ಕಲಬುರ್ಗಿ: 6ನೇ ತರಗತಿ ಸಮಾಜ ವಿಜ್ಞಾನ ವಿಭಾಗ 1ರಲ್ಲಿನ ಪಾಠ 7 ‘ಹೊಸ ಧರ್ಮಗಳ ಉದಯ’ದ ಪುಟ 82, 83ನ್ನು ಕೈಬಿಡುವ ನಿಟ್ಟಿನಲ್ಲಿ ಸಮಿತಿ ರಚಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರಮವನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಓ) ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಚ್.ಎಸ್, ಕಾರ್ಯದರ್ಶಿ ಈರಣ್ಣ ಇಸಬಾ, ‘ಪಠ್ಯಪುಸ್ತಕಗಳಲ್ಲಿ ಕೆಲವು ಪಾಠಗಳನ್ನು ಕಡಿತಗೊಳಿಸಲು ಪರಿಶೀಲನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ’ ಎಂದು ತಿಳಿಸಿದ್ದಾರೆ.
‘ರಾಜ್ಯ ಸರ್ಕಾರದ ಸುತ್ತೋಲೆ ಅನ್ವಯ, ವೈದಿಕ ಧರ್ಮಗಳಲ್ಲಿದ್ದ ದೋಷಗಳಿಂದಾಗಿಯೇ ಹೊಸ ಧರ್ಮಗಳ ಉದಯವಾದವು ಎಂಬ ಸಾರಾಂಶವಿದ್ದ ಈ ಪಾಠವನ್ನು ಸಂಪೂರ್ಣ ಕಿತ್ತು ಹಾಕಲು ಆದೇಶ ನೀಡಿರುವುದು ರಾಜ್ಯ ಸರ್ಕಾರದ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಅವೈಜ್ಞಾನಿಕ ಧೋರಣೆಯಾಗಿದೆ’ ಎಂದು ಅವರು ಹೇಳಿದ್ದಾರೆ.
‘ಇಂತಹುದೇ ಪ್ರಸ್ತಾವಗಳು ಹಿಂದಿನ ಮಂತ್ರಿಮಂಡಲ ಇದ್ದಾಗಿಯೂ ಬಂದಿತ್ತು. ಆದರೆ, ಜನಸಾಮಾನ್ಯರು, ಇತಿಹಾಸಕಾರರು, ವಿಜ್ಞಾನಿಗಳ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಅದನ್ನು ಜಾರಿಗೊಳಿಸದೆ ಹಿಂಪಡೆದಿದ್ದರು. ಈಗ ನೂತನ ಮಂತ್ರಿಮಂಡಲ ರಚನೆಯಾಗುತ್ತಿದ್ದಂತೆಯೇ, ಯಾವ ಗಣ್ಯರ ಅಭಿಪ್ರಾಯಕ್ಕೂ ಗೌರವ ಕೊಡದೇ ಪಠ್ಯಪುಸ್ತಕ ಪರಿಶೀಲನೆಗೆ ಮುಂದಾಗಿರುವುದು ಅತ್ಯಂತ ಹೇಯ ಕೃತ್ಯ’ ಎಂದು ಅವರು ಟೀಕಿಸಿದ್ದಾರೆ.
‘ಒಂದು ಸಮಗ್ರ ಪಠ್ಯದಲ್ಲಿ ಹಲವು ಐತಿಹಾಸಿಕ ಸತ್ಯಗಳು, ವೈಜ್ಞಾನಿಕ ಸತ್ಯಗಳು ಇರಲೇಬೇಕು. ಸತ್ಯವನ್ನು ಮಕ್ಕಳಿಗೆ ಹೇಳಬೇಕು ಮತ್ತು ಇದು ದಶಕಗಳಿಂದಲೂ ನಡೆದು ಬಂದಿರುವ ಪರಿಪಾಠ. ವೇದಗಳಲ್ಲಿ ಕೆಲವು ಧನಾತ್ಮಕ ಅಂಶಗಳೊಂದಿಗೆ, ನ್ಯೂನತೆಗಳು ಸಹ ಇದ್ದವು ಎಂಬುದು ಒಂದು ಐತಿಹಾಸಿಕ ಸತ್ಯ’ ಎಂದು ಅವರು ತಿಳಿಸಿದ್ದಾರೆ.
‘ಈ ನ್ಯೂನತೆಗಳನ್ನು ಹಲವು ವಿಜ್ಞಾನಿಗಳು, ಬರಹಗಾರರು, ಇತಿಹಾಸಕಾರರು, ಅಷ್ಟೇ ಏಕೆ ಮಹಾನ್ ಹಿಂದೂ ಧಾರ್ಮಿಕ ವ್ಯಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ತೋರಿಸಿದ್ದಾರೆ. ಪಠ್ಯಪುಸ್ತಕದಲ್ಲಿ ಹೇಳಲಾಗಿರುವ ಸತ್ಯ ಆಳುವ ವರ್ಗಕ್ಕೆ ಅಥವಾ ಸಂಘ ಪರಿವಾರದ ವಿಚಾರಗಳಿಗೆ ವಿರುದ್ಧವಾಗಿದೆ. ಕೆಲವರ ಭಾವನೆಗೆ ನೋವುಂಟಾಗುತ್ತದೆ ಎಂಬ ನೆಪವೊಡ್ಡಿ, ಪಠ್ಯಪುಸ್ತಕವನ್ನು ತಿರುಚುವ ಹುನ್ನಾರ ಇದಾಗಿದೆ. ಕೂಡಲೇ ಸಮಿತಿಯನ್ನು ವಾಪಸ್ ಪಡೆಯಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.