ಶನಿವಾರ, ಮೇ 21, 2022
23 °C
ಕೆ.ಆರ್.ಐ.ಡಿ.ಎಲ್: ಕಾಮಗಾರಿ ಮಾಡಿಸದೆ ಹಣ ದುರುಪಯೋಗ ಪ್ರಕರಣ

ಅಕ್ರಮ ದೃಢಪಟ್ಟರೂ ಕ್ರಮ ಕೈಗೊಳ್ಳದ ಅಧಿಕಾರಿ

ಮಲ್ಲಿಕಾರ್ಜುನ ಎಚ್. ಮುಡಬೂಳಕರ್ Updated:

ಅಕ್ಷರ ಗಾತ್ರ : | |

ಚಿತ್ತಾಪುರ: 2015-16ನೇ ಸಾಲಿನ ಕೆ.ಕೆ.ಆರ್.ಡಿ ಮ್ಯಾಕ್ರೊ ಯೋಜನೆ ಅನುದಾನದಲ್ಲಿ ಪಟ್ಟಣದ ಕೆಲವು ವಾರ್ಡುಗಳಲ್ಲಿ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿ ಮಾಡಿಸದೆ ಹಣ ದುರುಪಯೋಗ ಮಾಡಿಕೊಂಡಿರುವುದು ತನಿಖೆಯಿಂದ ದೃಢಪಟ್ಟಿದ್ದರೂ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

'ಚಿತ್ತಾಪುರ: ಎಚ್.ಕೆ.ಆರ್.ಡಿ.ಬಿ ಮ್ಯಾಕ್ರೊ ಯೋಜನೆಯಲ್ಲಿ ಅವ್ಯವಹಾರ, ಕಾಮಗಾರಿ ಮಾಡದೆ ₹2.40 ಕೋಟಿ ದುರ್ಬಳಕೆ' ಶೀರ್ಷಿಕೆಯಡಿ ಆಗಸ್ಟ್ 5,2019ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಅಧಿಕಾರಿಗಳ ಮತ್ತು ಸರ್ಕಾರದ ಗಮನ ಸೆಳೆಯಲಾಗಿತ್ತು.

ಕೆ.ಕೆ.ಆರ್.ಡಿ.ಬಿ ₹2.40 ಕೋಟಿ ಮಂಜೂರು ಮಾಡಿತ್ತು. ಕಾಮಗಾರಿ ಜವಾಬ್ದಾರಿಯನ್ನು ಕೆ.ಆರ್.ಐ.ಡಿ.ಎಲ್ ನಿಗಮಕ್ಕೆ ವಹಿಸಲಾಗಿತ್ತು. ವಾರ್ಡ್ ಸಂಖ್ಯೆ 7, 8, 11, 22, 23 ರಲ್ಲಿ ಕಾಮಗಾರಿ ಮಾಡಿಸದೆ ಹಣ ಖರ್ಚು ಮಾಡಿರುವ ಕುರಿತು ಕೆ.ಕೆ.ಆರ್.ಡಿ.ಬಿ ತಾಂತ್ರಿಕ ಶಾಖೆಯಿಂದ ಸ್ಥಳ ಪರಿಶೀಲನೆ ಮಾಡಿದ ಸ್ಪಷ್ಟ ಉಲ್ಲೇಖದೊಂದಿಗೆ ತನಿಖಾ ವರದಿಯನ್ನು ಸೆ.16, 2019  ರಂದು ನೀಡಲಾಗಿದೆ.

ಅಕ್ಟೋಬರ್.1, 2019 ರಂದು ಕೆ.ಕೆ.ಆರ್.ಡಿ.ಬಿ ಉಪ ಕಾರ್ಯದರ್ಶಿಯು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ಚಿತ್ತಾಪುರ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಕಾಮಗಾರಿ ಮಾಡಿಸದೆ ಹಣ ಬಳಸಿಕೊಂಡಿದ್ದು ದೃಢಪಟ್ಟಿದೆ. ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಎಫ್.ಐ.ಆರ್ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.

ಅಕ್ಟೋಬರ್ 9 ರಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು, ಕಾಮಗಾರಿಯು ಚಿತ್ತಾಪುರ ಪುರಸಭೆ ವ್ಯಾಪ್ತಿಗೆ ಬರುತ್ತದೆ. ಅವರೇ ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಹೇಳುವ ಮೂಲಕ ಪ್ರಕರಣ ದಾಖಲಿಸಲು ಹಿಂದೆ ಸರಿದಿದ್ದಾರೆ.

ಅಕ್ಟೋಬರ್ 19 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆ.ಕೆ.ಆರ್.ಡಿ.ಬಿ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಚಿತ್ತಾಪುರದ ವಾರ್ಡುಗಳಲ್ಲಿ ಕಾಮಗಾರಿ ಮಾಡಿಸದೆ ಹಣ ಖರ್ಚು ಮಾಡಿರುವ ಕುರಿತು ಚರ್ಚೆಯಾಗಿದೆ. ಕೆ.ಆರ್.ಐ.ಡಿ.ಎಲ್ ನಿವೃತ್ತ ಎಇಇ ಬಿ.ಎಸ್ ಪಾಟೀಲ್ ಹಾಗೂ ಎಇ ಬಿ.ಕೆ ರಾಠೋಡ್ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ತೀರ್ಮಾನಿಸಿದ ಸಭಾ ನಡಾವಳಿ ದಾಖಲೆಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ.

ಆದರೆ ಅನುದಾನ ನೀಡಿರುವ ಕೆ.ಕೆ.ಆರ್.ಡಿ.ಬಿ ಉಪ ಕಾರ್ಯದರ್ಶಿಯು ಪೊಲೀಸ್ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿಗೆ ಎಫ್.ಐ.ಆರ್ ದಾಖಲಿಸಲು ನಿರ್ದೇಶಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಅವ್ಯವಹಾರ ಮುಚ್ಚಿ ಹಾಕುವ ತಂತ್ರಗಾರಿಕೆ ಎನ್ನುವ ಆರೋಪದ ಮಾತುಗಳು ಕೇಳಿ ಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು