ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಮಳೆ ಕೊರತೆ: ಒಣಗಿದ 164 ಕೊಳವೆಬಾವಿ

49 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಶುದ್ಧ ನೀರಿನ ಘಟಕ್‌ ಬಂದ್‌– ಗ್ರಾಮಸ್ಥರ ಪರದಾಟ
Published 9 ಏಪ್ರಿಲ್ 2024, 6:02 IST
Last Updated 9 ಏಪ್ರಿಲ್ 2024, 6:02 IST
ಅಕ್ಷರ ಗಾತ್ರ

ಸವಣೂರು: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಯ ತೀವ್ರ ಕೊರತೆಯಿಂದ ಪಟ್ಟಣ ಮತ್ತು  ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 

ತಾಲ್ಲೂಕಿನ 65 ಗ್ರಾಮಗಳಲ್ಲಿ 514 ಕೊಳವೆಬಾವಿಗಳಿದ್ದು, ಅದರಲ್ಲಿ 350 ನೀರನ್ನು ಪೂರೈಸಿದರೆ ಉಳಿದ 164 ಕೊಳವೆಬಾವಿಗಳಲ್ಲಿ ನೀರಿಲ್ಲದೆ ಪಾಳುಬಿದ್ದಿವೆ. ಮಂತ್ರವಾಡಿ ಹಾಗೂ ಡಂಬರಮತ್ತೂರ ಗ್ರಾಮಗಳಲ್ಲಿ ಮಾತ್ರ ನೀರಿನ ಬವಣೆ ತೀವ್ರವಾಗಿದ್ದು, ಸಾರ್ವಜನಿಕರಿಗೆ ನೀರು ಪೂರೈಸಲು ಮಾಸಿಕ ₹12 ಸಾವಿರ ಬಾಡಿಗೆಯಂತೆ ತಲಾ ಗ್ರಾಮಕ್ಕೆ ಎರಡರಂತೆ ರೈತರ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದುಕೊಂಡು ನೀರು ಪೂರೈಸಲಾಗುತ್ತಿದೆ.

‘ತಾಲ್ಲೂಕಿನ 49 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುವ ಲಕ್ಷಣಗಳಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೆ 49 ಗ್ರಾಮಗಳಲ್ಲಿ ರೈತರ 108 ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಉಳಿದ ಗ್ರಾಮಗಳಲ್ಲಿ ನೀರಿನ ತೊಂದರೆಯಾಗದಂತೆ ಕ್ರಮವಹಿಸಲು ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣವರ.

ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿಯೇ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದು ಅನುಕೂಲ ಕಲ್ಪಿಸಿ ಮೋತಿ ತಲಾಬ್‌ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಕೆರೆಗಳನ್ನು ತುಂಬಿಸಿ ಜನ ಜಾನುವಾರುಗಳಿಗೆ ನೀರಿನ ದಾಹವನ್ನು ಇಂಗಿಸಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ವಾಡಿಕೆಯಷ್ಟು ಮಳೆಯಾಗದೆ, ಅಲ್ಪ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ತಾಲ್ಲೂಕಿಗೆ ವರದಾನವಾದ ವರದಾ ನದಿಯ ಒಡಲು ಕೂಡಾ ಬರಿದಾಗಿರುವ ಕಾರಣ ಜಲಸಂಕಟದಿಂದ ಜನ ತತ್ತರಿಸುವಂತಾಗಿದೆ. 

‘ಸವಣೂರು ಪಟ್ಟಣದಲ್ಲಿ ನೀರು ಪೂರೈಸಲು ಪುರಸಭೆಯ 106 ಕೊಳವೆಬಾವಿಗಳಿದ್ದು, ಅವುಗಳು ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಪ್ರತಿ 8 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಿ ಬೇಸಿಗೆಯ ದಾಹವನ್ನು ಇಂಗಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವಾರದೊಳಗೆ 4 ಕೊಳವೆಬಾವಿಗಳ ಕಾರ್ಯವನ್ನು ಪ್ರಾರಂಭಿಸಿ ನಿರಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನದಾಗಿ ರೈತರ 6 ಕೊಳವೆಬಾವಿಗಳನ್ನು ತುರ್ತು ಪರಿಸ್ಥಿತಿಗಾಗಿ ಗುರುತಿಸಲಾಗಿದೆ’ ಎನ್ನುತ್ತಾರೆ ಪುರಸಭೆ ಎಂಜಿನೀಯರ್ ನಾಗರಾಜ ಮಿರ್ಜಿ.

ಕೆರೆ ತುಂಬಿಸದ ಅಧಿಕಾರಿಗಳು: ‘ಮಳೆಗಾಲದಲ್ಲಿ ಮೈದುಂಬಿ ವರದಾ ನದಿ ಹರಿಯಿತು. ಆಗ ಪಟ್ಟಣದ ಮೋತಿ ತಲಾಬ್‌ ಕೆರೆ ಸೇರಿದಂತೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿರಲಿಲ್ಲ. ಅಂತರ್ಜಲಮಟ್ಟವೂ ಕುಸಿಯದೇ ಕೆರೆಯ ಸುತ್ತಮುತ್ತಲಿನ ರೈತರ ಕೊಳವೆಬಾವಿಗಳಲ್ಲಿ ನೀರು ಚೆನ್ನಾಗಿ ಬರುತ್ತಿತ್ತು. ಅಧಿಕಾರಿಗಳ ನಿಷ್ಕಾಳಜಿಯಿಂದ ಕೆರೆಗಳು ತುಂಬಿಲ್ಲ. ಹೀಗಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ’ ಎಂದು ರೈತ ಮುಖಂಡರಾದ ಪ್ರಕಾಶ ಬಾರ್ಕಿ, ರಮೇಶ ಮರಡೂರು ಸಮಸ್ಯೆ ತೋಡಿಕೊಂಡರು.

ಸವಣೂರು ತಾಲ್ಲೂಕಿನ ಬಸವನಕೊಪ್ಪ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ
ಸವಣೂರು ತಾಲ್ಲೂಕಿನ ಬಸವನಕೊಪ್ಪ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ
ಬೇಸಿಗೆ ತಾಪಮಾನದಿಂದ ಅಂತರ್ಜಲ ಕಡಿಮೆಯಾದರೂ ಒಂದು ಗ್ರಾಮ ಹೊರತುಪಡಿಸಿದರೆ ತಾಲ್ಲೂಕಿನಲ್ಲಿ ಉಳಿದ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂಥ ಪರಿಸ್ಥಿತಿ ಎದುರಾಗಿಲ್ಲ
– ಭರತರಾಜ ಕೆ.ಎನ್ ತಹಶೀಲ್ದಾರ್‌ ಸವಣೂರು
ಮಂತ್ರವಾಡಿ ಗ್ರಾಮದಲ್ಲಿ ಮಾತ್ರ ನೀರಿನ ಕೊರತೆಯಾಗಿದ್ದು ರೈತರ ಬೋರ್‌ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಉಳಿದ 64 ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯಿಂದ ಖಾಸಗಿ ಬೋರ್‌ವೆಲ್ ಗುರುತಿಸಲಾಗಿದೆ.
– ಚಂದ್ರಶೇಖರ ನೆಗಳೂರ ಪ್ರಭಾರ ಎಇಇ ಜಿಲ್ಲಾ ಪಂಚಾಯಿತಿ ನೀರು ಮತ್ತು ನೈರ್ಮಲ್ಯ ಇಲಾಖೆ

ಶುದ್ಧ ನೀರಿನ ಘಟಕ ಸ್ಥಗಿತ ತಾಲ್ಲೂಕಿನಲ್ಲಿ 94 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅದರಲ್ಲಿ ಬಸವನಕೊಪ್ಪ ಗ್ರಾಮದ ಘಟಕ 2 ವರ್ಷ ಕುರುಬರಮಲ್ಲೂರ ಗ್ರಾಮದ ಘಟಕ 3 ತಿಂಗಳಿಂದ ಮಾಹೂರು ನಾಯಿಕೆರೂರು ಸೇವಾಲಪೂರ ಅರಳಿಹಳ್ಳಿ ಹೆಸರೂರ ಮಂತ್ರೋಡಿ ಕಲ್ಮಡವು ಬೇವಿನಹಳ್ಳಿ ಗ್ರಾಮದಲ್ಲಿನ ಘಟಕಗಳು ಸ್ಥಗಿತಗೊಂಡಿವೆ.  ‘ಮಣ್ಣೂರು ಗ್ರಾಮದಲ್ಲಿ ಒಂದೂವರೆ ವರ್ಷ ಹೊಸನೀರಲಗಿ ಗ್ರಾಮದಲ್ಲಿ ನಾಲ್ಕು ತಿಂಗಳಿಂದ ಘಟಕ ಬಂದ್‌ ಆಗಿದ್ದು ಸಾರ್ವಜನಿಕರು ನೀರಿಗಾಗಿ ದೂರದ ಗ್ರಾಮಗಳಿಗೆ ನಿತ್ಯ ಹೋಗಿ ಬರುವಂತಾಗಿದೆ. ಚುನಾವಣೆ ಕೆಲಸದಲ್ಲಿ ಮಗ್ನರಾಗಿರುವ ಅಧಿಕಾರಿಗಳು ಶುದ್ಧ ನೀರು ಪೂರೈಸುವಲ್ಲಿ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT