ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಶಾಸಕರಿಂದ ಶೇ 40 ಕಮಿಷನ್‌- ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ

Last Updated 13 ಏಪ್ರಿಲ್ 2022, 9:56 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜ್ಯದಲ್ಲಿ 60 ಶಾಸಕರು ಶೇ 40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಅದರಲ್ಲಿ ಕಲಬುರಗಿ ಜಿಲ್ಲೆಯ ಮೂವರು ಶಾಸಕರು ಇದ್ದಾರೆ’ ಎಂದು ಕಲಬುರಗಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೇ 80ರಷ್ಟು ಶಾಸಕರು ‍‍ಪರ್ಸೆಂಟೇಜ್ ಪಡೆಯುತ್ತಾರೆ. ಆರಂಭದಲ್ಲಿ ಶೇ 10ರಷ್ಟು ಪರ್ಸೆಂಟೇಜ್‌ ನೀಡಿದರೆ ಮಾತ್ರ ಕಾಮಗಾರಿಗೆ ಚಾಲನೆ ನೀಡುತ್ತಾರೆ. ಆ ನಂತರ ವಿವಿಧ ಹಂತಗಳಲ್ಲಿ ಶೇ 30ರಿಂದ 40ರಷ್ಟು ಪರ್ಸೆಂಟೇಜ್ ನೀಡಬೇಕು. ಇದರಲ್ಲಿ ಎಲ್ಲ ಪಕ್ಷಗಳ ಶಾಸಕರೂ ಸೇರಿದ್ದಾರೆ’ ಎಂದರು.

‘ರಾಜ್ಯದಲ್ಲಿ ಮಾರ್ಚ್‌ವರೆಗೆ ₹22 ಸಾವಿರ ಕೋಟಿ ಬಿಲ್‌ ಬಾಕಿ ಇದೆ. ಕಲಬುರಗಿ ವಿಭಾಗದಲ್ಲಿ ₹700 ಕೋಟಿ ಬಿಲ್ ಬಾಕಿ ಇದೆ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಹೆಚ್ಚು ಬಿಲ್‌ಗಳು ಬಾಕಿ ಉಳಿದುಕೊಂಡಿವೆ’ ಎಂದು ಹೇಳಿದರು.

‘ಎಲ್ಲ ವಸ್ತಗಳ ಬೆಲೆ ಏರಿಕೆ ಆಗಿದ್ದರೂ ಗುಣಮಟ್ಟದ ಕಾಮಗಾರಿ ನಡೆಸುತ್ತಿದ್ದೇವೆ. ಆದರೂ ನಮಗೆ ಸಮರ್ಪಕವಾಗಿ ಬಿಲ್ ಪಾವತಿ ಮಾಡುತ್ತಿಲ್ಲ. ಗುತ್ತಿಗೆದಾರರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ’ ಎಂದು ದೂರಿದರು.

‘ಕಮಿಷನ್ ಪಡೆಯುತ್ತಿರುವ ಬಗ್ಗೆ ತನಿಖೆ ನಡೆಸಿ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಆ ಬಗ್ಗೆ ಭರವಸೆ ನೀಡಿದರೆ ಮಾತ್ರ ನಾವು ಮಾತುಕತೆಗೆ ಬರಲು ಸಿದ್ಧರಿದ್ದೇವೆ’ ಎಂದರು.

‘ಪರ್ಸೆಂಟೇಜ್ ಬಗ್ಗೆ ಸಂತೋಷ ಪಾಟೀಲ ಅವರು ಪ್ರಧಾನಮಂತ್ರಿ, ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರು, ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರ ತನಿಖೆಗೆ ನಡೆಸುವಂತೆ ಸೂಚಿಸಿದ್ದು ಬಿಟ್ಟರೆ ರಾಜ್ಯ ಸರ್ಕಾರ ಯಾವುದೇ ರೀತಿಯಿಂದ ಸ್ಪಂದಿಸಲಿಲ್ಲ’ ಎಂದು ದೂರಿದರು.

‘ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಂತೋಷ ಪಾಟೀಲ ಅವರ ಆರೋಪದ ಬಗ್ಗೆ ತನಿಖೆಗೆ ಒತ್ತಾಯಿಸದೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ತನಿಖೆ ನಡೆಸಿದ್ದರೆ ಸತ್ಯಾಂಶ ಹೊರಗೆ ಬರುತ್ತಿತ್ತು’ ಎಂದರು.

‘ಕಮಿಷನ್ ದಂಧೆ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಹೋರಾಟ ನಡೆಸಿದ್ದೇವೆ. ಆದರೆ, ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿಲ್ಲ. ಕಮಿಷನ್‌ ಪಡೆಯುತ್ತಿರುವವರ ಮಾಹಿತಿ ಇದೆ. ಆ ಬಗ್ಗೆ ಈಗಲಾರೂ ತನಿಖೆ ನಡೆಸಬೇಕು’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಟೆಂಡರ್‌ ಕರೆದು ಆರು ತಿಂಗಳಾದರೂ ಕಾಮಗಾರಿ ಆರಂಭವಾಗುವುದಿಲ್ಲ. ಹೀಗಿದ್ದಾಗ ಸರ್ಕಾರ ಎಷ್ಟು ಅನುದಾನ ನೀಡಿದರೂ ಈ ಭಾಗದ ಅಭಿವೃದ್ಧಿ ಸಾಧ್ಯವಿಲ್ಲ’ಎಂದರು.

‘ಆಳಂದದಲ್ಲಿ ಸುಭಾಷ ಗುತ್ತೇದಾರ ಅವರ ಪುತ್ರನಿಂದ ₹3.50 ಕೋಟಿ ಮೊತ್ತದ ಕಾಮಗಾರಿಯ ಟೆಂಡರ್ ಆಗಿತ್ತು. ಕಾಮಗಾರಿ ಮುಗಿದು ನಿರ್ವಹಣೆ ಅವಧಿ ಮುಗಿದ ನಂತರವೂ ಬಿಲ್ ಪಾವತಿಸಿಲ್ಲ. ನಿರ್ವಹಣೆಗೆ ಸಂಬಂಧಿಸಿದ ₹5 ಲಕ್ಷ ಬಿಲ್‌ ಬಾಕಿ ಇದೆ. ಈಗ ಗುಣಮಟ್ಟದ ಕಾಮಗಾರಿ ನಡೆಸಿಲ್ಲ ಎಂದು ಬಿಲ್ ತಡೆ ಹಿಡಿದಿದ್ದಾರೆ’ ಎಂದು ಆರೋಪಿಸಿದರು.

ಸಂತೋಷ ಪಾಟೀಲ ಅವರ ಸಾವಿನ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಈ ತಿಂಗಳಲ್ಲಿ ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸಂತೋಷ ಪಾಟೀಲ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಲಬುರಗಿ ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌.ಕೆ.ಸಂಜಯ, ಉಪಾಧ್ಯಕ್ಷ ಮೊಹಸಿನ್ ಎಂ.ಪಟೇಲ್, ಎಂ.ಕೆ.ಪಾಟೀಲ, ಬಸವರಾಜ ಸಜ್ಜನ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT