ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಪ್ರದರ್ಶನ: ಹೆಲ್ಮೆಟ್ ಜಾಗೃತಿ

ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ಗಳಿಂದ ಕಾಲೇಜುಗಳಿಗೆ ಭೇಟಿ
Last Updated 16 ಅಕ್ಟೋಬರ್ 2019, 15:45 IST
ಅಕ್ಷರ ಗಾತ್ರ

ವಿಜಯಪುರ: ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಲ್ಲಿ ಹೆಲ್ಮೆಟ್ ಬಳಕೆಯ ಬಗ್ಗೆ ವಿಡಿಯೊವನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ಇದಕ್ಕೆ ಸಂಬಧಿಸಿದಂತೆ ವಿಡಿಯೊ ಸಿದ್ಧಪಡಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಅಂತಿಮವಾಗಲಿದೆ. ಅಪಘಾತದ ಭೀಕರತೆಯನ್ನು ಒಳಗೊಂಡ ಚಿತ್ರಗಳು, ಮೃತರ ಕುಟಂಬದವರ ಸಂಕಷ್ಟ ಸೇರಿದಂತೆ ಅನೇಕ ವಿಷಯಗಳ ಮೇಲೆ ಈ ವಿಡಿಯೊದಲ್ಲಿ ಬೆಳಕು ಚೆಲ್ಲಲಾಗಿದೆ.

ಕಾಲೇಜುಗಳಲ್ಲಿ ಜಾಗೃತಿ: ನಗರದಲ್ಲಿ ಎರಡು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಒಟ್ಟು 78 ಪದವಿಪೂರ್ವ ಕಾಲೇಜುಗಳು ಹಾಗೂ ಎರಡು ಸರ್ಕಾರಿ ಸೇರಿದಂತೆ 15 ಪದವಿ ಕಾಲೇಜುಗಳು ಇವೆ. ಈ ಕಾಲೇಜುಗಳಿಗೆ ಭೇಟಿ ನೀಡಲಿರುವ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳು ಹೆಲ್ಮೆಟ್ ಬಳಕೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿವಳಿಕೆ ನೀಡಿದರೆ ಅವರು ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಲ್ಲಿ ಜಾಗೃತಿ ಮೂಡಿಸುತ್ತಾರೆ ಎಂಬ ನಂಬಿಕೆ ಪೊಲೀಸ್ ಇಲಾಖೆಯದ್ದು.

ಅಪಘಾತಗಳಲ್ಲಿ ಸಾಮಾನ್ಯವಾಗಿ ಯುವಕರು, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೆಲ್ಮೆಟ್ ಧರಿಸಿದ್ದರೆ ಪ್ರಾಣ ಹಾನಿಯನ್ನು ತಪ್ಪಿಸಬಹುದಾಗಿತ್ತು ಎಂಬುದನ್ನು ಅರಿತ ಪೊಲೀಸ್ ಇಲಾಖೆಯು ಕಾರ್ಯಕ್ಕೆ ಮುಂದಾಗಿದೆ.

ಕಡ್ಡಾಯವಿದ್ದರೂ ಬಳಕೆ ಇಲ್ಲ: ಮುಂಬದಿ ಹಾಗೂ ಹಿಂಬದಿ ಸವಾರರಿಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ. ಪೊಲೀಸರು ದಂಡ ವಿಧಿಸಿದರೂ ಸವಾರರು ಸೊಪ್ಪು ಹಾಕುತ್ತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಅನೇಕ ಬಾರಿ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ದಂಡದ ಪ್ರಮಾಣ ಏರಿಕೆಯಾಗುತ್ತಿದೆಯೇ ಹೊರತು ಹೆಲ್ಮೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿಲ್ಲ.

ಹೆಲ್ಮೆಟ್ ಕಡ್ಡಾಯ: ‘ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಬೈಕ್‌ನಲ್ಲಿ ಕಾಲೇಜಿಗೆ ಬಂದರೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಲೇಬೇಕು. ಇಲ್ಲವಾದಲ್ಲಿ ಅವರಿಗೆ ಕಾಲೇಜು ಆವರಣಕ್ಕೆ ಪ್ರವೇಶನೀಡಬಾರದು ಎಂದು ಪ್ರಾಂಶುಪಾಲರನ್ನು ಕೋರಲಾಗಿದೆ. ಈಗಾಗಲೇ ಕೆಲವು ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT