ಸೋಮವಾರ, ಆಗಸ್ಟ್ 2, 2021
27 °C
ಪಾರಂಪರಿಕ ಕಟ್ಟಡಗಳ ಸಂರಕ್ಷಣೆ

ಕಲಬುರ್ಗಿ ವಿಭಾಗದ 6 ಜಿಲ್ಲೆಗಳಲ್ಲಿ 252 ಸ್ಮಾರಕಗಳ 3ಡಿ ಡಿಜಿಟಲೀಕರಣ ಶುರು

ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

‌ಕಲಬುರ್ಗಿ: ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆ ವ್ಯಾಪ್ತಿಯ ಕಲಬುರ್ಗಿ ಕಂದಾಯ ವಿಭಾಗದ ವ್ಯಾಪ್ತಿಯಲ್ಲಿಯ 252 ಪಾರಂಪರಿಕ ಕಟ್ಟಡಗಳ 3ಡಿ ಮತ್ತು ಲೇಸರ್‌ ಸ್ಕ್ಯಾನಿಂಗ್‌ ಆರಂಭವಾಗಿದೆ.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ)ಯು ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯಡಿ ರಾಜ್ಯ ಪುರಾತತ್ವ ಇಲಾಖೆ ಅಡಿಯಲ್ಲಿ ಬರುವ ರಾಜ್ಯದ 844 ಸಂರಕ್ಷಿತ ಸ್ಮಾರಕಗಳ ಲೇಸರ್‌ ಸ್ಕ್ಯಾನಿಂಗ್‌ ನಡೆಸುತ್ತಿದೆ. ಬೆಂಗಳೂರು ಮತ್ತು ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಈಗಾಗಲೇ ಈ ಕಾರ್ಯ ಮುಕ್ತಾಯವಾಗಿದೆ.

‘ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಯೋಜನೆಯು ಜುಲೈ 12ರಿಂದ ಬಳ್ಳಾರಿಯಲ್ಲಿ ಆರಂಭವಾಗಿದೆ. ಇಲ್ಲಿನ ಅಲಿಪುರ ಜೈಲು, ಸಂಗಣಕಲ್ಲು, ಕಲ್ಲೇಶ್ವರ ದೇವಸ್ಥಾನ, ವಿರೂಪಾಕ್ಷ ದೇಗುಲ ಸೇರಿದಂತೆ 8 ಪಾರಂಪರಿಕ ಕಟ್ಟಡಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಈಗ ಕೊಪ್ಪಳದಲ್ಲಿ ನಡೆಯುತ್ತಿದೆ. ಆ ನಂತರ ರಾಯಚೂರು, ಯಾದಗಿರಿ, ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಗಳಿಗೆ ತೆರಳುತ್ತೇವೆ. ಮುಂದಿನ 3–4 ತಿಂಗಳಲ್ಲಿ ಕಲಬುರ್ಗಿ ವಿಭಾಗದ ಎಲ್ಲ ಪಾರಂಪರಿಕ ಕಟ್ಟಡಗಳ ಕಾರ್ಯ ಮುಕ್ತಾಯವಾಗಲಿದೆ’ ಎಂದು ಕೆಎಸ್‌ಸಿಎಸ್‌ಟಿಯ ತಾಂತ್ರಿಕ ಸಹಾಯಕ ಜಿ. ರಾಜಶೇಖರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾರಂಪರಿಕ ಕಟ್ಟಡ, ಅರಮನೆ, ಸ್ಮಾರಕ, ದೇವಸ್ಥಾನ, ಮಸೀದಿ, ಕೋಟೆಗಳನ್ನು 3ಡಿ ತಂತ್ರಜ್ಞಾನ ಬಳಸಿ ಡಿಜಿಟಲೀಕರಣಗೊಳಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಹಾನಿ ಸಂಭವಿಸಿದರೆ ಅವುಗಳ ಮೂಲ ಸ್ವರೂಪವನ್ನು ಗುರುತಿಸಿ ಮರುನಿರ್ಮಾಣ ಹಾಗೂ ಸ್ಮಾರಕಗಳ ಮಾಪನದ ವಿಶ್ಲೇಷಣೆಗೂ ನೆರವಾಗಲಿದೆ’ ಎಂದರು.

ಕಲಬುರ್ಗಿಯ ಖಾಜಾ ಬಂದಾ ನವಾಜ್ ದರ್ಗಾ, ಇಸ್ಮಾಯಿಲ್ ಮೋಖ್‌ನ ಮಸೀದಿ ಮತ್ತು ಗೋರಿ, ಅಲ್ಲಾವುದೀನ್ ಹಸನ್ ಗಂಗೂ ಸಮಾಧಿ, ಚೋರ್ ಗುಂಬಜ್, ಬಹಮನಿ ಕಾಲದ ಸಮಾಧಿಗಳು ಸೇರಿ ಒಟ್ಟು 38 ಸ್ಮಾರಕಗಳು ಡಿಜಿಟಲೀಕರಣಗೊಳ್ಳಲಿವೆ. ಬೀದರ್‌ನ 11, ಕೊಪ್ಪಳದ 31, ರಾಯಚೂರಿನ 62 ಹಾಗೂ ಯಾದಗಿರಿಯ ಅತ್ಯಧಿಕ 102 ಪಾರಂಪರಿಕ ಸ್ಮಾರಕಗಳು ಡಿಜಿಟಲ್ ಹೆರಿಟೇಜ್ ಯೋಜನೆಗೆ ಒಳಪಡಲಿವೆ.

ಜಿಪಿಎಸ್‌ ತಂತ್ರಜ್ಞಾನ ಬಳಸಿ ಪಾರಂಪರಿಕ ಕಟ್ಟಡಗಳ ಭೌಗೋಳಿಕ ಸ್ಥಳ ಗುರುತು, 3ಡಿ ಮಾಡಲಿಂಗ್ ತಯಾರಿ, ಜಿಯೊ ಸ್ಪೇಷಿಯಲ್ ಟೆಕ್ನಾಲಜೀಸ್ ಮೂಲಕ ಫೋಟೋಗ್ರಾಫ್ ಡೇಟಾ ಬೇಸ್ ಸೃಷ್ಟಿಯ ಉದ್ದೇಶ ಇದರಲ್ಲಿದೆ. 3ಡಿ ಪಾಯಿಂಟ್ ಕ್ಲೌಡ್ಸ್‌ ಡೇಟಾ, 3ಡಿ ಮೆಶ್ ಮಾಡೆಲ್ಸ್ ಮತ್ತು 2ಡಿ ಮಾಡೆಲ್ಸ್ ಕ್ಯಾಡ್ ಡ್ರಾಯಿಂಗ್, ಎಲಿವೇಷನ್ ಮುಖೇನ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ನವೀಕರಣ ಮಾಡಲಾಗುವುದು ಎಂದು ರಾಜಶೇಖರ್ ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು