ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ನಗರ ಗಲಭೆ; 40 ಜನರ ಬಂಧನ

ಮಾಂಗರವಾಡಿಯ ಓಣಿಗಳನ್ನು ಸುತ್ತಿದ ಪೊಲೀಸರ ತಂಡ
Last Updated 31 ಮಾರ್ಚ್ 2021, 16:01 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಬಿ.ಶಾಮಸುಂದರ ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ 40 ಜನರನ್ನು ಬಂಧಿಸಿದ್ದು, ಯುವಕನ ಕೊಲೆಗೆ ಕಾರಣರಾದವರ ‍ಪತ್ತೆಗೆ ಜಾಲ ಬೀಸಿದ್ದಾರೆ.

ಬೆಳಿಗ್ಗೆಯಿಂದ ಸಂಜೆಯವರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಂಗರವಾಡಿ ಗಲ್ಲಿಯ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ಎಲ್ಲರನ್ನೂ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ ಪೊಲೀಸರು, ವಿಡಿಯೊ ಫೂಟೇಜ್‌ಗಳನ್ನು ಆಧರಿಸಿ 40 ಜನರನ್ನು ಬಂಧಿಸಿದರು. ಉಳಿದವರನ್ನು ಬಿಟ್ಟು ಕಳುಹಿಸಿದರು.

ಹೋಳಿ ಹಬ್ಬದಂದು ಸೇಡಂ ರಸ್ತೆಯ ಜಿಮ್ಸ್ ಆಸ್ಪತ್ರೆ ಎದುರು ವೀರಾತ್ ಉಪಾಧ್ಯೆ ಎಂಬಾತನ ಮೇಲೆ ಗುಂಪೊಂದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿತ್ತು. ಇದರಿಂದ ಕೆರಳಿದ 200ಕ್ಕೂ ಅಧಿಕ ಜನರು ಬಂದು ಸುಂದರ ನಗರದ ಮನೆಗಳಿಗೆ ನುಗ್ಗಿ ಹಲವರ ಮೇಲೆ ಹಲ್ಲೆ ಮಾಡಿ, ನೂರಾರು ವಾಹನಗಳನ್ನು ಜಖಂ ಮಾಡಿದ್ದರು. ಇದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿ ಮಂಗಳವಾರ ಸುಂದರ ನಗರದವರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಬಂಧನಕ್ಕೆ ಆಗ್ರಹಿಸಿದ್ದರು.

ಪರಿಸ್ಥಿತಿ ಸೂಕ್ಷ್ಮವಾಗಿದ್ದರಿಂದ ಎರಡು ಕಡೆಗಳಲ್ಲಿ ಡಿಸಿಪಿ (ಅಪರಾಧ) ಶ್ರೀಕಾಂತ ಕಟ್ಟಿಮನಿ ಮತ್ತು ತನಿಖಾ ತಂಡದ ಮುಖ್ಯಸ್ಥ, ಕಲಬುರ್ಗಿ ‘ಬಿ’ ಉಪವಿಭಾಗದ ಎಸಿಪಿ ಗಿರೀಶ ಎಸ್.ಬಿ. ನೇತೃತ್ವದಲ್ಲಿ ಬಂದೋಬಸ್ತ್ ಮುಂದುವರಿಸಲಾಗಿದೆ.

ಮಾಂಗರವಾಡಿಗೆ ಪೊಲೀಸರು ತೆರಳಿದ ಸಂದರ್ಭದಲ್ಲಿ ಮಹಿಳೆಯರು ಪ್ರತಿರೋಧ ಒಡ್ಡಿದರು. ‘ಆ ಘಟನೆಗೂ ಇಲ್ಲಿನ ಯುವಕರಿಗೂ ಸಂಬಂಧವಿಲ್ಲ. ಗಲಾಟೆ ಪ್ರಕರಣವನ್ನು ನಮ್ಮ ತಲೆಗೆ ಕಟ್ಟುವ ಯತ್ನ ನಡೆಯುತ್ತಿದೆ’ ಎಂದರು.

ಇದನ್ನು ಲೆಕ್ಕಿಸದ ಪೊಲೀಸ್ ಅಧಿಕಾರಿಗಳು, ‘ಯಾರನ್ನೂ ಬಂಧಿಸುತ್ತಿಲ್ಲ, ಬರೀ ಮಾಹಿತಿ ಪಡೆದು ಕಳುಹಿಸಿಕೊಡುತ್ತೇವೆ. ಘಟನೆಯಲ್ಲಿ ಶಾಮೀಲಾದವರು ಯಾರು ಎಂಬುದು ಗೊತ್ತಿದ್ದರೆ ನೀವೆ ಹೇಳಿ, ಅವರನ್ನು ಹಿಡಿದುಕೊಡಿ’ ಎಂದು ಹೇಳಿದರು.

ರೌಡಿಶೀಟರ್‌ಗಳ ಮನೆ ಶೋಧ: ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್‌ಗಳ ಮನೆಗಳ ಮೇಲೆ ಬುಧವಾರ ನಸುಕಿನ ಜಾವ ಆಯಾ ಠಾಣೆಗಳ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ಶೋಧ ನಡೆಸಿದರು. ನಸುಕಿನ ಜಾವ 4ರಿಂದ ಬೆಳಿಗ್ಗೆ 6.30ರವರೆಗೂ ಹಲವು ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT