ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಧಾನ್ಯಗಳ ಭೂಮಿ ಕಬಳಿಸಿದ ‘ಹತ್ತಿ’!

ಜೋಳ, ಕಡಲೆಗೆ ‘ಹತ್ತಿ’ದ ಆತಂಕ: 5 ವರ್ಷಗಳಲ್ಲಿ ಶೇ 28.38ರಷ್ಟು ಕುಸಿದ ಆಹಾರ ಧಾನ್ಯಗಳ ಪ್ರದೇಶ
Published 15 ಆಗಸ್ಟ್ 2024, 7:50 IST
Last Updated 15 ಆಗಸ್ಟ್ 2024, 7:50 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕಪ್ಪು ನೆಲದಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಕಡಲೆ, ಜೋಳ, ತೊಗರಿಯಂತಹ ಧಾನ್ಯಗಳನ್ನು ಬದಗಿರಿಸಿದ ರೈತರು, ಕಡಿಮೆ ಖರ್ಚಿನ ‘ಹತ್ತಿ’ಯ ಮೋಹಕ್ಕೆ ಬಿದ್ದಿದ್ದಾರೆ. ಭೀಮಾ ನದಿ ಪಾತ್ರದ ಹೊಲಗಳು ಕಬ್ಬಿನ ಗದ್ದೆಗಳಾಗಿ ಮಾರ್ಪಡುತ್ತಿವೆ.

ತೊಗರಿ ಕಣಜದ ಕಲಬುರಗಿಯ ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಆಹಾರ ಬೆಳೆಗಳ ಬಿತ್ತನೆ ಪ್ರದೇಶ ಕಡಿಮೆಯಾಗಿ ಆಹಾರ ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿದೆ. ಮಳೆಯ ಜೂಜಾಟ, ಇಳುವರಿ ಪ್ರಮಾಣ ಇಳಿಕೆ, ಬೆಲೆಗಳ ಕುಸಿತ, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಸಹಕಾರದಂತಹ ಹಲವು ಕಾರಣಗಳಿಗೆ ಬಿತ್ತನೆ ಪ್ರದೇಶ ಇಳಿಮುಖವಾಗುತ್ತಲೇ ಇದೆ.

ಜಿಲ್ಲೆಯಲ್ಲಿ ಆಹಾರ ಧಾನ್ಯಗಳ ವಿಸ್ತೀರ್ಣ ಪ್ರದೇಶವು 2018–19ರಲ್ಲಿ 9,48,044 ಹೆಕ್ಟೇರ್‌ ಇತ್ತು. 2022–23ರ ವೇಳೆಗೆ ಅದು 6,79,377 ಹೆಕ್ಟೇರ್‌ಗೆ ತಲುಪಿದೆ. ಐದು ವರ್ಷಗಳಲ್ಲಿ ಅದು ಶೇ 28.38ರಷ್ಟು ಕುಸಿತವಾಗಿದೆ ಎಂದು ಕೃಷಿ ಇಲಾಖೆಯೇ ಒಪ್ಪಿಕೊಂಡಿದೆ.

ಕೃಷಿ ಇಲಾಖೆ ನೀಡಿದ ಮಾಹಿತಿ ಅನ್ವಯ, ಕಬ್ಬು ಬೆಳೆ (ಸಕ್ಕರೆ) ಒಳಗೊಂಡಂತೆ ಆಹಾರ ಪದಾರ್ಥಗಳ ಬೆಳೆ ಪ್ರದೇಶವು 2018–19ರಲ್ಲಿ 9,89,336 ಹೆಕ್ಟೇರ್ ಇತ್ತು. 2023–24ಕ್ಕೆ ಅದು 8,00,215 ಹೆಕ್ಟೇರ್‌ಗೆ ಬಂದು ನಿಂತಿದೆ. ಇದೇ ಅವಧಿಯಲ್ಲಿ 1,10,273 ಹೆಕ್ಟೇರ್‌ ಇದ್ದ ಆಹಾರೇತರ ಬೆಳೆಗಳ ಪ್ರದೇಶವು 3,40,356 ಹೆಕ್ಟೇರ್‌ಗೆ ಏರಿಕೆಯಾಗಿದೆ.

ಉತ್ತರ ಕರ್ನಾಟಕದ ಊಟದಲ್ಲಿ ಬಿಳಿ ಜೋಳದ ಖಡಕ್‌ ರೊಟ್ಟಿಗೆ ಅಗ್ರ ಸ್ಥಾನವಿದೆ. ಜಾನುವಾರುಗಳಿಗೆ ಕಣಿಕಿ ರೂಪದಲ್ಲಿ ಆಹಾರದ ಮೂಲವೂ ಆಗಿದೆ. 2018–19ರಲ್ಲಿ 1.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು. ಅದು, 2020–21ರಲ್ಲಿ 51,134 ಹೆಕ್ಟೇರ್‌ಗೆ ಕುಸಿದು, ಕಳೆದ ವರ್ಷ 62,936 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.

ಜಿಲ್ಲೆಯ ಅಸ್ಮಿತೆಯಾದ ತೊಗರಿ 2019–20ರಲ್ಲಿ 6.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿತ್ತು. 2023–24ಕ್ಕೆ ಅದು 5.77 ಲಕ್ಷಕ್ಕೆ ಕುಸಿಯಿತು. ಉತ್ಪಾದನೆಯ ವೆಚ್ಚ ಹೆಚ್ಚಾಗಿ, ಬೆಲೆಯ ಕುಸಿತದಿಂದ ರೈತರು ತೊಗರಿಗೆ ಬೆನ್ನು ತೋರಿಸಲು ಶುರುಮಾಡಿದ್ದಾರೆ. ಹೀಗಾಗಿ, ಒಂದು ಕೆ.ಜಿ. ತೊಗರಿ ಬೇಳೆ ₹ 180 ದಾಟಿದೆ. ಉತ್ಪಾದನೆಯ ಕುಸಿತದಿಂದ ಬಹುತೇಕ ದಾಲ್‌ಮಿಲ್‌ಗಳು ಸಹ ಬಾಗಿಲು ಹಾಕಿವೆ.

ಆಹಾರ ಧಾನ್ಯಗಳು ಮಾತ್ರವಲ್ಲದೆ ಹಣ್ಣು, ತರಕಾರಿಗಳ ಬಿತ್ತನೆ ಪ್ರದೇಶವೂ ಕುಸಿತವಾಗುತ್ತಿದೆ. ಕಬ್ಬು ಬಿತ್ತನೆ ಪ್ರದೇಶದಲ್ಲಿ ಏರಿಳಿತವಾಗುತ್ತಿದ್ದು, 2018–19ರಲ್ಲಿ 41,619 ಹೆಕ್ಟೇರ್ ಇತ್ತು. 2020–21ರಲ್ಲಿ 27,617 ಹೆಕ್ಟೇರ್‌ಗೆ ಕುಸಿದು, ಮರು ವರ್ಷ 60 ಸಾವಿರ ಹೆಕ್ಟೇರ್ ದಾಟಿತ್ತು. 2022–23ರಲ್ಲಿ 74,441 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಅಂದು 68,183, ಇಂದು 1.49 ಲಕ್ಷ ಹೆಕ್ಟೇರ್
ಆರು ವರ್ಷಗಳ ಹಿಂದೆಯಷ್ಟೇ ಜಿಲ್ಲೆಯ 68,183 ಹೆಕ್ಟೇರ್‌ಗಳಿಗೆ ಸೀಮಿತವಾಗಿದ್ದ ನಾರು ಬೆಳೆಯ ಹತ್ತಿ, ಈಗ (2023–24) 1.49 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿಕೊಂಡಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಸೊಂಪಾಗಿ ಬೆಳೆದು, ಕನಿಷ್ಠ ಮೂರು ಬಾರಿ ಇಳುವರಿ ಕೊಡುವುದರಿಂದ ರೈತರಿಗೂ ಲಾಭದಾಯಕವಾಗಿದೆ. ಖರ್ಚು ಕಡಿಮೆ ಇದ್ದು, ಸಹಜವಾಗಿ ತೊಗರಿಯನ್ನು ಬಿಟ್ಟು ಹತ್ತಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಹತ್ತಿಯ ಬಿತ್ತನೆ ಪ್ರದೇಶ ವೇಗವಾಗಿ ಹಬ್ಬುತ್ತಿದೆ.
ಆಹಾರ ಧಾನ್ಯಗಳ ಬಿತ್ತನೆ ಪ್ರದೇಶವು ಹತ್ತಿ, ಕಬ್ಬಿನಂತಹ ಬೆಳೆಗಳಿಗೆ ವರ್ಗವಾಗಿದ್ದು, ಅವುಗಳು ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಡುತ್ತಿವೆ.
–ಸಮದ್‌ ಪಟೇಲ್, ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT