ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ಬೆಲ್ಲದ ಅಂಗಡಿಗೆ ‘ಶತ’ ಸಂಭ್ರಮ

1920ರ ನವೆಂಬರ್ 11ರಂದು ಚಿಕ್ಕದಾಗಿ ಅಂಗಡೊ ಪ್ರಾರಂಭ; ಈಗ 4ನೇ ತಲೆಮಾರು
Last Updated 11 ನವೆಂಬರ್ 2019, 19:41 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣ ಹಲವು ವಿಶೇಷಗಳ ತವರೂರು. ಅಂತೆಯೇ ಇಲ್ಲಿನ ವಾರದ ಅವರ ಬೆಲ್ಲದ ವ್ಯಾಪಾರಕ್ಕೆ ಸುದೀರ್ಘ ಇತಿಹಾಸವೇ ಇದೆ. ಇವರು ಬೆಲ್ಲದ ವ್ಯಾಪಾರ ಆರಂಭಿಸಿ ನ.11ಕ್ಕೆ ಭರ್ತಿ ನೂರು ವರ್ಷ.

ವಾರದ ಮನೆತನದ ನಾಲ್ಕು ಪೀಳಿಗೆಯಿಂದ ಈ ಬೆಲ್ಲದ ವ್ಯಾಪಾರ ಸಾಂಗವಾಗಿ ಸಾಗಿಕೊಂಡು ಬಂದಿದೆ.
1920ರ ನವೆಂಬರ್ 11ರ ದೀಪಾವಳಿ ಪಾಡ್ಯದ ದಿನ ಮಲ್ಲಿಕಾರ್ಜುನ ಸಿದ್ಧಪ್ಪ ವಾರದ ಅವರು ಒಂದು ಚಿಕ್ಕದಾದ ಅಂಗಡಿಯಲ್ಲಿ ಬೆಲ್ಲದ ವ್ಯಾಪಾರ ಪ್ರಾರಂಭಿಸಿದರು. ಮುಂದೆ 1923ರಲ್ಲಿ ದೊಡ್ಡ ಅಂಗಡಿ ಕಟ್ಟಲಾಯಿತು. ರೇವಪ್ಪ ವಾರದ ಅವರು 1932 ರಿಂದ 1967ರ ಅವಧಿಯಲ್ಲಿ ಈ ಬೆಲ್ಲದ ಲಿಲಾವು ಅಂಗಡಿಯ ಹೊಣೆಗಾರಿಕೆ ಹೊತ್ತುಕೊಂಡರು.

ತದನಂತರ ಅವರ ಪುತ್ರ ಗುರುಸಂಗಪ್ಪ ವಾರದ ಅವರು 1967 ರಿಂದ 2018ರ ವರೆಗೆ ಬೆಲ್ಲದ ವ್ಯಾಪಾರವನ್ನು ಮುಂದುವರೆಸಿಕೊಂಡು ಬಂದರು. ಗುರುಸಂಗಪ್ಪ ವಾರದ 1950ರಲ್ಲಿ ಬಿ.ಎಸ್ಸಿ ಕೃಷಿ ಪದವಿ ಪಡೆದ ಮೊದಲಿಗರಾಗಿದ್ದರು. ಆದಾಗ್ಯೂ, ಇವರು ಬೆಲ್ಲದ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದರು.
ಅಲ್ಲಿಂದ ಈಗ ನಾಲ್ಕನೆಯ ತಲೆಮಾರಿನ ಅಶೋಕ ಗುರುಸಂಗಪ್ಪ ವಾರದ 2018 ರಿಂದ ಇಲ್ಲಿಯವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಇವರು ಬಿಎ, ಎಲ್‌ಎಲ್‌ಬಿ ಪದವೀಧರರು.

‘ನನ್ನ ಮಗ ಶರಣಬಸಪ್ಪ ಎಂ.ಟೆಕ್ ಪದವೀಧರ. ಆತ ಕೂಡ ನಮ್ಮ ಉದ್ಯೋಗದತ್ತ ಒಲವು ತೋರಿಸಿದ್ದಾನೆ’ ಎಂದು ಪ್ರತಿಕ್ರಿಯಿಸಿದರು.

‘ನಮ್ಮ ಬೆಲ್ಲದ ವ್ಯಾಪಾರ ಬಹುತೇಕ ಯಾವ ತಾಲ್ಲೂಕಿನಲ್ಲೂ ಕಾಣಸಿಗುವುದಿಲ್ಲ. ದಿನಂಪ್ರತಿ ನಮ್ಮ ಅಂಗಡಿ ಎದುರು ಬೆಲ್ಲದ ಲಿಲಾವು ನಡೆಯುತ್ತದೆ. ಈಗ ತಾಲ್ಲೂಕಿನಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳಾಗಿವೆ. ಬೆಲ್ಲದ ವ್ಯಾಪಾರ ಸ್ವಲ್ಪ ಕಡಿಮೆಯಾಗಿದೆ. 1991ರಿಂದ 2012ರ ವರೆಗೆ ದಿನಂಪ್ರತಿ 4 ಸಾವಿರ ಬೆಲ್ಲದ ಪೆಂಟಿಗಳು ಮಾರಾಟವಾಗುತ್ತಿದ್ದವು. ಈಗ ಅದು 400ಕ್ಕೆ ಇಳಿದಿದೆ’ ಎಂದು ಹೇಳಿದರು.

‘ಈಗಲೂ ಬೆಲ್ಲದ ವ್ಯಾಪಾರಕ್ಕಾಗಿ ಇಲ್ಲಿಗೆ ಗದಗ, ಗಜೇಂದ್ರಗಡ, ಹೊನ್ನಾವರ, ಕುಷ್ಟಗಿ, ಬಾಗಲಕೋಟೆ, ಚಾಮನಾಳ ಮುಂತಾದ ಕಡೆಯಿಂದ ವ್ಯಾಪಾರಿಗಳು ಬರುತ್ತಾರೆ. ಮಂಡ್ಯ, ಮಹಾಲಿಂಗಪುರ, ಅಫಜಲಪುರ, ಶಹಾಪುರ, ಜೇವರ್ಗಿ, ಇಂಡಿ ಕಡೆಯಿಂದ ಬೆಲ್ಲದ ಪೆಂಟಿಗಳು ಬರುತ್ತವೆ’ ಎಂದು ಖುಷಿಯಿಂದಲೇ ಹೇಳಿದರು.

‘ಬೆಲ್ಲದ ಲಿಲಾವು ವ್ಯಾಪಾರಕ್ಕೆ ಶತಮಾನೋತ್ಸವ ಸಂಭ್ರಮ. ಹೀಗಾಗಿ, ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT