತ ಸಂವಿಧಾನ ರಚನೆಯಾದ ನಂತರ ರೈತನ ಮಕ್ಕಳು, ಕೂಲಿಕಾರರ ಮಕ್ಕಳು ಜನಪ್ರತಿನಿಧಿಗಳಾಗಲು ಸಾಧ್ಯವಾಯಿತು’ ಎಂದರು.

ಲಕ್ಷ್ಮಣ ಬಕ್ಕಾಯಿ ಉಪನ್ಯಾಸ ನೀಡಿ, ಪ್ರತಿಯೊಬ್ಬ ವ್ಯಕ್ತಿಯು ಮೊದಲು ತನ್ನ ಹಕ್ಕುಗಳನ್ನು ಪಡೆಯಬೇಕಾದರೆ, ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ. ದೇಶದಲ್ಲಿ ಎಲ್ಲಾ ವರ್ಗದವರು ಮೀಸಲಾತಿ ಸೌಲಭ್ಯವನ್ನು ಪಡೆಯುವ ಮೂಲಕ ಎಲ್ಲರ ಅಭಿವೃದ್ಧಿಗೆ ಸಂವಿಧಾನ ಪ್ರೇರಣೆಯಾಗಿದೆ ಎಂದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಮೌರ್ಯ ಸಾಮ್ರಾಜ್ಯ ಭಾರತವನ್ನು ಒಗ್ಗೂಡಿಸಿದ ದೊಡ್ಡ ಸಾಮ್ರಾಜ್ಯ. ಮೌರ್ಯರ ಏಳಿಗೆ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿತು’ ಎಂದರು.

ಉದ್ಯಮಿ ಕೆ.ಮಂಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಾವೇರಿ ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮಾತನಾಡಿದರು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಣ್ಣ ಕಿವುಡನವರ, ಡಿ.ಕೆ. ಅರಸನಾಳ, ದೇವೀಂದ್ರಪ್ಪ ಮಂಟೂರ, ಬಸವರಾಜ ಬಂಡಿವಡ್ಡರ, ಬಾಬಾನಸಾಬ್ ರಾಯಚೂರ, ಹೊನ್ನಪ್ಪ ಕಡೇರ, ಮಹದೇವಪ್ಪ ಬುರ್ಲಿ, ತಿಮ್ಮಣ್ಣ ಹಿರೇಮನಿ, ಎಂ.ಪಿ. ಕರ್ಜಗಿ, ಉಳವೆಪ್ಪ ಕಲಾದಗಿ ಹಾಗೂ ಫೌಂಡೇಷನ್‌ ಕಾರ್ಯದರ್ಶಿಯಾದ ಚನ್ನಮ್ಮ ಒಡೆಯರ, ಗಿರಿಜಮ್ಮ ಅಂಚಿ, ಸುಶೀಲಾ ಕೋಮನಾಳ, ಮೆಹರ್ ನಿಗಾರಿ, ಭಾಗ್ಯ ಮಂಜೋಳಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT