ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ರಾಷ್ಟ್ರಮಟ್ಟದ ಜಾಗೃತಿ ಸಮಾವೇಶ 21ಕ್ಕೆ

ಪೌರತ್ವ (ತಿದ್ದುಪಡಿ) ಕಾಯ್ದೆ, ಎನ್‌ಆರ್‌ಸಿಗೆ ಖಂಡನೆ; ಶರದ್ ಪವಾರ್‌, ಯೆಚೂರಿ, ಸ್ಟಾಲಿನ್‌, ಡಿ.ರಾಜಾ ಭಾಗಿ
Last Updated 9 ಜನವರಿ 2020, 11:05 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ಇದೇ 21ರಂದು ಕಲಬುರ್ಗಿಯಲ್ಲಿ ರಾಷ್ಟ್ರಮಟ್ಟದ ಬೃಹತ್ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ಪೀಪಲ್ಸ್ ಫೋರಂ ಸಂಚಾಲಕ ಮಾರುತಿ ಮಾನ್ಪಡೆ ಪ್ರಕಟಿಸಿದರು.

‘ನಗರದ ಹಾಗರಗಾ ಕ್ರಾಸ್‌ ಹತ್ತಿರದ ರಿಂಗ್ ರಸ್ತೆಯ ಬಂಗಾಲಿ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಇದರಲ್ಲಿ ರಾಷ್ಟ್ರೀಯ ನಾಯಕರಾದ ಎನ್‌ಸಿಪಿಯ ಶರದ್ ಪವಾರ್, ಸಿಪಿಐ (ಎಂ) ಪಕ್ಷದ ಸೀತಾರಾಂ ಯೆಚೂರಿ, ಸಿಪಿಐನ ಡಿ.ರಾಜಾ, ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿದೆ. ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆ ಎರಡು ಲಕ್ಷ ಜನರು ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದು ಗುರುವಾರ ‍ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‌‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರು ಈ ಕಾಯ್ದೆಗೆ ಸಂಬಂಧಿಸಿದಂತೆ ದಿನಕ್ಕೊಂದು ಸುಳ್ಳನ್ನು ಹೇಳುತ್ತಿದ್ದಾರೆ. ಅದನ್ನು ಬಯಲು ಮಾಡಬೇಕಿರುವ ಹಾಗೂ ಪ್ರತಿರೋಧ ಒಡ್ಡಬೇಕಾದ ತುರ್ತು ನಮ್ಮೆಲ್ಲರದಾಗಿದೆ. ಹೀಗಾಗಿ, ನಿರಂತರ ಚಳವಳಿ ನಡೆಯಲಿದೆ’ ಎಂದರು.

ಫೋರಂನ ಸಂಚಾಲನ ಸಮಿತಿ ಸದಸ್ಯ ಮೊಹಮ್ಮದ್‌ ಅಸಗರ ಚುಲಬುಲ್‌ ಹಾಗೂ ನಾಸಿರ್‌ ಮಾತನಾಡಿ, ‘ಸಮಾವೇಶಕ್ಕೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲದೇ ವಿಜಯಪುರ ಜಿಲ್ಲೆಯಿಂದ ಸಹಸ್ರಾರು ಜನರು ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಮೊಂಡುತನದ ವರ್ತನೆಯನ್ನು ವಿರೋಧಿಸುವ ಹಾಗೂ ಜನವಿರೋಧಿಯಾದ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರಿಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ’ ಎಂದು ತಿಳಿಸಿದರು.

ಮಾಜಿ ಮೇಯರ್ ಸಯ್ಯದ್ ಅಹ್ಮದ್‌, ಫೋರಂ ಖಜಾಂಚಿ ಆರಿಫ್‌ ಅಲಿ ಮನಿಯಾರ, ಮೌಲಾನಾ ಆಜಾದ್‌ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT