ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ತಾಳೆಗರಿ, ಕಾಗದ ಹಸ್ತಪ್ರತಿಗಳ ಡಿಜಿಟಲೀಕರಣ

ಗುಲಬರ್ಗಾ ವಿವಿಯ 326 ತಾಳೆಗರಿ ಕಟ್ಟು, 1,956 ಕಾಗದ ಹಸ್ತಪ್ರತಿಗಳಿಗೆ ಹೊಸ ಸ್ವರೂಪ
Published 28 ಮಾರ್ಚ್ 2024, 5:41 IST
Last Updated 28 ಮಾರ್ಚ್ 2024, 5:41 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿರುವ ತಾಳೆಗರಿ (ತಾಡೋಲೆ) ಮತ್ತು ಕಾಗದ ಹಸ್ತಪ್ರತಿಗಳನ್ನು ಡಿಜಿಟಲ್‌ ರೂಪಕ್ಕೆ ಪರಿವರ್ತಿಸಲಾಗುತ್ತಿದೆ.

ಬೆಂಗಳೂರಿನ ಇ–ಸಾಹಿತ್ಯ ದಾಖಲೀಕರಣ ಸಂಶೋಧನಾ ಅಧ್ಯಯನ ಕೇಂದ್ರವು ಶುಲ್ಕರಹಿತವಾಗಿ ಹಸ್ತಪ್ರತಿಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿದೆ. ಹಸ್ತಪ್ರತಿ ಭಂಡಾರದಲ್ಲಿ ಸುಮಾರು 250 ವರ್ಷಗಳ ಹಳೆಯದಾದ 326 ತಾಳೆಗರಿಯ ಕಟ್ಟುಗಳು, 1,956 ಕಾಗದದ ಹಸ್ತಪ್ರತಿಗಳಿದ್ದು, 6,089 ಶೀರ್ಷಿಕೆಯ ಕೃತಿಗಳು ಡಿಜಿಟಲ್‌ನಲ್ಲಿ ಲಭ್ಯವಾಗಲಿವೆ.

ಇಲ್ಲಿ ವೀರಶೈವಕ್ಕೆ ಸಂಬಂಧಿಸಿರುವ ಹೆಚ್ಚಿನ ಕೃತಿಗಳಿವೆ. ಅದರ ಜತೆಗೆ ಆಯುರ್ವೇದ, ಪುರಾಣಗಳು, ಕಾವ್ಯಗಳು, ಶಾಸನಗಳು, ಮಠ– ಮಾನ್ಯಗಳ ಕುರಿತ ಕೃತಿಗಳೂ ಇವೆ. ವೀರಶೈವ ಬಗೆಗಿನ ಉದ್ಧರಣ ಪಟಲಗಳು, ಹುಣಸೆ ಹಣ್ಣಿನ ಸಿಪ್ಪೆ ಮತ್ತು ಇದ್ದಲಿ ಮಸಿಯಿಂದ ನಿರ್ಮಿತವಾದ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಕಡತಗಳು ಸ್ಥಾನ ಪಡೆದಿವೆ.

‘ತಾಳೆಗರಿ ಮತ್ತು ಕಾಗದ ಹಸ್ತಪ್ರತಿಗಳು ಕಲ್ಯಾಣ ಕರ್ನಾಟಕ ಭಾಗದ ಕತೆಯನ್ನು ಕಟ್ಟಿಕೊಡುತ್ತವೆ. ಆಗಿನ ಕಾಲಘಟ್ಟದಲ್ಲಿನ ನಮ್ಮ ಹಿರಿಯರು ಬಿಟ್ಟು ಹೋದ ಜ್ಞಾನ ಸಂಪತ್ತಿದು. ಪ್ರಾಚ್ಯ ಸಂಪತ್ತಿನ ಸಂರಕ್ಷಣಾ ಕಾರ್ಯದ ಜತೆಗೆ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಬಹು ಅಗತ್ಯವಾಗಿದೆ. ಡಿಜಿಟಲ್‌ ರೂಪಕ್ಕೆ ಪರಿವರ್ತಿಸಿ ಸಾಹಿತ್ಯಾಸಕ್ತರು ಮತ್ತು ಸಂಶೋಧಕರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್‌.ಟಿ.ಪೋತೆ.

ಡಿಜಿಟಲೀಕರಣ ಹೇಗೆ? ಹಸ್ತಪ್ರತಿಗಳ ಕಟ್ಟುಗಳ ಸ್ವಚ್ಛತೆ ಬಹು ಸೂಕ್ಷ್ಮವಾದ ಕೆಲಸ. ದೂಳು ತೆಗೆದು ತಾಳೆಗರಿಗಳ ಪ್ರತಿಗಳಿಗೆ ಸಿಟ್ರೊನೆಲ್ ಹಾಗೂ ಲೆಮೊನ್‌ಗ್ರಾಸ್ ಎಣ್ಣೆ ಹಚ್ಚಿ, ಮೃದವಾದ ಬಟ್ಟೆಯಿಂದ ಒರೆಸಲಾಗುತ್ತದೆ. ಪ್ರತಿಗಳನ್ನು ಪುಟದ ಸಂಖ್ಯೆಗಳಿಗೆ ಅನುಗುಣವಾಗಿ ಜೋಡಿಸಿ ಒಂದೊಂದೇ ಗರಿಯನ್ನು ಸ್ಕ್ಯಾನ್‌ ಮಾಡಿ, ಅಪ್‌ಲೋಡ್‌ ಮಾಡಲಾಗುತ್ತದೆ.

‘ಕಳೆದ ಮೂರು ದಿನಗಳಲ್ಲಿ ತಾಳೆಗರಿಯ 50 ಕಟ್ಟುಗಳನ್ನು ಸ್ಕ್ಯಾನ್‌ ಮಾಡಿ, ಅಪ್‌ಲೋಡ್ ಮಾಡಲಾಗಿದೆ. 326 ತಾಳೆಗರಿಯ ಕಟ್ಟುಗಳು ಹಾಗೂ 1,956 ಕಾಗದ ಹಸ್ತಪ್ರತಿಗಳ ಸಂಪೂರ್ಣ ಡಿಜಿಟಲೀಕರಣಕ್ಕೆ ಸುಮಾರು ಒಂದು ತಿಂಗಳು ತೆಗೆದುಕೊಳ್ಳಲಿದೆ. ನಮ್ಮ ಸಿಬ್ಬಂದಿಯ ಜತೆಗೆ ಕನ್ನಡ ಅಧ್ಯಯನ ಸಂಸ್ಥೆಯ 10 ವಿದ್ಯಾರ್ಥಿಗಳು ನೆರವಾಗುತ್ತಿದ್ದಾರೆ’ ಎಂದು ಇ–ಸಾಹಿತ್ಯ ದಾಖಲೀಕರಣ ಸಂಶೋಧನಾ ಅಧ್ಯಯನ ಕೇಂದ್ರದ ಮುಖ್ಯಸ್ಥ ಅಶೋಕ ದೊಮ್ಮಲೂರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವೆಲ್ಲ ಕೃತಿಗಳಿವೆ?: ನಾಮಲಿಂಗಾನುಶಾಸನ, ಕರ್ನಾಟಕ ದಾತು, ಚೇರಮಾಂಕನ ಕಾವ್ಯದ ನಾಂದ್ಯ, ಲಿಂಗಪುರಾಣದ ನಾಂದ್ಯ, ಸೌಂದರ ಪುರಾಣದ ನಾಂದ್ಯ, ಬಸವೇಶ್ವರ ಪುರಾಣದ ನಾಂದ್ಯ, ಸಿದ್ಧೇಶ್ವರ ಪುರಾಣದ ಭಾಮಿನಿಪದ, ಭಾಷಾ ಮಂಜರಿಯ ಟೀಕು, ಹರಿಹರನ ಗಿರಿಜಾ ಕಲ್ಯಾಣದ ಪದ್ಯಗಳು, ರಾಘವಾಂಕನ ಕಾವ್ಯ, ಕಾಲಜ್ಞಾನದ ವಚನಗಳು, ಅಮರಸಿಂಹನಿ ನಿಘಂಟು, ಶಬ್ದಮಣಿ ದರ್ಪಣ, ರುದ್ರೋಪನಿಷತ್, ಅವಧೂತ ಗೀತೆ, ಶಿವಕವಚ, ವೀರಶೈವ ವಿವಾಹ ಕ್ರಮ ಸೇರಿದಂತೆ ಸಾವಿರಾರು ಶೀರ್ಷಿಕೆಯ ಕೃತಿಗಳು ಡಿಜಿಟಲೀಕರಣಕ್ಕೆ ಒಳಪಡುತ್ತಿವೆ.

ಡಿಜಿಟಲೀಕರಣವಾದ ತಾಳೆಗರಿ ಕಾಗದ ಹಸ್ತಪ್ರತಿಗಳನ್ನು ವಿಶ್ವವಿದ್ಯಾಲಯದ ಗ್ರಂಥಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಜಗತ್ತಿನ ಯಾವುದೇ ಮೂಲೆಯಿಂದಲೂ ಓದಿ ಅಧ್ಯಯನ ಮಾಡಬಹುದು
ಪ್ರೊ. ಎಚ್‌.ಟಿ.ಪೋತೆ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ
ಅಧ್ಯಯನ ಕೇಂದ್ರ ಡಿಪ್ಲೊಮಾ ಕೋರ್ಸ್ ಸ್ಥಾಪನೆಗೆ ಚಿಂತನೆ
‘ರಾಜ್ಯದ ಬೇರೆ ಕಡೆಗಳಲ್ಲಿನ ತಾಳೆಗರಿ ಮತ್ತು ಕಾಗದ ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ ಗುಲಬರ್ಗಾ ವಿವಿಯಲ್ಲಿ ಅಧ್ಯಯನ ಕೇಂದ್ರ ಹಾಗೂ ಡಿಪ್ಲೊಮಾ ಕೋರ್ಸ್ ಸ್ಥಾಪಿಸುವ ಚಿಂತನೆ ಇದೆ’ ಎಂದು ವಿವಿಯ ಕುಲಪತಿ ಪ್ರೊ. ದಯಾನಂದ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮ್ಮ ಭಾಗದಲ್ಲಿ ಸಿಕ್ಕಂತಹ ಬಸವ ಪುರಾಣ ಶರಣ ಸಾಹಿತ್ಯ ವಚನ ಸಾಹಿತ್ಯದ ಹಸ್ತಪ್ರತಿಗಳಲ್ಲಿ ಹಾಗೂ ಬೇರೆ ಕಡೆ ಲಭ್ಯವಾದ ಹಸ್ತಪ್ರತಿಗಳಲ್ಲಿ ಏನೆಲ್ಲಾ ವತ್ಯಾಸ ಹೊಸತನ ಇದೆ ಎಂಬುದರ ಅಧ್ಯಯನ ಸಂಶೋಧನೆಗಳು ನಡೆಯಬೇಕು. ಜತೆಗೆ ಹಸ್ತಪ್ರತಿಗಳನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಿ ಓದುವಂತೆ ಮಾಡಲು ಡಿಪ್ಲೊಮಾ ಕೋರ್ಸ್ ಆರಂಭಿಸಲಾಗುವುದು. ಇದಕ್ಕಾಗಿ ಅನುದಾನ ನೀಡುವಂತೆ ಕೆಕೆಆರ್‌ಡಿಬಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು. ‘ಹಸ್ತಪ್ರತಿಗಳ ಭಂಡಾರಕ್ಕಾಗಿ ಪ್ರತ್ಯೇಕ ಜಾಗ ಗುರುತಿಸಿ ಸಂರಕ್ಷಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT