ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಂರಕ್ಷಣೆ; ನಮ್ಮೆಲ್ಲರ ಹೊಣೆ-ವಿರೂಪಾಕ್ಷಪ್ಪ ಬಳ್ಳಾರಿ

ಜಲ ಶಕ್ತಿ ಅಭಿಯಾನಕ್ಕೆ ಚಾಲನೆ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿಕೆ
Last Updated 9 ಏಪ್ರಿಲ್ 2021, 13:53 IST
ಅಕ್ಷರ ಗಾತ್ರ

ಹಾವೇರಿ: ‘ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ನಿಮ್ಮ ಕೆರೆ ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ. ನಮ್ಮ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾದ್ದರಿಂದ ಜಲಸಂರಕ್ಷಣೆ ಅತ್ಯಂತ ಅವಶ್ಯವಾಗಿದೆ’ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ‘ಕ್ಯಾಚ್ ದ್ ರೈನ್‌’ ಜಲಶಕ್ತಿ ಅಭಿಯಾನಕ್ಕೆ ಶುಕ್ರವಾರ ಕುಳೇನೂರ ನೂತನ ಕೆರೆ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಕೆರೆ ಮಣ್ಣನ್ನು ತಮ್ಮ ಜಮೀನುಗಳಿಗೆ ತೆಗೆದುಕೊಂಡು ಹೋಗಲು ಮುಂದಾದರೆ, ಕೆರೆ ಹೂಳೆತ್ತಲು ‘ಕೆರೆ ಸಂಜೀವಿನಿ’ ಯೋಜನೆಯಡಿ ₹5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ರೈತರು ತಮ್ಮ ಖರ್ಚಿನಲ್ಲಿ ಮಣ್ಣನ್ನು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್ ಮಾತನಾಡಿ, ‘ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮನ್ವಯದೊಂದಿಗೆ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ, ಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಪುನಶ್ಚೇತನವನ್ನು ನೂರರಷ್ಟು ಯಶಸ್ವಿಗೊಳಿಸಲಾಗುವುದು. ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣದೊಂದಿಗೆ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಹಾವೇರಿ ಪ್ರಥಮ:

₹19 ಲಕ್ಷ ಅನುದಾನದಲ್ಲಿ ಈ ಕೆರೆಯ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಇಲ್ಲಿ ಒಂದು ಬಂಡ್ ನಿರ್ಮಾಣ ಮಾಡಿ ಕಾಮಗಾರಿ ಯಶಸ್ವಿಗೊಳಿಸಲಾಗುವುದು. ರೈತ ಕ್ರಿಯಾ ಯೋಜನೆಯಡಿ 10 ದಿನಗಳಲ್ಲಿ ಸುಮಾರು ಹತ್ತು ಸಾವಿರ ಎನ್.ಎಂ.ಆರ್. ನೋಂದಣಿ (ನಾಮಿನಲ್ ಮಾಸ್ಟರ್ ರೋಲ್) ಮೂಲಕ ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.

‘ನಿರ್ಮಲ ಹಾವೇರಿ’ ಯೋಜನೆಯಡಿ ಪ್ರತಿ ಗ್ರಾಮದಲ್ಲೂ ಬಚ್ಚಲ ನೀರು ಹಾಗೂ ಕೊಳಚೆ ನೀರು ಚರಂಡಿ ಮೂಲಕವೇ ಹರಿಯುವಂತೆ ವ್ಯವಸ್ಥೆ ಮಾಡಲಾಗುವುದು. ಎಲ್ಲ ಕೊಳಚೆ ನೀರನ್ನು ಒಂದೇ ಗುಂಡಿಯಲ್ಲಿ ಸಂಗ್ರಹಿಸಿ ನೈಸರ್ಗಿಕವಾಗಿ ಶುದ್ಧೀಕರಿಸಿ ಗುಣಮಟ್ಟದ ನೀರನ್ನು ಕೆರೆಗೆ ಹರಿಸಲಾಗುವುದು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಶ್ರಮದಾನ:

ಕುಳೇನೂರು ಗ್ರಾಮದಲ್ಲಿ ನಡೆದ ಹೊಸ ಕೆರೆ ನಿರ್ಮಾಣ ಕಾಮಗಾರಿಯಲ್ಲಿ ಬ್ಯಾಡಗಿ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಸಿಇಒ ಮೊಹಮ್ಮದ್‌ ರೋಶನ್‌ ಅವರು ಕೂಲಿಕಾರ್ಮಿಕರೊಂದಿಗೆ ಶ್ರಮದಾನದಲ್ಲಿ ಭಾಗವಹಿಸಿ ಗುದ್ದಲಿ, ಪಿಕಾಸಿ ಹಿಡಿದು ಮಣ್ಣು ಅಗೆದು ಬುಟ್ಟಿಯಲ್ಲಿ ತುಂಬಿ ಸಾಗಿಸಿದರು.

ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಲಮಾಣಿ, ಕುಳೇನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಕೆಂಗೊಂಡನವರ, ಉಪಾಧ್ಯಕ್ಷ ಸಿದ್ದಪ್ಪ ಲಮಾಣಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರಪ್ಪ ಹಾವೇರಿ ಇದ್ದರು. ಉದ್ಯೋಗ ಖಾತ್ರಿ ನೋಡೆಲ್ ಅಧಿಕಾರಿ ಮಹಾಂತೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾವೇರಿ ತಾಲ್ಲೂಕು ಪಂಚಾಯತಿ ಇಒ ಬಸವರಾಜ ಡಿ. ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT