ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಕಾರ್ಡ್ ಹರಿದು ಬಿಸಾಕಿ: ಬಸವರಾಜ ಬೊಮ್ಮಾಯಿ

Published 22 ಏಪ್ರಿಲ್ 2024, 15:26 IST
Last Updated 22 ಏಪ್ರಿಲ್ 2024, 15:26 IST
ಅಕ್ಷರ ಗಾತ್ರ

ಹಾವೇರಿ: ‘ಕಾಂಗ್ರೆಸ್‌ ನಾಯಕರು ನೀಡುವ ಗ್ಯಾರಂಟಿ ಕಾರ್ಡ್‌ಗಳಿಗೆ ಯಾವುದೇ ಮಾನ್ಯತೆ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಯಾವುದೇ ಕಾರಣಕ್ಕೂ ಬರುವುದಿಲ್ಲ. ಚುನಾವಣೆ ನಂತರ ಮನೆಗೆ ಹೋಗುತ್ತಾರೆ’ ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. 

ಹಾವೇರಿ ವಿಧಾನಸಭಾ ಕ್ಷೇತ್ರದ ಅಗಡಿ, ಕಾಟೇನಹಳ್ಳಿ, ಕಳ್ಳಿಹಾಳ, ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಹುಂಡೇನಹಳ್ಳಿ, ಮೋಟೆಬೆನ್ನೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

‘ಮಲ್ಲಿಕಾರ್ಜುನ ಖರ್ಗೆಯವರು ಕೊಡುವ ಗ್ಯಾರಂಟಿಗೆ ಯಾವ ಕಿಮ್ಮತ್ತಿದೆ. ಅವರು ಯಾರು ಗ್ಯಾರಂಟಿ ಕೊಡಲಿಕ್ಕೆ? ಚುನಾವಣೆ ಆದ ಮೇಲೆ ಅವರು ಅಧಿಕಾರಕ್ಕೆ ಬರುವುದಿಲ್ಲ. ಅವರೂ ಮನೆಗೆ ಹೋಗುತ್ತಾರೆ. ಕಾಂಗ್ರೆಸ್‌ನವರು ಸ್ಪರ್ಧೆ ಮಾಡಿರುವುದೇ 200 ಸ್ಥಾನಗಳಲ್ಲಿ. ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕು. ಹೀಗಾಗಿ ಕಾಂಗ್ರೆಸ್ ಕೊಡುವ ಗ್ಯಾರೆಂಟಿ ಕಾರ್ಡ್‌ಗಳಿಗೆ ಬೆಲೆ ಇಲ್ಲ. ಅವುಗಳನ್ನು ಹರಿದು ಹಾಕಿ’ ಎಂದು ಹೇಳಿದರು.

‘ಈ ಸರ್ಕಾರದಲ್ಲಿ ಯಾರೂ ಸುರಕ್ಷಿತ ಆಗಿಲ್ಲ‌. ಪೊಲೀಸ್‌ ಠಾಣೆಗಳು ಸೆಟ್ಲಮೆಂಟ್‌ ಕೇಂದ್ರಗಳಾಗಿವೆ. ಬರ ಬಂದಿದ್ದು, ರೈತರಿಗೆ ಪರಿಹಾರ ಕೊಡದೇ ಇರುವ ದರಿದ್ರ ಸರ್ಕಾರ ಇದು’ ಎಂದು ವಾಗ್ದಾಳಿ ನಡೆಸಿದರು.

‘ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರು ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದಾರೆ. ಯುಪಿಎ ಅವಧಿಯಲ್ಲಿ ದೇಶದಲ್ಲಿ ಮುಂಬೈ, ದೆಹಲಿಗಳಲ್ಲಿ ಬಾಂಬ್ ಸ್ಪೋಟ ಆದರೆ, ಪಾಕಿಸ್ತಾನಕ್ಕೆ ಪತ್ರ ಬರೆಯುತ್ತಿದ್ದರು. ಮೋದಿಯವರ ಅವಧಿಯಲ್ಲಿ ನಮ್ಮ ವೀರ ಸೈನಿಕರು ಪಾಕ್‌ ನೆಲಕ್ಕೆ ಹೋಗಿ ಭಯೋತ್ಪಾದಕರನ್ನು ಹೊಡೆದುರುಳಿಸಿದರು’ ಎಂದರು. 

‘ನಮ್ಮ ಅವಧಿಯಲ್ಲಿ ಮೂರು ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ‌. ನಾವು ಅಧಿಕಾರದಲ್ಲಿ ಇದ್ದಾಗ ಪ್ರವಾಹ ಬಂದಾಗ ಮನೆ ನಿರ್ಮಾಣಕ್ಕೆ ₹5 ಲಕ್ಷ ಕೊಟ್ಟಿದ್ದೆವು. ಬೆಳೆ ಪರಿಹಾರ ಎರಡು ಪಟ್ಟು ಕೊಟ್ಟಿದ್ದೆವು. ಇವರು ಬರಗಾಲದ ಪರಿಹಾರ ನೀಡದೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ’ ಎಂದು ದೂರಿದರು. 

‘ಸರ್ಕಾರದಿಂದ ಗುತ್ತಿಗೆದಾರರಿಗೆ ಕಿರುಕುಳ’

ಹಾವೇರಿ: ‘ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ಯಾವ ರೀತಿ ಮಾಡುತ್ತಿದೆ ಎಂದು ಗುತ್ತಿಗೆದಾರರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಗುತ್ತಿಗೆದಾರರಿಗೆ ಸರಿಯಾಗಿ ಕಾಮಗಾರಿ ಕೆಲಸ ಸಿಗುತ್ತಿಲ್ಲ. ಮಾಡಿದ ಕೆಲಸಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಅವರಿಗೆ ಯಾವ ರೀತಿ ಕಿರುಕುಳ ಕೊಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲಾ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು ‘ರಾಜ್ಯದಲ್ಲಿ ಅನುತ್ಪಾದಕ ವೆಚ್ಚ ಹೆಚ್ಚಾಗಿದ್ದು ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿ ಅನ್ನುವುದು ನಿರಂತರ ಪ್ರಕ್ರಿಯೆಯಾಗಿದೆ. ಒಂದು ಆರ್ಥಿಕ ಅಭಿವೃದ್ಧಿ ಮತ್ತೊಂದು ಸಾಮಾಜಿಕ ಅಭಿವೃದ್ಧಿ. ಬಂಡವಾಳ ವೆಚ್ಚ ಈ ಬಜೆಟ್‌ನಲ್ಲಿ ಬಹಳ ಕಡಿಮೆಯಾಗಿದೆ. ಅನುತ್ಪಾದಕ ವೆಚ್ಚ ಹೆಚ್ಚಾಗಿದೆ. ಅಭಿವೃದ್ಧಿ ವೇಗ ಹೆಚ್ಚಾಗಬೇಕಿದೆ’ ಎಂದರು. 

‘ನಮ್ಮ ಅವಧಿಯಲ್ಲಿ ಬಿಬಿಎಂಪಿ ಗುತ್ತಿಗೆದಾರರು ಅನಗತ್ಯವಾಗಿ ಶೇ 40 ಕಮಿಷನ್ ಆರೋಪ ಮಾಡಿದರು‌. ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಒಂದಾದರೂ ದಾಖಲೆ ಕೊಡಿ ಎಂದು ಕೇಳಿದೆ. ಆದರೆ ಅವರ ಬಳಿ ಒಂದೂ ದಾಖಲೆ ಇರಲಿಲ್ಲ. ಈಗ ಸರ್ಕಾರ ತನಿಖೆಗೆ ಆಯೋಗ ಮಾಡಿದೆ. ಆದರೆ ಆರು ತಿಂಗಳಾದರೂ ಇದುವರೆಗೂ ಯಾವುದೇ ತನಿಖೆಯ ಪ್ರಗತಿಯಾಗಿಲ್ಲ. ನಾನು ಹಾವೇರಿ ಜಿಲ್ಲೆಯಲ್ಲಿ ಯಾವುದೇ ಗುತ್ತಿಗೆದಾರರ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ’ ಎಂದು ಹೇಳಿದರು.

ಸಭೆಯಲ್ಲಿ ಗುತ್ತಿಗೆದಾರರಾದ ಮಹೇಶ ಹಾವೇರಿ ಕುಮಾರ ಹತ್ತಿಕಾಳ ಶ್ರೀಕಾಂತ ದುಂಡೀಗೌಡ್ರ ಅರ್ಜುನ ಹಂಚಿನಮನಿ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT