ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಪರಿಹಾರಗಳ ನಿರೀಕ್ಷೆಯಲ್ಲಿ ಗ್ರಾಮಸ್ಥರು

ಹಿರೇಕೆರೂರ ತಾಲ್ಲೂಕು ದೂದಿಹಳ್ಳಿಯಲ್ಲಿ ಜಿಲ್ಲಾಧಿಕಾರಿ ‘ಗ್ರಾಮ ವಾಸ್ತವ್ಯ’ ಇಂದು
Last Updated 19 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹಿರೇಕೆರೂರ:‘ಹಳ್ಳಿ ಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಾಲ್ಲೂಕಿನ ದೂದೀಹಳ್ಳಿ ಗ್ರಾಮದಲ್ಲಿ ಮಾರ್ಚ್‌ 20ರಂದು ‘ಗ್ರಾಮ ವಾಸ್ತವ್ಯ’ ಮಾಡಲಿದ್ದಾರೆ. ಹೀಗಾಗಿ ಗ್ರಾಮದ ಸರ್ವ ಸಮಸ್ಯೆಗಳಿಗೂ ಪರಿಹಾರ ಸಿಗಬಹುದು ಎಂದು ಗ್ರಾಮಸ್ಥರು ಬೇಡಿಕೆ ಪಟ್ಟಿ ಸಿದ್ಧಮಾಡಿಕೊಂಡು ಕಾಯುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ 3 ಕಿ.ಮೀ. ದೂರದಲ್ಲಿರುವ ದೂದೀಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯದಿಂದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಾಗುವುದರಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬುದು ಗ್ರಾಮಸ್ಥರ ಆಶಯವಾಗಿದೆ.

ಗ್ರಾಮದ ಹೊರವಲಯದಲ್ಲಿ ಭವ್ಯವಾಗಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ಚನ್ನಮ್ಮ ವಸತಿ ಶಾಲೆಗಳು ಗ್ರಾಮದ ಕಳೆಯನ್ನು ಹೆಚ್ಚಿಸಿವೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆ ಅತ್ಯುತ್ತಮ ಫಲಿತಾಂಶದಿಂದ ಗಮನ ಸೆಳೆಯುತ್ತಿದೆ.

ಗ್ರಾಮದ ಮಧ್ಯ ಭಾಗದಲ್ಲಿರುವ ದೊಡ್ಡ ಹೊಂಡ ಸಾರ್ವಜನಿಕ ಶೌಚಾಲಯದಂತೆ ಬಳಕೆಯಾಗುತ್ತಿದೆ. ಹೊಂಡದ ಸುತ್ತ ಮಲಮೂತ್ರ ವಿಸರ್ಜನೆ ಯಾವುದೇ ಅಳುಕು ಇಲ್ಲದಂತೆ ಹಗಲು ಹೊತ್ತಿನಲ್ಲಿಯೇ ನಡೆಯುತ್ತಿದೆ. ಕೆಲವರು ಹೊಂಡದ ಬದಿಯಲ್ಲಿ ತಿಪ್ಪೆಗಳನ್ನು ಹಾಕಿದ್ದಾರೆ. ಹೊಂಡದ ಸುತ್ತಲೂ ಕಸ, ಮುಳ್ಳುಕಂಟಿ ಬೆಳೆದು ನಿಂತಿವೆ. ನೀರು ಹರಿದು ಬರುವ ಕಾಲುವೆಗಳು ಮುಚ್ಚಿ ಹೋಗಿದ್ದು, ಮಳೆ ನೀರು ಸರಿಯಾಗಿ ಹರಿದು ಬರುತ್ತಿಲ್ಲ. ಅಲ್ಪಸ್ವಲ್ಪ ನೀರು ಕೆಟ್ಟು ವಾಸನೆ ಹೊಡೆಯುತ್ತಿದೆ.

ʼಒಂದು ಕಾಲದಲ್ಲಿ ಈ ಹೊಂಡದ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದರು. ಈಗ ಕೊಳಚೆ ಕೇಂದ್ರವಾಗಿದೆ. ಜನ, ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಹೊಂಡವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇವೆʼ ಎಂದು ಗ್ರಾಮದ ಈರಣ್ಣ ಮಾಗನೂರ ತಿಳಿಸಿದರು.

ಗ್ರಾಮದಲ್ಲಿ ಸಾಕಷ್ಟು ಕುಡಿಯುವ ನೀರು ಲಭ್ಯವಿದೆ. ಕೆಲವು ಕಡೆಗಳಲ್ಲಿ ಮನೆಗಳ ಎದುರು ಕುಡಿಯುವ ನೀರು ಸಿಗುತ್ತದೆ. ಇನ್ನು ಕೆಲವು ವಾರ್ಡ್‌ಗಳಲ್ಲಿ ತಳ್ಳುಗಾಡಿಗಳ ಮೂಲಕ ನೀರು ತೆಗೆದುಕೊಂಡು ಹೋಗಬೇಕಿದೆ. ಎಲ್ಲ ಕಡೆಗೆ ಸಮರ್ಪಕ ನೀರು ಪೂರೈಕೆ ಆಗಬೇಕಿದೆ ಎಂದು ಗ್ರಾಮಸ್ಥ ಈರಪ್ಪ ಮುತ್ತಗಿ ಹೇಳಿದರು.

ಗ್ರಾಮದ ಬಹುತೇಕ ರಸ್ತೆಗಳನ್ನು ಕಾಂಕ್ರೀಟ್‌ ಮಾಡಲಾಗಿದೆ. ಹೊಸದಾಗಿ ಗ್ರಾಮ ಪಂಚಾಯ್ತಿಗೆ ಆಯ್ಕೆಯಾದವರು ಚರಂಡಿಗಳನ್ನು ಈಚೆಗೆ ಸ್ವಚ್ಛಗೊಳಿಸಿದ್ದಾರೆ. ಮುಖ್ಯ ರಸ್ತೆಯಲ್ಲಿ ಪಕ್ಕಾ ಗಟಾರ ನಿರ್ಮಾಣವಾಗಬೇಕಿದೆ. ಕಲ್ಯಾಣ ಮಂಟಪದ ಎದುರಿನ ಅಡ್ಡ ಚರಂಡಿಯನ್ನು ಗುತ್ತಿಗೆದಾರರು ಸರಿಯಾಗಿ ನಿರ್ಮಾಣ ಮಾಡದೇ ಇರುವುದರಿಂದ ಭಾರಿ ಮಳೆ ಬಂದಾಗ ತಕ್ಷಣ ನೀರು ಹರಿದು ಹೋಗದೇ ಸಮೀಪದ ಮನೆಗಳಲ್ಲಿ ನೀರು ನುಗ್ಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT