ಮಂಗಳವಾರ, ಆಗಸ್ಟ್ 20, 2019
28 °C

ನಕಲಿ ವೈದ್ಯರ ವಿರುದ್ಧ ಕ್ರಮ: ಜಿಲ್ಲಾಡಳಿತ ಎಚ್ಚರಿಕೆ

Published:
Updated:

ಶಿವಮೊಗ್ಗ: ಜಿಲ್ಲೆಯಲ್ಲಿ ನಕಲಿ ವೈದ್ಯ ವಿಧಾನ ಅನುಸರಿಸುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೆ ಜಿಲ್ಲೆಯಲ್ಲಿ ಗುರುತಿಸಲಾದ 74 ಅನಧಿಕೃತ ಕ್ಲಿನಿಕ್‌ಗಳಿಗೆ ತಿಳಿವಳಿಕೆ ನೋಟಿಸ್‌ ನೀಡಲಾಗಿದೆ. 7ಘಟಕಗಳ ಮುಖ್ಯಸ್ಥರು ಕೇಂದ್ರ ಸ್ಥಗಿತಗೊಳಿಸಿರುವುದಾಗಿ ಲಿಖಿತ ಮಾಹಿತಿ ನೀಡಿದ್ದಾರೆ. 16ಘಟಕಗಳಿಗೆ ಬೀಗಮುದ್ರೆ ಹಾಕಲು ಆದೇಶಿಸಲಾಗಿದೆ. 28ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ಅನಧಿಕೃತ ಚಿಕಿತ್ಸಾಲಯಗಳ ವೈದ್ಯರು ತಾವು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಘಟಕಗಳು ಹಾಗೂ ಲ್ಯಾಬೊರೇಟರಿ ಕುರಿತು ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ನಂತರ ನೋಂದಾಯಿಸಬೇಕು. ತಪ್ಪಿದಲ್ಲಿ ಅನಧಿಕೃತ ಘಟಕಗಳಳು ಎಂದು ಪರಿಗಣಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಸಾಮಾನ್ಯ ಸ್ವರೂಪದ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧ ನೀಡುವ ಪಾರಂಪರಿಕ ವೈದ್ಯರ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಜ್ಞ ವೈದ್ಯರು ಹಾಗೂ ಕಾನೂನು ಸಲಹೆಗಾರರ ಜತೆ ಸಮಾಲೋಚನೆ ನಡೆಸಿದರು.

ಎಲೆಕ್ಟ್ರೋ ಹೋಮಿಯೋಪತಿ ವಿದ್ಯಾರ್ಹತೆ ಹೊಂದಿದ ಎಂಟು ವೈದ್ಯರು ಕ್ಲಿನಿಕ್‌ ಆರಂಭಿಸಲು ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಇಲಾಖೆಯ ನಿಯಮಗಳ ಅಡಿ ಅನುಮತಿ ನೀಡಲು ಅವಕಾಶವಿಲ್ಲ. ಆಯುಕ್ತರಿಂದ ಮಾರ್ಗದರ್ಶನ ಪಡೆದು ಅಗತ್ಯಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ವೈದ್ಯರ ವಿರುದ್ಧ ಬಂದ ದೂರುಗಳು ಹಾಗೂ ಸೇವಾನಿರತ ವೈದ್ಯರ ಮೇಲಿನ ಹಲ್ಲೆಯ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ ಸುರಗಿಹಳ್ಳಿ, ಕಾನೂನು ಸಲಹೆಗಾರ ವೆಂಕಟೇಶರಾವ್ ಉಪಸ್ಥಿತರಿದ್ದರು.

Post Comments (+)