ಸೋಮವಾರ, ಜನವರಿ 17, 2022
21 °C
ಪಿಡಿಎ ಕಾಲೇಜಿನಲ್ಲಿ ಫ್ಲೆಕ್ಸಿಟ್ರಾನ್ ಸಂಸ್ಥೆ ಸಹಯೋಗದಲ್ಲಿ ಸಂಶೋಧನಾ ಕೇಂದ್ರ

‘ಅಗ್ಗದ ದರದಲ್ಲಿ ಕೃಷಿ ತಂತ್ರಜ್ಞಾನ ಹಂಚಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಅಗ್ಗದ ದರದಲ್ಲಿ ಕೃಷಿ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಉದ್ದೇಶದಿಂದ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಮಾರ್ಟ್ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಪ್ರಕಟಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಉದ್ದೇಶಕ್ಕಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆದ ಫ್ಲೆ‌ಕ್ಸಿಟ್ರಾನ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಹಿರೇಮಠ ಅವರು ಸಹಯೋಗ ನೀಡಲಿದ್ದು, ಈ ಯೋಜನೆಯನ್ನು ಕಾರ್ಯಗತಗೊಳಿಸಲು 50 ಎಕರೆ ಜಮೀನು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಲಾಗುವುದು’ ಎಂದರು.

‘ಪಿಡಿಎ ಎಂಜಿನಿಯರಿಂಗ್ ಕಾಲೇಜು, ಕೃಷಿ ವಿಜ್ಞಾನ ಸಂಸ್ಥೆಗಳು, ಉದ್ಯಮ ಪಾಲುದಾರರು ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಫ್ಲೆಕ್ಸಿಟ್ರಾನ್ ಕಂಪನಿಯ ಸಹಯೋಗದೊಂದಿಗೆ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಅದಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸರ್ಕಾರ ಜಮೀನು ನೀಡದೆ ಹೋದರೂ ಸಂಸ್ಥೆಯ ಜಾಗದಲ್ಲಿ ಪ್ರಯೋಗ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ರಾಜಶೇಖರ ಹಿರೇಮಠ ಮಾತನಾಡಿ, ‘ಸೆನ್ಸರ್ ಆಧರಿತ ಮಾಹಿತಿ ನೀಡುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದ್ದು, ಪ್ರತಿ ಎಕರೆಗೆ ಸುಮಾರು ಐದಾರು ಸಾವಿರ ವೆಚ್ಚದಲ್ಲಿ ಎಂಟು ಸೆನ್ಸರ್‌ಗಳನ್ನು ಅಳವಡಿಸಬಹುದು. ಇದರಿಂದ ರೈತರಿಗೆ ನಿಖರವಾದ ಹವಾಮಾನ ಮಾಹಿತಿ, ಮಣ್ಣು, ನೀರು, ಕೀಟನಾಶಕ ಮತ್ತು ರಸಗೊಬ್ಬರಗಳ ಬಳಕೆ, ನೀರು ಸಂಗ್ರಹ ಮಾಡುವ ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯಬಹುದು. ನಿಖರ ದತ್ತಾಂಶಗಳ ವಿಶ್ಲೇಷಣೆ ಮತ್ತು ಸಂಸ್ಕರಣೆಯು ನೈಸರ್ಗಿಕ ಸಂಪನ್ಮೂಲಗಳ ಮೂಲಕ ನಡೆಯುವುದರಿಂದ ಎಷ್ಟು ಪ್ರಮಾಣದಲ್ಲಿ ಗೊಬ್ಬರ, ಔಷಧ ಬಳಕೆ ಮಾಡಬೇಕು, ಕೀಟಗಳ ನಿರ್ವಹಣೆ ಹೀಗೆ ಪ್ರತಿಯೊಂದನ್ನೂ ನಿಖರವಾಗಿ ತಿಳಿಸಿಕೊಡಲಿದೆ’ ಎಂದು ವಿವರಿಸಿದರು.

ಹೈದರಾಬಾದ್ ಕರ್ನಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಬಸವರಾಜ ಖಂಡೇರಾವ, ಕಾಲೇಜಿನ ಉಪ ಪ್ರಾಚಾರ್ಯ ಡಾ. ಶಶಿಧರ ಕಲಶೆಟ್ಟಿ, ಸಿರಾಮಿಕ್ ವಿಭಾಗದ ಮುಖ್ಯಸ್ಥ ಬಾಬುರಾವ ಶೇರಿಕಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.