ಕಲಬುರಗಿ: ‘ಕಳೆದ 60 ವರ್ಷಗಳಿಂದ ಎಸ್‌ಎಸ್‌ಎಲ್ ಕಾನೂನು ಕಾಲೇಜು ಅತ್ಯುತ್ತಮ ಶಿಕ್ಷಣ ನೀಡುತ್ತಿದೆ. ಅನೇಕ ಸಾಧಕರನ್ನು ಹುಟ್ಟುಹಾಕಿದೆ. ಇಲ್ಲಿ ಕಲಿತವರು ವಕೀಲರು, ನ್ಯಾಯಾಧೀಶರು ಆಗಿದ್ದಾರೆ’ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಬಸವರಾಜ ಚೇಂಗಟಿ ಹೇಳಿದರು.
ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ್ ಶಂಕರಲಾಲ್ ಲಾಹೋಟಿ ಕಾನೂನು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ಎಲ್.ಎಲ್.ಬಿ ಐದು ಮತ್ತು ಮೂರು ವರ್ಷಗಳ ಕಾನೂನು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಅವರು ಈ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರ ಕೈನಲ್ಲಿ ಕಲಿತ ಅನೇಕರು ಇಂದು ದೊಡ್ಡ ದೊಡ್ಡ ಸ್ಥಾನದಲ್ಲಿದ್ದಾರೆ. ಸಾಧಕರ ಹಾದಿಯಲ್ಲಿ ನಾವು ಸಾಗಬೇಕಾಗಿದೆ’ ಎಂದರು.
ಹೈಕೋರ್ಟ್ ವಕೀಲ ಅಶೋಕ್ ಬಿ. ಮೂಲಗೆ ಮಾತನಾಡಿ, ‘ನಾನು ಇದೇ ಕಾಲೇಜಿನಲ್ಲಿ ಕಲಿತು ಇದೇ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿ ತಂದಿದೆ. ವಕೀಲರು ಹಣಕ್ಕಾಗಿ ಕ್ಲೈಂಟ್ ಮತ್ತು ಕೇಸ್‌ಗಳನ್ನು ಕಳೆದುಕೊಳ್ಳಬಾರದು’ ಎಂದರು.
ಅಂತಿಮ ವರ್ಷದ ವಿದ್ಯಾರ್ಥಿಗಳಾದ ಗಣೇಶ್ ಪಾಟೀಲ, ಗಿರೀಶ್ ಸೇರಿದಂತೆ ಅನೇಕರು ಅನುಭವ ಹಂಚಿಕೊಂಡರು. ಈ ವೇಳೆ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ, ಎನ್.ಎಸ್.ಎಸ್ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ನೀಡಲಾಯಿತು.
ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ರಾಜ ಬಿ.ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಕೈಲಾಸ್ ಬಿ.ಪಾಟೀಲ, ನಾಗಣ್ಣ ಗಂಟಿ, ಜ್ಯೋತಿ ಎಸ್.ಕಡಾದಿ, ಜ್ಯೋತಿ ಅಂಗರಕಿ, ಸವಿತಾ ಆರ್.ಗಿರಿ ಉಪಸ್ಥಿತರಿದ್ದರು.
ಭೂಮಿಕಾ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಕಾಲೇಜಿನ ಪ್ರಾಂಶುಪಾಲ ಮಹೇಶ್ವರಿ ಎಸ್.ಹಿರೇಮಠ ಸ್ವಾಗತಿಸಿದರು. ಮೃಣಾಲಾ ಅತಿಥಿಗಳ ಪರಿಚಯ ಮಾಡಿದರು. ಶ್ರೇಯಾ ನಿರೂಪಿಸಿದರು. ಉಪನ್ಯಾಸಕಿ ಕರುಣಾ ಎಸ್.ಪಾಟೀಲ ವಂದಿಸಿದರು.