ಭಾನುವಾರ, ಏಪ್ರಿಲ್ 18, 2021
26 °C
ರಾಣೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆ

ರಾಣೆಬೆನ್ನೂರು: ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ

ಮುಕ್ತೇಶ್ವರ ಪಿ.ಕೂರಗುಮದಮಠ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಇಲ್ಲಿನ ಹುಣಸೀಕಟ್ಟಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಸಮಾನ ಆದ್ಯತೆ ನೀಡುತ್ತಾ ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣವಾಗಿದೆ. ಸತತ 3 ವರ್ಷಗಳಿಂದ ಶೇ 100 ಫಲಿತಾಂಶ ಬರುತ್ತಿರುವುದು ಇಲ್ಲಿನ ಗುಣಮಟ್ಟದ ಬೋಧನೆಗೆ ಹಿಡಿದ ಕನ್ನಡಿಯಾಗಿದೆ. 

2007ರಲ್ಲಿ ನಗರಸಭೆ ಪ್ರೌಢಶಾಲೆಯಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ ನಾಲ್ಕು ಕೋರ್ಸ್‌ಗಳಿಗೆ 150 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ, ಪ್ರಸ್ತುತ 1500 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. 2010ರಲ್ಲಿ ₹2 ಕೋಟಿ ಅನುದಾನದಲ್ಲಿ ಸ್ವಂತ ಕಟ್ಟಡದ ಸೌಲಭ್ಯ ದೊರಕಿತು. ಕಳೆದ ಐದಾರು ವರ್ಷಗಳಿಂದ ಬಿಎಸ್ಸಿ ಮತ್ತು ವಾಣಿಜ್ಯ‌ ವಿಭಾಗಕ್ಕೆ ಪ್ರವೇಶ ಪಡೆಯಲು ಹೆಚ್ಚು ಪೈಪೋಟಿ ನಡೆಯುತ್ತಿತ್ತು. ಈ ವರ್ಷ ಬಿ.ಎ ವಿಭಾಗಕ್ಕೂ ಕೂಡ ಪೈಪೋಟಿ ಕಂಡು ಬಂದಿದೆ.

2011-12ರಲ್ಲಿ ಎಂ.ಕಾಂ, ಎಂ.ಎ (ಅರ್ಥಶಾಸ್ತ್ರ) ಮತ್ತು ಎಂ.ಎಸ್ಸಿ (ಕಂಪ್ಯೂಟರ್‌ ಸೈನ್ಸ್)‌ ವಿಭಾಗಗಳು ಪ್ರಾರಂಭವಾಗಿದ್ದು, ಪ್ರವೇಶಾತಿ ಕೂಡ ಹೆಚ್ಚುತ್ತಿದೆ. 2016ರಲ್ಲಿ ನ್ಯಾಕ್ ಸಮಿತಿ ಕಾಲೇಜಿಗೆ ‘ಬಿ ಪ್ಲಸ್’‌ ಗ್ರೇಡ್‌ ನೀಡಿದೆ. ಬಿಎ- 420, ಬಿಕಾಂ- 603, ಬಿಎಸ್ಸಿ- 404 ಮತ್ತು ಎಂಎ, ಎಂಎಸ್ಸಿ ಹಾಗೂ ಎಂಕಾಂ ಗೆ ಒಟ್ಟು 65 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಹೆಚ್ಚು ಬರುತ್ತಿದೆ.

22 ಸಾವಿರ ಪುಸ್ತಕಗಳು: ಕಾಲೇಜಿನಲ್ಲಿ ಸುಸಜ್ಜಿತ ಗ್ರಂಥಾಲಯವಿದ್ದು 22 ಸಾವಿರ ಪುಸ್ತಕಗಳಿವೆ. 13 ಪತ್ರಿಕೆಗಳು‌ ಹಾಗೂ ಇ -ಜರ್ನಲ್‌ಗಳು ಇವೆ. ಡಿಜಿಟಲ್‌ ಗ್ರಂಥಾಲಯವಿದ್ದು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ವೈ–ಫೈ ಸೌಲಭ್ಯ ಅಳವಡಿಸಲು ಸಿದ್ಧತೆ ನಡೆಸಿದೆ. ಸುಸಜ್ಜಿತ ಕಂಪ್ಯೂಟರ್‌ ಲ್ಯಾಬ್‌, ಸ್ಮಾರ್ಟ್ ಕ್ಲಾಸ್‌ ಇದೆ.‌ 5 ಕೆವಿಎ ಸಾಮರ್ಥ್ಯದ ಯುಪಿಎಸ್‌ ಸೌಕರ್ಯವಿದೆ. ನಗರಸಭೆಯಿಂದ ಯೋಜನೆಯಲ್ಲಿ ₹2 ಲಕ್ಷ ಅನುದಾನದಲ್ಲಿ ವಿವಿಧ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಲಾಗಿದೆ.

ನೆರೆ ಸಂತ್ರಸ್ತರಿಗೆ ನೆರವು: ಈ ಕಾಲೇಜಿನ ಎನ್.‌ಎಸ್.‌ಎಸ್‌ ಘಟಕ ಪ್ರೊ.ಡಾ.ಅರುಣಚಂದನ್‌ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ₹15 ಲಕ್ಷ ದೇಣಿಗೆ ಸಂಗ್ರಹಿಸಿ, 2019ರಲ್ಲಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ₹1.67 ಲಕ್ಷ ದೇಣಿಗೆ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲಾಗಿದೆ. ಸ್ವಚ್ಛ ಭಾರತ ಮಿಷನ್‌ ಯೋಜನೆಯಿಂದ ಪ್ರಶಸ್ತಿ ಬಂದಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ನಗರದ ಕಾಮಧೇನು ಗೋಶಾಲೆಗೆ ₹50 ಸಾವಿರ ಹಣ ಸಂಗ್ರಹಿಸಿ ಮೇವು ಕೊಡಿಸಲಾಗಿದೆ.

ಕ್ರೀಡೆ: 2016 ಮತ್ತು 2019ರಲ್ಲಿ ಹ್ಯಾಂಡ್‌ಬಾಲ್‌ ಸ್ಪರ್ಧೆಯಲ್ಲಿ ಬಹುಮಾನ, 2018ರಲ್ಲಿ ಬ್ಯಾಡ್ಮಿಂಟನ್‌‌ ಮಹಿಳೆಯರ ವಿಭಾಗದಲ್ಲಿ ರನ್ನರ್‌ ಅಪ್‌ ಪಡೆದಿದ್ದಾರೆ. ಈಜು ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ, ಟೆನಿಕಾಯ್ಟ್‌ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ದಸರಾ ಹ್ಯಾಂಡ್‌ಬಾಲ್‌ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗ ಪ್ರಥಮ ಸ್ಥಾನ ಪಡೆದಿದೆ.

ಬೇಡಿಕೆಗಳು: ಕಾಲೇಜು ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿದ್ದು, ಪ್ರತ್ಯೇಕ ಬಸ್‌ ಸೌಲಭ್ಯ ಒದಗಿಸಬೇಕು. ಆಟದ ಮೈದಾನ, ವಸತಿ ನಿಲಯ ಹಾಗೂ ಜಿಮ್‌, ರಸ್ತೆ ಡಾಂಬರೀಕರಣ, ಹುಣಸೀಕಟ್ಟಿ ಮುಖ್ಯರಸ್ತೆಗೆ ಬಸ್‌ ಶೆಲ್ಟರ್‌ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕಾಲೇಜು ಸಿಬ್ಬಂದಿ ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು