ಸೋಮವಾರ, ಸೆಪ್ಟೆಂಬರ್ 20, 2021
22 °C
ವಿಜಯಪುರ ನಗರದಲ್ಲಿವೆ ನಾಲ್ಕು ಕ್ಯಾಂಟಿನ್‌ಗಳಿಗೆ ಆರು ತಿಂಗಳಿಂದ ಪಾವತಿಯಾಗದ ಬಿಲ್‌

ಇಂದಿರಾ ಕ್ಯಾಂಟೀನ್: ನಿರ್ವಹಣೆ ಸಂಕಷ್ಟ

ಬಾಬುಗೌಡ ರೋಡಗಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಡವರ ಹಸಿವು ನೀಗಿಸುವ ಉದ್ದೇಶದಿಂದ ಗುಮ್ಮಟ ನಗರಿಯಲ್ಲಿ ಸ್ಥಾಪನೆಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಇದೀಗ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗಿದೆ.

ನಗರದ ನಾಲ್ಕು ಕಡೆ ಇಂದಿರಾ ಕ್ಯಾಂಟಿನ್‌ಗಳಿದ್ದು, ಪ್ರತಿನಿತ್ಯ ಕಡಿಮೆ ದರದಲ್ಲಿ 2 ಸಾವಿರ ಪ್ಲೇಟ್‌ ಉಪಾಹಾರ, 2 ಸಾವಿರ ಪ್ಲೇಟ್‌ ಮಧ್ಯಾಹ್ನ ಊಟ ಹಾಗೂ 1,450 ಪ್ಲೇಟ್‌ ರಾತ್ರಿ ಊಟ ಪೂರೈಸಲಾಗುತ್ತಿದೆ. ಆದರೆ, ಕಳೆದ ಏಪ್ರಿಲ್‌ ತಿಂಗಳಿಂದ ಈವರೆಗೆ (ಸೆಪ್ಟೆಂಬರ್) ಬರಬೇಕಿದ್ದ ₹90 ಲಕ್ಷ ಅನುದಾನ ಪಾವತಿ ಆಗದಿರುವುದು ನಿರ್ವಹಣೆಗೆ ಸಮಸ್ಯೆ ಆಗಿ ಪರಿಣಮಿಸಿದೆ.

‘ಕಾರ್ಮಿಕರ ವೇತನ ಸೇರಿದಂತೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಊಟಕ್ಕೆ ಪ್ರತಿದಿನ ₹50 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ತಿಂಗಳಿಗೆ ಅಂದಾಜು ₹15ರಿಂದ ₹16 ಲಕ್ಷ ಖರ್ಚು ಬರಲಿದೆ. ಏಪ್ರಿಲ್‌ನಿಂದ ಈವರೆಗೆ ₹90 ಲಕ್ಷ ಬಿಲ್‌ ಬಾಕಿ ಉಳಿದುಕೊಂಡಿದೆ. ಇದುವರೆಗೆ ಅನುದಾನ ಕೊರತೆಯಲ್ಲೂ ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಇನ್ನೂ ವಿಳಂಬ ಮಾಡಿದರೆ ಕ್ಯಾಂಟೀನ್‌ಗಳನ್ನು ನಡೆಸುವುದು ಕಷ್ಟವಾಗುತ್ತದೆ. ಆದಷ್ಟು ಶೀಘ್ರ ಬಾಕಿ ಮೊತ್ತ ಪಾವತಿಸಿದರೆ ಅನುಕೂಲವಾಗುತ್ತದೆ’ ಎಂದು ಇಂದಿರಾ ಕ್ಯಾಂಟೀನ್‌ ನಿರ್ವಹಣೆ ನೋಡಿಕೊಳ್ಳುವ ಸಚಿನ್‌ ಝಳಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾಂಟೀನ್ ನಿರ್ವಹಣೆಗೆ ಪಾಲಿಕೆಯಿಂದ ಶೇ 70 ಹಾಗೂ ಕಾರ್ಮಿಕ ಇಲಾಖೆ ಶೇ 30ರಷ್ಟು ಅನುದಾನ ನೀಡಬೇಕಿದೆ. ಸರ್ಕಾರ ಎಸ್‌ಎಫ್‌ಸಿ ಅನುದಾನ ಬಿಡುಗಡೆಗೊಳಿಸಿದ್ದು, ಹಿಂದಿನ ಆಯುಕ್ತರ ಹೆಸರಿನ ಖಜಾನೆ–2 ಬದಲಾವಣೆ ಮಾಡಿಕೊಂಡು, ನಮ್ಮ ಪಾಲಿನ (ಪಾಲಿಕೆ) ₹ 60 ಲಕ್ಷ ಅನುದಾನವನ್ನು ವಾರದಲ್ಲಿ ಪಾವತಿಸಲಾಗುವುದು. ನಗರ ಶಾಸಕರು ವಿಶೇಷ ಅನುದಾನ ತಂದಿರುವುದರಿಂದ ನಗರದ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಆಗುವುದಿಲ್ಲ’ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಹೇಳಿದರು.

***

ಎಸ್‌ಎಫ್‌ಸಿ ಅನುದಾನ ಬಿಡುಗಡೆಗೊಂಡಿದ್ದು, ವಾರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ನೀಡಬೇಕಿರುವ ನಮ್ಮ ಪಾಲಿನ (ಪಾಲಿಕೆ) ಬಿಲ್‌ ಪಾವತಿಸಲಾಗುವುದು

-ಹರ್ಷ ಶೆಟ್ಟಿ, ಆಯುಕ್ತರು, ಮಹಾನಗರ ಪಾಲಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು