ಬುಧವಾರ, ನವೆಂಬರ್ 25, 2020
19 °C
ಚಿನ್ನದ ಪದಕದ ಸಾಧನೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

ಕೂಲಿಕಾರ್ಮಿಕರ ಪುತ್ರಿಗೆ 11 ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದವರಲ್ಲಿ ಬಹುತೇಕರು ವಿದ್ಯಾರ್ಥಿನಿಯರು. ಅವರ ಪೈಕಿ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಅತ್ಯಧಿಕ 11 ಚಿನ್ನದ ಪದಕಗಳನ್ನು ಗಳಿಸಿದವರು ಜಯಶ್ರೀ ಶಿವಶರಣಪ್ಪ. ಅವರು ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಕೂಲಿಕಾರ್ಮಿಕರ ಪುತ್ರಿ.

ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಘಟಿಕೋತ್ಸವದಲ್ಲಿ ಜಯಶ್ರೀ ಸೇರಿದಂತೆ ವಿವಿಧ ವಿಭಾಗಗಳಲ್ಲಿ ‘ಚಿನ್ನ’ದ ಸಾಧನೆ ಮಾಡಿದವರಿಗೆ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅವರು ಪದಕ ಹಾಗೂ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು.

ಚಿಕ್ಕಂದಿನಿಂದ ಓದಿನಲ್ಲಿ ಚುರುಕಿರುವ ಜಯಶ್ರೀ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರ ಕೊರತೆ ನೀಗಿಕೊಂಡು ತಾವೇ ಸ್ವತಃ ಅಧ್ಯಯನ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಕೂಲಿಗೆಲಸಕ್ಕೆ ಹೋಗುವ ಶಿವಶರಣಪ್ಪ–ಶೋಭಾ ದಂಪತಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಐವರು ಮಕ್ಕಳ ಪೈಕಿ ಹಿರಿಯ ಪುತ್ರಿ ಎಂ.ಎ. ಬಿ.ಇಡಿ. ಪೂರೈಸಿದ್ದರೆ, ದ್ವಿತೀಯ ಪುತ್ರಿ ಜಯಶ್ರೀ ವಿಶಿಷ್ಟ ಸಾಧನೆ ತೋರಿದ್ದಾರೆ.

ಶ್ವೇತಾಗೆ 10 ಚಿನ್ನ: ಪ್ರಾಣಿವಿಜ್ಞಾನ ವಿಭಾಗದಲ್ಲಿ 10 ಚಿನ್ನದ ಪದಕಗಳನ್ನು ಗಳಿಸಿರುವ ಕಲಬುರ್ಗಿಯ ಶ್ವೇತಾ ದೊಡ್ಡಮನಿ ಅವರ ತಂದೆ ತೀರಿಕೊಂಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ತಂದೆ ಯಲ್ಲಪ್ಪ ದೊಡ್ಡಮನಿ ಅವರ ಅಗಲಿಕೆಯ ಚಿಂತೆ ಕಾಡದಂತೆ ನೋಡಿಕೊಂಡ ತಾಯಿ ವಿಜಯಲಕ್ಷ್ಮಿ ಅವರು ಶ್ವೇತಾ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.

ಮಗಳ ಪಕ್ಕ ನಿಂತು ಚಿನ್ನದ ಪದಕಗಳನ್ನು ದಿಟ್ಟಿಸಿ ನೋಡುತ್ತಿದ್ದ ವಿಜಯಲಕ್ಷ್ಮಿ ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿಯುತಿತ್ತು. ‘ಮಗಳಿಗೆ ಯಾವ ಕೊರತೆಯನ್ನೂ ಮಾಡಲಿಲ್ಲ. ಆಕೆ ಎಲ್ಲಿಯವರೆಗೆ ಓದುತ್ತಾಳೋ ಅಲ್ಲಿಯವರೆಗೆ ಓದಿಸುತ್ತೇವೆ. ಆಕೆ ಯುಪಿಎಸ್‌ಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ’ ಎಂದು ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸೂಕ್ಷ್ಮಜೀವಿಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕ ಗಳಿಸಿರುವ ವಿದ್ಯಾರ್ಥಿನಿ ಅರುಣಜ್ಯೋತಿ ಬಸವರಾಜ ಯಾದಗಿರಿ ಜಿಲ್ಲೆಯ ನಗನೂರ ಗ್ರಾಮದವರು. ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲೇ ಉಳಿದು ಓದು ಪೂರೈಸಿದ ಅವರು ಪಿಎಚ್‌.ಡಿ ಪಡೆದು ಪ್ರಾಧ್ಯಾಪಕರಾಗುವ ಹಂಬಲ ಹೊಂದಿದ್ದಾರೆ.

 

15 ವಿದ್ಯಾರ್ಥಿನಿಯರಿಗೆ ಚಿನ್ನದ 85 ಪದಕ

ಕಲಾ, ಸಮಾಜ ವಿಜ್ಞಾನ, ವಿಜ್ಞಾನ, ವಾಣಿಜ್ಯ, ಕಾನೂನು ಸೇರಿ ವಿವಿಧ ನಿಕಾಯಗಳ 16 ಪೈಕಿ 15 ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಒಟ್ಟು 84 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ಮಾತ್ರ ವಿದ್ಯಾರ್ಥಿ ಬಸವಲಿಂಗಪ್ಪ ದುರ್ಗಪ್ಪ 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.