ಬುಧವಾರ, ಡಿಸೆಂಬರ್ 8, 2021
28 °C
ಮತ್ತಿಮೂಡ- ಇಂಗನಕಲ್, ಇವಣಿ- ಬೆಳಗುಂಪಾ ಸಂಪರ್ಕ ಕಡಿತ

ಗುಂಡಗುರ್ತಿ: 75 ಮನೆಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ನದಿ, ಹಳ್ಳೊಕೊಳ್ಳಗಳು ತುಂಬಿ ಹರಿದಿವೆ. ಅನೇಕ ಕಿರು ಸೇತುವೆಗಳು ಪ್ರವಾಹದಲ್ಲಿ ಮುಳುಗಡೆಯಾಗಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮತ್ತಿಮೂಡ ಮತ್ತು ಇಂಗನಕಲ್ ಗ್ರಾಮಗಳ ನಡುವೆ ಇರುವ ಸೇತುವೆ ಪ್ರವಾಹದಲ್ಲಿ ಮುಳುಗಡೆಯಾಗಿ ಎರಡು ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಇವಣಿ ಗ್ರಾಮದ ಪಕ್ಕದಲ್ಲಿ ಹರಿಯುವ ಹಳ್ಳದಲ್ಲಿ ಪ್ರವಾಹ ಉಕ್ಕಿ ಬಂದು ಸೇತುವೆ ಮುಳುಗಡೆಯಾಗಿ ಬೆಳಗುಂಪಾ ಮಾರ್ಗದಲ್ಲಿ ಸಂಚಾರ ಮಧ್ಯಾಹ್ನದವರೆಗೆ ಕಡಿತಗೊಂಡಿದೆ.

ಹದನೂರು ಗ್ರಾಮದ ಹತ್ತಿರ ಕಿರು ಸೇತುವೆ ಪ್ರವಾಹದಲ್ಲಿ ಮುಳುಗಡೆಯಾಗಿ ಇತರ ಗ್ರಾಮಗಳೊಂದಿಗಿನ ಸಂಪರ್ಕ ಬಂದ್ ಆಗಿದೆ. ಭಾಗೋಡಿ ಗ್ರಾಮದಿಂದ ಚಿತ್ತಾಪುರಕ್ಕೆ ಹೋಗುವ ಮಾರ್ಗದ ಸಣ್ಣ ಹಳ್ಳಕ್ಕೆ ಪ್ರವಾಹ ಬಂದು ರಸ್ತೆ ಮುಳುಗಡೆಯಾಗಿ ಮಧ್ಯಾಹ್ನದವರೆಗೂ ಸಂಚಾರ ಸಂಕಷ್ಟ ಉಂಟಾಗಿತ್ತು.

ಗುಂಡಗುರ್ತಿ ಗ್ರಾಮದ ಪಕ್ಕದಲ್ಲಿ ಹರಿಯುವ ದೊಡ್ಡ ಹಳ್ಳಕ್ಕೆ ಪ್ರವಾಹ ಉಕ್ಕೇರಿ ಬಂದು ಹಾಗೂ ದಕ್ಷಿಣ ಭಾಗದಿಂದ ಅಡವಿಯಲ್ಲಿನ ನೀರು ಗ್ರಾಮಕ್ಕೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡು ರಸ್ತೆಯಲ್ಲಿ ಸೊಂಟ ಮಟ್ಟದ ನೀರು ಹರಿದು ಜನರ ಭಯಭೀತರಾದ ಘಟನೆ ಜರುಗಿದೆ.

ಗ್ರಾಮದ ಅಗಸಿಯವರೆಗೆ ನೀರು ಬಂದು 60 ಮನೆಗಳಿಗೆ ನುಗ್ಗಿದೆ. ಗುಂಡಗುರ್ತಿ ತಾಂಡಾದೊಳಗೆ ಹಳ್ಳದ ಪ್ರವಾಹ ನುಗ್ಗಿ 15 ಮನೆಗಳು ಜಲಾವೃತವಾಗಿ ಜನರು ತೀವ್ರ ಆತಂಕಪಟ್ಟರು. ಮಳೆ, ಪ್ರವಾಹನೀರು ಮನೆಗೆ ನುಗ್ಗಿದ್ದರಿಂದ ಮನೆಯಲ್ಲಿದ್ದ ಜೀವನಾವಶ್ಯಕ ವಸ್ತುಗಳು, ಆಹಾರ ಧಾನ್ಯ ಹಾಳಾಗಿದೆ. ಜನರು ಮನೆಯ ಮಾಳಿಗೆ ಹತ್ತಿ ಕುಳಿತ ದೃಶ್ಯಗಳು ಕಂಡು ಬಂದವು.

ಜನರು ಪ್ರಾಣದ ಹಂಗು ತೊರೆದು ಮನೆಯೊಳಗಿನ ಬಟ್ಟೆ, ಆಹಾರ ಧಾನ್ಯ, ಸಾಮಾನು ಸಂರಕ್ಷಣೆಗೆ ಹರಸಾಹಸ ಪಟ್ಟರು. ಗುಂಡಗುರ್ತಿ ತಾಂಡಾ ಸಂಪರ್ಕ ಬಂದ್ ಆಗಿದೆ ಎಂದು ಗ್ರಾಮದ ಸುನಿಲ್ ದೊಡ್ಡಮನಿ ಅವರು ಪ್ರಜಾವಾಣಿಗೆ ಹೇಳಿದರು.

ಕರದಾಳ- ಬಮ್ಮನಳ್ಳಿ ಮಾರ್ಗದ ಸೇತುವೆ ಮುಳುಗಡೆಯಾಗಿ ಮಂಗಳವಾರ ಬೆಳಿಗ್ಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಚಿತ್ತಾಪುರ ಪಟ್ಟಣದ ನಾಗಾವಿ ಹಳ್ಳದಲ್ಲಿ ನೀರು ಅಧಿಕಗೊಂಡು ಬಸವನಗರ ಮತ್ತು ಬಹಾರಪೇಠದ 60 ಮನೆಗಳಿಗೆ ಬೆಳಗಿನ ಜಾವ ಪ್ರವಾಹ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು.

ಎಸಿ ಮತ್ತು ತಹಶೀಲ್ದಾರ್ ಭೇಟಿ: ಸೇಡಂ ಉಪ ವಿಭಾಗಾಧಿಕಾರಿ ರಮೇಶ ಕೋಲಾರ ಹಾಗೂ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ, ಮನೆಗಳಿಗೆ ನೀರು ನುಗ್ಗಿರುವ ಕುರಿತು ಮಾಹಿತಿ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.