ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ರಣ ಬಿಸಿಲಿನ ಪ್ರತಾಪ

ಮಿನಿ ಮಲೆನಾಡಲ್ಲಿ ಜನ ಜೀವನ ಅಸ್ತವ್ಯಸ್ತ; ಮುಂಜಾಗ್ರತೆಗೆ ಸಲಹೆ
Published 6 ಏಪ್ರಿಲ್ 2024, 6:45 IST
Last Updated 6 ಏಪ್ರಿಲ್ 2024, 6:45 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ 40 ಡಿಗ್ರಿ ಸೆಲ್ಸಿಯಸ್ ಗಡಿದಾಟಿ ಉಷ್ಣಾಂಶ ದಾಖಲಾಗಿದ್ದು, ಕಳೆದ ಮೂರು ದಿನಗಳಿಂದ ರಣಬಿಸಿಲು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಪ್ರಸಕ್ತ ವರ್ಷ ಎದುರಾಗಿರುವ ಬರಗಾಲದಿಂದ ಎದುರಾಗಿರುವ ಒಣ ಹವೆಯಿಂದಾಗಿ ತಾಪಮಾನ ಹೆಚ್ಚುತ್ತಿದ್ದು, ಅಂತರ್ಜಲ ಮಟ್ಟ ಕುಸಿಯಲು ಆರಂಭಿಸಿದೆ. ಇದರಿಂದ ಜನರು ಬಿಸಿಲಿನ ಬೇಗೆಗೆ ಬಸವಳಿಯುವಂತಾಗಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಬಿಸಿಲಿನ ತಾಪ ಏರತೊಡಗಿದ್ದರಿಂದ ಜನರು ಮನೆಗಳಿಂದ ಹೊರಗೆ ಹೋಗಲು ಹಿಂಜರಿಯುವಂತಾಗಿದೆ.

ಚಿಂಚೋಳಿಯಲ್ಲಿ ಏ.5ರಂದು ಗರಿಷ್ಠ 43 ಡಿಗ್ರಿ ತಾಪಮಾನ ದಾಖಲಾಗಿದ್ದರೆ, ಗುರುವಾರ ತಾಲ್ಲೂಕಿನ ಐನಾಪುರ ಹೋಬಳಿ ವ್ಯಾಪ್ತಿಯ ಚಿಮ್ಮನಚೋಡ, ಹಸರಗುಂಡಗಿ, ಸಾಲೇಬೀರನಹಳ್ಳಿ, ಚಂದನಕೇರಾ ಗಡಿಲಿಂಗದಳ್ಳಿ ಮತ್ತು ಸಲಗರ ಬಸಂತಪುರ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಒಂದೆಡೆ ಬಿಸಿಲಿನ ತಾಪ ವಿಪರೀತವಾಗುತ್ತಿದ್ದರೆ ಅದರ ಜತೆಗೆ ಮದುವೆ, ಮುಂಜಿ, ಗೃಹ ಪ್ರವೇಶ, ಜಾತ್ರೆಗಳಂತಹ ಧಾರ್ಮಿಕ ಉತ್ಸವಗಳು ಹೆಚ್ಚಾಗಿ ನಡೆಯುತ್ತಿವೆ. ಜನರು ಕಾರ್ಯಕ್ರಮಗಳಿಗೆ ಹೋಗಲು ಹಿಂಜರಿಯುವಂತಾಗಿದೆ. ಅಡವಿಗೆ ಮೇಯಲು ಹೋದ ಜಾನುವಾರುಗಳು ಮರಗಳ ಕೆಳಗೆ ನಿಂತು ವಾಪಸ್ಸಾಗುತ್ತಿವೆ.

ಮನೆಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲದಿದ್ದರೆ 10 ನಿಮಿಷವೂ ಮನೆಯ ಒಳಗಡೆ ಇರಲು ಸಾಧ್ಯವಾಗದಂತೆ ಇಳೆ ಕಾದು ಕೆಂಡ ಕಾರುತ್ತಿರುವುದರಿಂದ ಬಿಸಿಗಾಳಿ ಜನರನ್ನು ದುಸ್ತರಗೊಳಿಸಿದೆ.

ಮುಂಜಾಗ್ರತೆಗೆ ಸಲಹೆ: ತಾಲ್ಲೂಕಿನಲ್ಲಿ ಮುಂದಿನ 3 ದಿನಗಳ ಕಾಲ ಬಿಸಿಲಿನ ತಾಪ ಹೆಚ್ಚಾಗಿ ಬಿಸಿಗಾಳಿ ಬಾಧಿಸಲಿದೆ. ಹೀಗಾಗಿ ಸಾರ್ವಜನಿಕರು ಬಿಸಿಲಿನಲ್ಲಿ ಅನಗತ್ಯ ಓಡಾಡಬಾರದು. ಅತಿ ಜರೂರು ಕೆಲಸ ಇದ್ದರೆ ಮಾತ್ರ ಹೊರಗಡೆ ಹೋಗಬೇಕು. ಸಾಧ್ಯವಾದಷ್ಟು ಬೆಳಿಗ್ಗೆ 11 ಗಂಟೆಯೊಳಗೆ ಹೊರಗಿನ ಕೆಲಸ ಮುಗಿಸಿಕೊಳ್ಳುವುದು ಉತ್ತಮ ಎಂದು ವಿಕೋಪ ನಿರ್ವಹಣಾ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಹಾಗೂ ತಹಶೀಲ್ದಾರ್‌ ಮಲ್ಲಿಕಾರ್ಜುನ ಅರಕೇರಿ ತಿಳಿಸಿದ್ದಾರೆ.

ಚಿಂಚೋಳಿಯ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಬಳಿಯ ಮುಲ್ಲಾಮಾರಿ ನದಿಯಲ್ಲಿ ಬೀಸಿಲಿನ ಬೇಗೆ ತಣಿಸಿಕೊಳ್ಳಲು ಮಕ್ಕಳು ಈಜಾಡುತ್ತಿರುವುದು
ಚಿಂಚೋಳಿಯ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಬಳಿಯ ಮುಲ್ಲಾಮಾರಿ ನದಿಯಲ್ಲಿ ಬೀಸಿಲಿನ ಬೇಗೆ ತಣಿಸಿಕೊಳ್ಳಲು ಮಕ್ಕಳು ಈಜಾಡುತ್ತಿರುವುದು

ಬಿಳಿ ಬಣ್ಣದ ತೆಳು ಮತ್ತು ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು. ವೃದ್ಧರು, ಮಕ್ಕಳು ಹೆಚ್ಚಾಗಿ ನೀರು ಕುಡಿಯುತ್ತಿರಬೇಕು. ಮನೆಯೊಳಗಿನ ತಾಪಮಾನ ಕಡಿಮೆ ಮಾಡಲು ಕಿಟಕಿ, ಬಾಗಿಲು ತೆರೆಯುವುದು, ಫ್ಯಾನ್, ಕೂಲರ್ ಬಳಕೆ ಮಾಡಬೇಕು. ಬಿಸಿಗಾಳಿಯಿಂದ ಅಸ್ವಸ್ಥರಾದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾಧರ ಮಕಾಸಿ
ಗಂಗಾಧರ ಮಕಾಸಿ
ನರಶಿಮ್ಲು ಕುಂಬಾರ
ನರಶಿಮ್ಲು ಕುಂಬಾರ
ಡಾ. ಸಂತೋಷ ಪಾಟೀಲ
ಡಾ. ಸಂತೋಷ ಪಾಟೀಲ
ಬಿಸಿಲಿನಿಂದ ಜನರು ಮನೆಗಳಿಂದ ಹೊರ ಬರಲು ಹಿಂಜರಿಯುವಂತಾಗಿದೆ. ಏಪ್ರಿಲ್ ಮೊದಲ ವಾರದ ಸ್ಥಿತಿ ಹೀಗಾದರೆ ಮುಂದಿನ ದಿನಗಳು ಊಹೆಗೆ ನಿಲುಕದಂತಾಗಿವೆ
ಗಂಗಾಧರ ಮಕಾಸಿ ಚಿಂಚೋಳಿ
ಕುಂಚಾವರಂ ಸುತ್ತಲೂ ಬಿಸಿಲಿನ ತಾಪ ಹೆಚ್ಚಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷ ಬಿಸಿಲು ಅಬ್ಬರಿಸುತ್ತಿದೆ. ಬೇಗೆ ಹೆಚ್ಚಾದ್ದರಿಂದ ಜನರು ದೂರದ ಊರುಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ
ನರಶಿಮ್ಲು ಕುಂಬಾರ ಕುಂಚಾವರಂ
ಸನ್‌ ಸ್ಟ್ರೋಕ್‌ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ. ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ತಣ್ಣನೆ ನೀರು ಸೇವಿಸಿ ಜ್ವರ ಗಂಟಲು ನೋವಿನ ಪ್ರಕರಣ ವರದಿಯಾಗಿವೆ
ಡಾ.ಸಂತೋಷ ಪಾಟೀಲ ಮುಖ್ಯ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT